ಗೌರಿಬಿದನೂರು ನಗರ ಹಾಗೂ ಗ್ರಾಮಾಂತರದಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಮಾಡಿದ್ದಂತಹ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಅಬ್ಬಾಸ್ ಮುನೀರ್ ಇರಾನಿ, ಅಬ್ಬಾಸ್ ಜಾಜ್ ಇರಾನಿ, ಜಾವೀದ್ ಜಹಾಂಗೀರ್ ಇರಾನಿ, ಗೌರಿಬಿದನೂರು ತಾಲೂಕಿನ ಹಿರೇಬಿದನೂರು ಗ್ರಾಮದ ಮೆಹಬೂಬ್ ಬಾಷಾ ಎಂದು ತಿಳಿದು ಬಂದಿದೆ. ಇನ್ನೂ ಬಂಧಿತರಿಂದ 143 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿಕೊಂಡು ನಾಲ್ಕು ಜನ ಆರೋಪಿಗಳು ಎಸ್ಕೇಪ್ ಆಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿದ್ದು, ಇನ್ನೂ ಸರಗಳ್ಳತನ ಹಾಗೂ ಮನೆಗಳ್ಳತನ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿ ತನಿಖೆಯನ್ನು ಶುರು ಮಾಡಿದ್ದರು.
ಇನ್ನೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಖಚಿತ ಮಾಹಿತಿ ಮೇರೆಗೆ ಗೌರಿಬಿದನೂರು ತಾಲೂಕಿನ ಹೀರೆಬಿದನೂರು ಗ್ರಾಮದ ನಿವಾಸಿ ಮೆಹಬೂಬ್ ಪಾಷಾ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಇರಾನಿ ಗ್ಯಾಂಗ್ ಕಳ್ಳತನದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಅದರಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದು ಸರಗಳ್ಳತನ ಹಾಗೂ ಮನೆಗಳ್ಳತನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.