ಸರ್ಕಾರ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯ ಸಲ್ಲದು: ಸಚಿವ ಕೆ.ಹೆಚ್.ಮುನಿಯಪ್ಪ

ಸರ್ಕಾರಿ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಭಿವೃದ್ದಿಪರ ಕಾರ್ಯಕ್ರಮಗಳಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಜನಸಾಮಾನ್ಯರಿಗೆ ಸೌಲಭ್ಯಗಳು ಪಾರದರ್ಶಕವಾಗಿ, ಜವಾಬ್ದಾರಿಯುತವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು. ಯಾವುದೇ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಾಗ ಜನಪ್ರತಿನಿಧಿಗಳ ಗಮನಕ್ಕೆ ತಂದು ಪ್ರತಿಯೊಬ್ಬರಿಗೂ ತಲುಪುವಂತೆ ಕೆಲಸ ಮಾಡಬೇಕು ಎಂದರು.

ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ತಿಳಿಸಿದರು.

ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಸಮಸ್ಯೆ, ಸ್ಮಶಾನ ಸಂಪರ್ಕಿಸುವ ರಸ್ತೆ ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆ ಹರಿಸಿಬೇಕು ಎಂದರು.

ಬಡವರಿಗೆ ಮನೆ ಕಲ್ಪಿಸಲು, ನಿವೇಶನ ಹಂಚಲು ಕ್ರಮ ವಹಿಸಲಾಗುವುದು. ಈಗಾಗಲೇ ಜಿಲ್ಲೆಯ ಹಲವು ಭಾಗಗಳಲ್ಲಿ ನಿವೇಶನಕ್ಕಾಗಿ ಜಾಗ ಗುರ್ತಿಸಿಲಾಗಿದೆ. ಶೀಘ್ರವೇ ನಿವೇಶನಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಪ್ರತಿ ವರ್ಷ ಅರಣ್ಯ ಇಲಾಖೆಯವರು ಸಾವಿರಾರು ಸಸಿಗಳನ್ನು ನೆಡುತ್ತಾರೆ. ಆದರೆ ಅದನ್ನು ಪೋಷಿಸಿ ಬೆಳೆಸುವಲ್ಲಿ ಗಮನಹರಿಸುತ್ತಿಲ್ಲ. ಸಸಿಗಳನ್ನು ಎಲ್ಲೆಂದರಲ್ಲಿ ನೆಡಬಾರದು ಬದಲಾಗಿ, ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಜಮೀನುಗಳಲ್ಲಿ ಹಾಗೂ ಗ್ರಾಮ ಠಾಣಾಗಳಲ್ಲಿ ನೆಡಬೇಕು. ಸಸಿ ನೆಟ್ಟ ನಂತರ ಕನಿಷ್ಠ ಮೂರು ವರ್ಷಗಳವರೆಗೆ ಪೋಷಿಸಿ ಬೆಳೆಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯಪುರದ ಪಟ್ಟಣದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಗೆ ಹೋಗಲು ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ, ಸುತ್ತಲು ಕಾಂಪೌಂಡ್ (ಬೇಲಿ) ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಒಂದು ವಾರದೊಳಗೆ ರಸ್ತೆ ಸಂಪರ್ಕ ಕಲ್ಪಿಸಿ, ಶಾಲೆ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲು ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯುತ್ ಸಮಸ್ಯೆ, ಭೂ ಸ್ವಾಧೀನ ಪರಿಹಾರ ಹಣ, ಘನತ್ಯಾಜ್ಯ ವಿಲೇವಾರಿ, ಹಕ್ಕುಪತ್ರ ವಿವರಣೆ, ನಿವೇಶನ ಹಂಚಿಕೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಶೀಘ್ರ ಕ್ರಮವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ 83 ಅರ್ಜಿಗಳನ್ನು ಸ್ವೀಕರಿಸಿದ್ದು ಅದರಲ್ಲಿ ಕಂದಾಯ ಇಲಾಖೆಯ 53 ಅರ್ಜಿಗಳು, ಜಿಲ್ಲಾ ಪಂಚಾಯತಿಯ 27 ಅರ್ಜಿಗಳು,ನಗರಸಭೆಯ 3 ಅರ್ಜಿಗಳನ್ನು ಖುದ್ದಾಗಿ ಸ್ವೀಕರಿಸಿ ತಕ್ಷಣ ಅವುಗಳನ್ನು ಇತ್ಯರ್ಥ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

*ಅನ್ನಭಾಗ್ಯ* :

ಜಿಲ್ಲೆಯಲ್ಲಿ ಒಟ್ಟು 2,29,390 ಬಿ.ಪಿ.ಎಲ್‌ ಪಡಿತರ ಕುಟುಂಬಗಳಿದ್ದು, ಒಟ್ಟು 738864 ಅರ್ಹ ಸದಸ್ಯರಿರುತ್ತಾರೆ. ಇಲ್ಲಿವರೆಗೆ ಅನ್ನಭಾಗ್ಯ ಯೋಜನೆಯಡಿ ರೂ. 12,19,37,430/- ಗಳನ್ನು DBT ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.

*ಯುವನಿಧಿ:*
ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 2094 ಅರ್ಜಿಗಳು ಸ್ವೀಕೃತವಾಗಿದ್ದು ಸರ್ಕಾರ ಮಾರ್ಗಸೂಸಿಯಂತೆ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗುತ್ತಿದೆ.

*ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ:*

ಪ್ರಸ್ತುತ ವರ್ಷ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದ್ದು, ಈ ಜಿಲ್ಲೆಯಲ್ಲಿ ಜಾನುವಾರುಗಳಿಗೆ 267934 ಮೆಟ್ರಿಕ್‌ ಟನ್‌ ಮೇವು ಲಭ್ಯವಿದ್ದು, ಇನ್ನು ಸುಮಾರು 31 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿರುತ್ತದೆ.

ಪಶುಪಾಲನೆ ಇಲಾಖೆಯಿಂದ 58126 ಮೇವಿನ ಕಿರು ಪೊಟ್ಟಣ ಹಾಗೂ ಕೆ.ಎಂ.ಎಪ್‌ ನಿಂದ 40011 ಮೇವಿನ ಕಿರು ಪೊಟ್ಟಣ ಒಟ್ಟು 98137 ಮೇವಿನ ಕಿರು ಪೊಟ್ಟಣಗಳನ್ನು ನೀರಾವರಿ ಹೊಂದಿರುವ ರೈತರಿಗೆ ಉಚಿತವಾಗಿ ವಿತರಿಸಲಾಗಿದೆ.

*ಕುಡಿಯುವ ನೀರು:*

ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳಿನ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈಗಾಗಲೇ 43 ಗ್ರಾಮ ಪಂಚಾಯಿತಿಗಳಿಂದ 68 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಿ, ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಈಗಾಗಲೇ 180 ಖಾಸಗಿ ವ್ಯಕ್ತಿಗಳ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ ಹಾಗೂ ತುರ್ತಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್‌ಗಳ ಮೂಲಕ ತಕ್ಷಣ ನೀರು ಸರಬರಾಜು ಮಾಡಲು ಸನ್ನದ್ದವಾಗಿರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಒಟ್ಟಾರೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಹಾಗೂ ಪ್ರತಿ ತಾಲ್ಲೂಕಿಗೂ 25.00 ಲಕ್ಷ ರೂ ಗಳ ಕೊಳವೆ ಬಾವಿ ಕೊರೆಯಲು ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು ಅಗತ್ಯ ಕ್ರಮ ವಹಿಸಲಾಗುತ್ತಿದೆ.

*ವಸತಿ ಯೋಜನೆ (ಗ್ರಾಮೀಣ)*

2010-11 ಸಾಲಿನಿಂದ 2022-23 ನೇ ಸಾಲಿನ ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಿವಿಧ ವಸತಿ ಯೋಜನೆಗಳ ಅನುಷ್ಟಾನಕ್ಕಾಗಿ ಒಟ್ಟು 35846 ಮನೆಗಳು ಮಂಜೂರಾಗಿದ್ದು, ಇಲ್ಲಿಯವರೆಗೆ 29850 ಮನೆಗಳನ್ನು ಪೂರ್ಣಗೊಳಿಸಿ ಶೇ.83.27 ರಷ್ಟು ಸಾಧನೆ ಮಾಡಲಾಗಿದೆ.

ವಸತಿ ಯೋಜನೆಯಡಿ ನಿವೇಶನ ರಹಿತ ಕುಟುಂಬಗಳನ್ನು ಈಗಾಗಲೇ ಗುರುತಿಸಿದ್ದು, ಈ ಜಿಲ್ಲೆಯಲ್ಲಿ ಒಟ್ಟು 22310 ಫಲಾನುಭವಿಗಳಿರುತ್ತಾರೆ. ಇವರಿಗೆ ನಿವೇಶಗಳನ್ನು ಒದಗಿಸಲು 464 ಎಕರೆ 38 ಗುಂಟೆ ಜಮೀನನ್ನು ಕಾಯ್ದಿರಿಸಲಾಗಿದೆ.

ಇಲ್ಲಿಯವರೆಗೆ ಆಶ್ರಯ ನಿವೇಶನ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಕಾಯ್ದಿರಿಸಿರುವ ಒಟ್ಟು 464.38 ಎಕರೆ ಜಮೀನಿನ ಪೈಕಿ 62.18 ಎಕರೆ ಜಮೀನಿನಲ್ಲಿ ಒಟ್ಟು 1679 ನಿವೇಶನ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಕೋರಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇಲ್ಲಿಯವರೆಗೆ 45.30 ಎಕರೆ ಪ್ರದೇಶದಲ್ಲಿ ಒಟ್ಟು 1116 ನಿವೇಶನಗಳನ್ನು ರಚಿಸಲು ರಾಜೀವ್‌ಗಾಂಧಿ ವಸತಿ ನಿಗಮದಿಂದ ಅನುದಾನ ಬಿಡುಗಡೆ ಮಾಡಿ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿರುತ್ತದೆ. ಉಳಿದ ಜಮೀನಿನನಲ್ಲಿ ಅರ್ಹ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲಾಗುತ್ತಿದೆ.

*ನರೇಗಾ:*
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 14.00 ಲಕ್ಷ ಮಾನವ ದಿನಗಳ ಗುರಿ ಹೊಂದಿದ್ದು, ಮೇ-2024ರ ಅಂತ್ಯಕ್ಕೆ 3.647 ಲಕ್ಷಗಳ ಮಾನವ ದಿನಗಳನ್ನು ಸೃಜನೆ ಮಾಡಲಾಗಿದ್ದು, ಸಂಚಿತ ಗುರಿಗೆ ಶೇಕಡ. 154.91% ರಷ್ಟು ಮಾನವ ದಿನಗಳನ್ನು ಸೃಜಿಸಿದ್ದು, ಆರ್ಥಿಕವಾಗಿ 1531.59 ಲಕ್ಷಗಳ ಪ್ರಗತಿ ಸಾಧಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬರಗಾಲ ಘೋಷಿತ ಜಿಲ್ಲೆಯಾಗಿದ್ದು, ಗೋಕಟ್ಟೆ, ಕುಂಟೆ, ಕೆರೆ, ಕಲ್ಯಾಣಿ, ಕೃಷಿಹೊಂಡ, ಬದು ನಿರ್ಮಾಣ, ನಾಲಾ ಅಭಿವೃದ್ಧಿ, ಚೆಕ್ ಡ್ಯಾಂ. ಮತ್ತು ಸಸಿ ನೆಡುವಂತಹ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಪೂರ್ಣಗೊಳಿಸುವ ಕೆಲಸ ನಡೆಯುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಮೃತ ಸರೋವರ ಕಾರ್ಯಕ್ರಮದಡಿ ಒಟ್ಟು 158 ಕೆರೆ/ಗೋಕಟ್ಟೆಗಳನ್ನು ನಿರ್ಮಿಸಲಾಗಿದೆ.

ಸ್ಮಶಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 679 ಸ್ಮಶಾನಗಳನ್ನು ಗುರುತಿಸಲಾಗಿದ್ದು. ಇದುವರೆಗೆ 207 ಸ್ಮಶಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಮತ್ತು ಈ ಜಿಲ್ಲೆಯಲ್ಲಿನ ಎಲ್ಲಾ ಗ್ರಾಮಗಳಿಗೂ ಸಾರ್ವಜನಿಕ ಸ್ಮಶಾನವನ್ನು ಕಲ್ಪಿಸಿಕೊಡಲಾಗಿದೆ.

*ಕೃಷಿ ಇಲಾಖೆ:*
2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 99593 ಅರ್ಜಿದಾರರಿಗೆ ರೂ 29,48,64,884/- ಗಳನ್ನು ಬೆಳೆಹಾನಿಗೆ ಬರ ಪರಿಹಾರ ವಿತರಣೆ ಮಾಡಲಾಗಿದೆ.

*ಪೋಡಿಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿ*

ಪೋಡಿ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು. ಸಂಬಂಧಪ್ಟ ಅಧಿಕಾರಿಗಳನ್ನು ಒಳಗೊಂಡ ನಾಲ್ಕು ತಾಲೂಕುಗಳಲ್ಲಿ ತ೦ಡಗಳನ್ನು ರಚಿಸಬೇಕು. ಪೂರಕ ದಾಖಲೆಗಳ ಇರುವ ಜಮೀನುಗಳನ್ನು ಮೊದಲು ಸರ್ವೆ ಕಾರ್ಯ ನಡೆಸಿ ಹದ್ದುಬಸ್ತು ಮಾಡಬೇಕು. ಕೆಲವು ಭಾಗಗಳಲ್ಲಿ ಕಡತಗಳು ನಾಪತ್ತೆ ಆಗಿರುವುದರಿಂದ ಹಿನ್ನಡೆ ಆಗುತ್ತಿದೆ. ಕಡತ ಇರುವ ಪ್ರಕರಣಗಳಲ್ಲಿ ಪೋಡಿಮುಕ್ತ ಮಾಡಲು ಆದ್ಯತೆ ಮೇರೆಗೆ ಮಾಡಲಾಗುತ್ತಿದೆ. ಸಾಗುವಳಿ ಚೀಟಿ ಇರುವ ಪ್ರಕರಣಗಳನ್ನು ಎರಡನೇ ಹoತದಲ್ಲಿ ಮಾಡಲಾಗುವುದು. ತಹಶೀಲ್ದಾರ್ ಗಳಿಗೆ ಗುರಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾಲಮಿತಿಯೊಳಗೆ ತ್ವರಿತಗತಿಯಲ್ಲಿ ಮುಗಿಸಿ ಜನರು ಅಲೆದಾಡಬಾರದು ಜಿಲ್ಲಾಧಿಕಾರಿ ಅವರು ಇದರ ಬಗ್ಗೆ ನಿಗಾ ವಹಿಸಬೇಕು. ಪೋಡಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಧಿಕಾರಿಗಳಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಸಚಿವರು ಹೇಳಿದರು.

ಹಾಲಿ ಸರ್ಕಾರಿ ರಸ್ತೆಗಳು, ಕಾಲುದಾರಿ, ಬಂಡಿ ದಾರಿ, ರಾಜ ಕಾಲುವೆಗಳ ಒತ್ತುವರಿಗೆ ಸಂಬಂಧಿಸಿದಂತೆ ಬಂದಿರುವ ಅರ್ಜಿಗಳನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಚಿವರಿಗೆ ಮಾಹಿತಿ ನೀಡಿದರು.

ಸಾರ್ವಜನಿಕರಿಗೆ ಕಲುಷಿತ ನೀರು ಯಾವುದೇ ಕಾರಣಕ್ಕೂ ಪೂರೈಕೆಯಾಗದoತೆ ಎಚ್ಚರಿಕೆ ವಹಿಸಬೇಕು. ಚರಂಡಿ ಜತೆಗೆ ಕುಡಿಯುವ ನೀರಿನ ಪೈಪ್ ಇರದಂತೆ ಎಚ್ಚರಿಕೆ ವಹಿಸಬೇಕು. ಏನಾದರೂ ಅನಾಹುತ ಉoಟಾದರೆ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರಿ ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾರದಲ್ಲಿ ಒಂದು ಶಾಲೆಗೆ ಕಡ್ಡಾಯವಾಗಿ ಭೇಟಿ ನೀಡಿ, ಅಲ್ಲಿನ ಶೈಕ್ಷಣಿಕ ಪ್ರಗತಿ ಪರಿಶೀಲಿಸುವ ಜತೆಗೆ ಕುಂದುಕೊರತೆಗಳನ್ನು ಆಲಿಸುವ ಕೆಲಸ ಮಾಡಬೇಕು. ಅಲ್ಲದೇ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪ್ರತಿ ವಿದ್ಯಾರ್ಥಿ ಶೇ. 70 ರಿಂದ ಶೇ. 80 ಕ್ಕೂ ಹೆಚ್ಚು ಅಂಕದೊಂದಿಗೆ ತೇರ್ಗಡೆಯಾಗುವಂತೆ ಬೋಧನೆಗೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸಿ.ಎಸ್.ಆರ್ ಅನುದಾನದಡಿ ಪ್ರತಿ ಗ್ರಾಮ ಪಂಚಾಯಿತಿಯ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ಹಲವು ಭಾಗಗಳಲ್ಲಿ ಶಾಲೆಗಳು ನವೀಕರಣ ಕಾರ್ಯ ಆರಂಭ ವಾಗಿದೆ. ಜಿಲ್ಲೆಯಲ್ಲಿರುವ ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ವಾರಕ್ಕೊಮ್ಮೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಪರೀಕ್ಷಿಸಬೇಕು. ಜತೆಗೆ ಪ್ರತಿ ವಿದ್ಯಾರ್ಥಿಗಳು ಶೇ. 70 ರಿಂದ ಶೇ. 80 ಕ್ಕೂ ಅಧಿಕ ಅಂಕದೊಂದಿಗೆ ತೇರ್ಗಡೆಯಾಗಲು ಎಲ್ಲ ವಸತಿ ಶಾಲೆಗಳ ಪ್ರಾಂಶುಪಾಲರು ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ರಾಜಣ್ಣ, ಉಪಾಧ್ಯಕ್ಷ ನಾರಾಯಣಸ್ವಾಮಿ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ(ಬಯಪ್ಪ) ಅಧ್ಯಕ್ಷರಾದ ಶಾಂತಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್. ನಟರಾಜ್ ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *