ಸರ್ಕಾರಿ ಸೇವೆಯಲ್ಲಿರುವವರು ಪ್ರಾಮಾಣಿಕವಾಗಿ ಕೆಲಸ ಮಾಡಿ- ಉಪಲೋಕಾಯುಕ್ತ ಬಿ. ವೀರಪ್ಪ

ಸರ್ಕಾರಿ ಕೆಲಸ ಎಲ್ಲರಿಗೂ ಸಿಗುವುದಿಲ್ಲ, ಸಿಕ್ಕಂತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಉಪಲೋಕಾಯುಕ್ತರಾದ ನ್ಯಾ. ಬಿ ವೀರಪ್ಪ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ನಡೆದ ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿ ಇರುವ ದೊಡ್ಡಬಳ್ಳಾಪುರ ತಾಲ್ಲೂಕಿನ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ ಪ್ರಾಮಾಣಿಕವಾಗಿ ಕಾನೂನು ಅಡಿಯಲ್ಲಿ ಕೆಲಸ ಮಾಡಿ. ಸರ್ಕಾರಿ ಕೆಲಸದಲ್ಲಿ ಇದ್ದವರು ತಪ್ಪು ಕೆಲಸ ಮಾಡಿ ಪಶ್ಚಾತ್ತಾಪ ಪಡುವುದಕ್ಕಿಂತ ಪ್ರಾಮಾಣಿಕವಾಗಿ ಕೆಲಸ ಮಾಡಿ ನೆಮ್ಮದಿ ಜೀವನ ನಡೆಸುವುದು ಮುಖ್ಯ ಎಂದರು.

ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದರೆ ಅಥವಾ ಕೇಸ್ ದಾಖಲಿಸಿದ್ದರೆ ಲೋಕಾಯುಕ್ತದಲ್ಲಿ ಕೇಸ್ ದಾಖಲಿಸಲು ಸಾಧ್ಯವಿಲ್ಲ. ಸುಳ್ಳು ಕೇಸ್ ಗಳಿಂದ ನಿಜ ಕೇಸ್ಗಳು ವಿಳಂಬವಾಗುತ್ತಿವೆ. ಇದರಿಂದ ನಿಷ್ಠಾವಂತ ಅಧಿಕಾರಿಗಳು ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತಿವೆ. ಸುಳ್ಳು ಕೇಸ್ ಹಾಕಿದವರಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ನೀಡಲಾಗುತ್ತದೆ. ಸುಳ್ಳು ಕೇಸ್ ಹಾಕಿದವರಿಗೆ ಆರು ತಿಂಗಳು ಮೂರು ವರ್ಷ ಅಥವಾ ಐದು ವರ್ಷದವರೆಗೆ ದಂಡ ವಿಧಿಸುವ ಸಾಧ್ಯತೆಗಳಿರುತ್ತದೆ ಎಂದರು. ಕಾನೂನು ಯಾರನ್ನು ಬಿಡುವುದಿಲ್ಲ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.

ಸರ್ಕಾರಿ ಆಸ್ತಿಯನ್ನು ಸಬ್ ರಿಜಿಸ್ಟರ್ ಅಧಿಕಾರಿಗಳು ಬೇರೊಬ್ಬರಿಗೆ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಅಥವಾ ರಿಜಿಸ್ಟರ್ ಮಾಡಿಕೊಟ್ಟಿರುವುದು ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದ್ದು ಸಂಬಂಧಪಟ್ಟ ತಹಶೀಲ್ದಾರ್ ಅವರು ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ತಿಯನ್ನು ಜಿಪಿಎ ಮಾಡಿರುವ ಆಸ್ತಿಯನ್ನು ಸರ್ವೇ ಮಾಡಿ ವರದಿ ನೀಡುವಂತೆ ಮತ್ತು ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಚಿಕ್ಕ ತುಮಕೂರು ಕೆರೆಗೆ ಕಾರ್ಖಾನೆಗಳಿಂದ ತ್ಯಾಜ್ಯ ಸುರಿಯುತ್ತಿರುವುದರ ಬಗ್ಗೆ ಕ್ರಮವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಿಡಿಒ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದರು.

ಮುರುಳಿ ಮೋಹನ್ ಅವರು ಬಾಶೆಟ್ಟಿಹಳ್ಳಿ ಸರ್ವೇ ನಂ 34/3 ಒಂದು ಎಕರೆ 3 ಕುಂಟೆ ಜಾಗದಲ್ಲಿ 5 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಪಕ್ಕದಲಿ ಪೆಟ್ರೋಲ್ ಬಂಕ್ ಇದ್ದು ಮತ್ತು ಕಟ್ಟಡವು ರಸ್ತೆಯ ಪಕ್ಕಕ್ಕೆ ನಿರ್ಮಾಣಗೊಳ್ಳುತ್ತಿದೆ ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಕರಣ ದಾಖಲಿಸಿದ್ದಾರೆ ಹಾಗಾಗಿ ಸಂಬಂಧಪಟ್ಟ ಮಾಲೀಕರು ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿದ್ದಾರೇ ಎಂಬುದನ್ನು ಪರಿಶೀಲಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಇದ್ದರೆ ಕಟ್ಟಡ ತೆರವುಗೊಳಿಸುವಂತೆ ಕ್ರಮ ವಹಿಸಿ ಎಂದರು.

ತಮಗೆ ಸಂಬಂಧವಿಲ್ಲದಿರುವ ಬೇರೆಯವರ ಪರ ಅರ್ಜಿ ಸಲ್ಲಿಸಿ ಪ್ರಕರಣ ದಾಖಲಿಸಿ ಬಂದಂತಹ ವ್ಯಕ್ತಿಗಳಿಗೆ ನೀವೇಕೆ ಬಂದಿದ್ದೀರಿ ಎಂದು ಪ್ರಶ್ನಿಸಿ, ನಿಮಗೆ ಏನಾದರೂ ಈ ಪ್ರಕ್ರಿಯೆ ನಡೆಸಲು ಅನುಮತಿ ಪತ್ರ ಕೊಟ್ಟಿದ್ದಾರೆ ತೋರಿಸಿ ಎಂದರು ಅನುಮತಿ ಪತ್ರ ನೀಡದವರನ್ನು ತರಾಟೆಗೆ ತೆಗೆದುಕೊಂಡು ಇದು ವೈಯಕ್ತಿಕ ವಿಚಾರ ಸಂಬಂಧಪಟ್ಟ ವ್ಯಕ್ತಿಯೇ ಕೇಸ್ ದಾಖಲಿಸಬೇಕು ಎಂದರು.

ಅಕ್ರಮ ಖಾತೆ ವರ್ಗಾವಣೆ, ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಭೂ ಒತ್ತುವರಿ, ಜಮೀನು ಸರ್ವೇ ಕಾರ್ಯ, ಸರ್ಕಾರಿ ರಸ್ತೆ, ಸ್ಮಶಾನ ಒತ್ತುವರಿ ಸೇರಿದಂತೆ ವಿವಿಧ ಪ್ರಕರಣಗಳ ವಿಚಾರಣೆ, ವಿಲೇವಾರಿ ನಡೆಸಲಾಯಿತು.

ದೊಡ್ಡಬಳ್ಳಾಪುರದ ಕೆಲವು ಕೆರೆಗಳಿಗೆ ಕಸ ತಂದು ಸುರಿಯುತ್ತಿರುವುದು ಮಾಲಿನ್ಯ ಉಂಟಾಗಿ ಸುತ್ತ ಮುತ್ತಲಿನ ಹಳ್ಳಿಗಳಿಗೆ, ಕೆರೆಗೆ, ಪರಿಸರಕ್ಕೆ ಹಾನಿ ಉಂಟಾಗಿದೆ. ಯಾಕೆ ಇದುವರೆಗೆ ಕ್ರಮ ಆಗಿಲ್ಲ. ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಪಂ ಸಿಇಒ ಡಾ.ಕೆ.ಎನ್ ಅನುರಾಧಾ, ಎಸ್ಪಿ ಸಿಕೆ ಬಾಬಾ, ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಶಿಕೃಷ್ಣ, ಉಪ ನಿಬಂಧಕರಾದ ಅರವಿಂದ್ ಎನ್.ವಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ದೂರುದಾರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!