ಸರ್ಕಾರಿ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ನೌಕರರು ರಾಜಕಾರಣಿಗಳು ಪಾತ್ರ ಮುಖ್ಯವಾಗಿದೆ- ಸಚಿವ ಬೈರತಿ ಸುರೇಶ್

ಕೋಲಾರ: ಸರ್ಕಾರಿ ನೌಕರರು ಹಾಗೂ ರಾಜಕಾರಣಿಗಳು ಕೈಜೋಡಿಸಿದರೆ ಮಾತ್ರ ಸರ್ಕಾರದ ಯಾವುದೇ ಯೋಜನೆ ಯಶಸ್ವಿ ಕಾಣಲು ಸಾಧ್ಯ ನಾವು ಸೂಚಿಸಿದ್ದನ್ನು ಅನುಷ್ಠಾನಗೊಳಿಸಿ ಜನರಿಗೆ ಮುಟ್ಟಿಸುವುದು ಸರ್ಕಾರಿ ನೌಕರರು ಅವರ ಸೇವೆಯನ್ನು ಅಭಿನಂದನೆ ಸಲ್ಲಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘ ಆಯೋಜಿಸಿರುವ ಎರಡು ದಿನಗಳ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು ಕರ್ನಾಟಕವನ್ನು ಹೊರತುಪಡಿಸಿದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಸರ್ಕಾರದ ಕಾರ್ಯಕ್ರಮದ ವೇದಿಕೆಗಳಲ್ಲಿ ಜನಪ್ರತಿನಿಧಿಗಳು ಮಾತ್ರ ಇರುತ್ತಾರೆ. ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಜೊತೆಯಲ್ಲಿ ಕೂರಿಸಿಕೊಳ್ಳುವುದಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಎಲ್ಲರೂ ಜೊತೆಯಲ್ಲೇ ಇರುತ್ತೇವೆ. ನಮ್ಮಲ್ಲಿ ಸೌಹಾರ್ದಭಾವ ಇದೆ ಸರ್ಕಾರವು ಅಷ್ಟೇ ಎಲ್ಲರನ್ನೂ ಸಮಾನತೆಯಿಂದ ನೋಡಿಕೊಳ್ಳುತ್ತದೆ ಎಂದರು.

ಯಾವುದೇ ಕ್ರೀಡೆ‌ಯಲ್ಲಿ ಆಗಲಿ ಪಾಲ್ಗೊಳ್ಳುವುದೇ ಮುಖ್ಯವಾಗಿರುತ್ತದೆ ಸೋಲು, ಗೆಲುವನ್ನು ಸಮಾನಾಗಿ ಸ್ವೀಕರಿಸಬೇಕು. ನಿಜ ಜೀವನದಲ್ಲೂ ಇಂಥ ಪಾಠಗಳು ಮುಖ್ಯವಾಗಬೇಕು ಸರ್ಕಾರಿ ನೌಕರರು ಆರೋಗ್ಯ ಭಾಗ್ಯ ಎಂಬ ವಿಚಾರ ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಏಕೆಂದರೆ ನೌಕರರಿಗೆ ಬಹಳಷ್ಟು ಜವಾಬ್ದಾರಿ ಇರುತ್ತದೆ, ಒತ್ತಡ ಇರುತ್ತದೆ. ಕ್ರೀಡೆಯಲ್ಲಿ ಭಾಗಿ ಆಗುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಸರ್ಕಾರಿ ಅಧಿಕಾರಿಗಳನ್ನು ನಾವು ಕೆಲಸದ ವಿಚಾರದಲ್ಲಿ ಒಮ್ಮೊಮ್ಮೆ ಗದರುತ್ತೇವೆ. ಅಭಿವೃದ್ಧಿ ಕೆಲಸಗಳು ಬೇಗ ನಡೆಯಬೇಕು, ಯೋಜನೆಗಳು ಜನರಿಗೆ ಸರಿಯಾಗಿ ಮುಟ್ಟಬೇಕು ಎಂಬುದಷ್ಟೇ ಇದರ ಉದ್ದೇಶವಾಗಿರುತ್ತದೆ ನಾವು ಎಲ್ಲರೂ ಒಂದು ಕುಟುಂಬ ಇದ್ದಂತೆ ಸಣ್ಣಪುಟ್ಟ ಜಗಳ ಗಲಾಟೆ ಇರುತ್ತದೆ ಎಂದರು

ನೌಕರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಸಿದ್ಧವಿದೆ. ಜಿಲ್ಲಾ ಮಟ್ಟದಲ್ಲಿ ಇದ್ದ ನೌಕರರ ಭವನವನ್ನೂ ಕೆಡವಿದ್ದಾರೆ. ನೌಕರರ ಭವನ ಹಾಗೂ ಗುರು ಭವನ ಕಟ್ಟಡ ನಿರ್ಮಾಣ ಮಾಡಬೇಕು. ಇದಕ್ಕೆ ಸಚಿವ ಬೈರತಿ ಸುರೇಶ್‌ ಸಹಕಾರದಲ್ಲಿ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಕ್ರೀಡೆಯಿಂದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಹೀಗಾಗಿ, ಎಲ್ಲಾ ನೌಕರರು ಎರಡು ದಿನ ಕಾಲ ಕ್ರೀಡೆಯಲ್ಲಿ ಪಾಲ್ಗೊಳ್ಳಿ. ಎಲ್ಲರೂ ಮೊದಲ ಸ್ಥಾನ ಪಡೆಯಿರಿ’ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸಂಸದ ಎಂ.ಮಲ್ಲೇಶ್‌ ಬಾಬು ಮಾತನಾಡಿ, ನಿತ್ಯ ಯೋಗ ಮಾಡಿ,‌ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ. ಸಂಜೆ ವಾಕಿಂಗ್‌ ಮಾಡಿ. ಈ ಮೂಲಕ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಆಗ ಕೆಲಸವನ್ನು ಉತ್ತಮವಾಗಿ ಮಾಡಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿರುವ ಜಿಲ್ಲೆಯ ಕ್ರೀಡಾಪಟುಗಳನ್ನು ಸಚಿವರು ಹಾಗೂ ಗಣ್ಯರು ಸನ್ಮಾನಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಅಜಯ್‌ ಕುಮಾರ್‌ ನೇತೃತ್ವದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ 1,450 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ ಎರಡು ದಿನ ವಿವಿಧ ಸ್ಪರ್ಧೆಗಳು ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ ಹಾಗೂ ಬಂಗಾರಪೇಟೆ ರಸ್ತೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಸಾಂಸ್ಕೃತಿಕ ಸ್ಪರ್ಧೆಗಳು ಟಿ.ಚನ್ನಯ್ಯ ರಂಗಮಂದಿರ ಹಾಗೂ ಕನ್ನಡ ಭವನದಲ್ಲಿ ನಡೆಯಲಿವೆ.

ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ವೈ.ನಂಜೇಗೌಡ, ಜಿ‌.ಕೆ ವೆಂಕಟಶಿವಾರೆಡ್ಡಿ ವಿಧಾನ ಪರಿಷತ್ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಸಿ.ಬಾಗೇವಾಡಿ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಉಪವಿಭಾಗಾಧಿಕಾರಿ ಮೈತ್ರಿ, ತಹಶೀಲ್ದಾರ್ ನಯನಾ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎನ್ ಶ್ರೀನಿವಾಸರೆಡ್ಡಿ, ಜಿಲ್ಲಾ ಗೌರವಾಧ್ಯಕ್ಷ ಕೆ.ಎನ್ ಮಂಜುನಾಥ್, ಕಾರ್ಯದರ್ಶಿ ಸತೀಶ್ ಕುಮಾರ್, ಖಜಾಂಚಿ ಮುರಳಿ ಮೋಹನ್ ಸೇರಿದಂತೆ ಪದಾಧಿಕಾರಿಗಳು ವಿವಿಧ ತಾಲೂಕುಗಳ ಅಧ್ಯಕ್ಷರು ನೌಕರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *