ಸರ್ಕಾರಿ ನೌಕರರ ಸಂಘದ ಹೆಸರಲ್ಲಿ ಭ್ರಷ್ಟಾಚಾರ ಆರೋಪ: ಕ್ರಮಕ್ಕೆ ರೈತ ಸಂಘದಿಂದ ಡಿಸಿಗೆ ಮನವಿ

ಕೋಲಾರ: ನೌಕರರ ಸಂಘದ ಚುನಾವಣೆ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಕೇಂದ್ರ ಸ್ಥಾನದಲ್ಲಿ ಕೆಲಸ ನಿರ್ವಹಿಸಿ ಮತ ಚಲಾಯಿಸಲು ಸೂಚನೆ ನೀಡಬೇಕೆಂದು ರೈತ ಸಂಘದಿಂದ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಜನರ ಸೇವೆಯ ಕರ್ತವ್ಯದ ಹೊಣೆ ಹೊತ್ತ ನೌಕರರು ಕಚೇರಿಗಳಲ್ಲಿ ಕೆಲಸ ಮಾಡದೇ ಅವರ ಚುನಾವಣೆಗೆ ಆದ್ಯತೆ ನೀಡಿ, ರಾಜಕೀಯ ಪಕ್ಷಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ರೆಸಾರ್ಟ್, ಪ್ರವಾಸ, ಮೋಜು, ಮಸ್ತಿ ನಡೆಸಲು ಅವಕಾಶ ಕಲ್ಪಿಸುತ್ತಿದ್ದು, ಇದು ಕಾನೂನುಬಾಹಿರ ಜೊತೆಗೆ ಸಂವಿಧಾನದ ಆಶಯದಂತೆ ಭ್ರಷ್ಟಾಚಾರ ರಹಿತ ಚುನಾವಣೆ ನಡೆಸಬೇಕಾದ ನೌಕರರೇ ಹಾದಿ ತಪ್ಪಿದರೆ ಇನ್ನೂ ಜನಸಾಮಾನ್ಯರಿಗೆ ನ್ಯಾಯ ಒದಗಿಸುವವರೇ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದಕ್ಕೆ ನೌಕರರ ಸಂಘದ ಚುನಾವಣೆಯಲ್ಲಿ ಹರಿದಾಡುತ್ತಿರುವ ಹಣ,ಆಮಿಷಗಳೇ ಸಾಕ್ಷಿಯಾಗಿದೆ, ಸರ್ಕಾರಿ ನೌಕರರು ಕೇವಲ ಸಂಬಳ ಪಡೆಯುವುದು ಮಾತ್ರವಾದರೆ ಇಷ್ಟೊಂದು ಲಕ್ಷಲಕ್ಷ ಹಣ ಎಲ್ಲಿಂದ ತಂದು ಚುನಾವಣೆಯಲ್ಲಿ ಹಂಚಲು ಸಿದ್ದರಾಗಿದ್ದಾರೆ ಎಂಬುದರ ಕುರಿತು ಜಿಲ್ಲಾಧಿಕಾರಿಗಳು ತನಿಖೆಗೆ ಆಗ್ರಹಿಸಬೇಕು, ಲೋಕಾಯುಕ್ತರು ಇಂತಹ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ದುಡ್ಡು,ಆಮಿಷವೊಡ್ಡುವ ನೌಕರರ ಸಂಘದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೌಕರರ ಸಂಘದ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಖಂಡನೀಯ, ನೌಕರರ ಸಂಘ ಚುನವಣೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನೌಕರರ ಅಭಿವೃದ್ದಿ, ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಬೇಕೇ ಹೊರತು ರಾಜಕೀಯ ವ್ಯಕ್ತಿಗಳ ಜೊತೆ ಸೇರಿಕೊಂಡು ಆ ಪಕ್ಷ ಈ ಪಕ್ಷ ಎಂದು ಚುನಾವಣೆಯನ್ನು ದಿಕ್ಕು ತಪ್ಪಿಸಿ ಮತ ಚಲಾಯಿಸುವ ನೌಕರರಿಗೆ ದ್ವಿಚಕ್ರವಾಹನ, ಚಿನ್ನದ ನಾಣ್ಯ ಮತ್ತಿತರ ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿವೆ, ಇದು ನಿಜವೇ ಆಗಿದ್ದಲ್ಲಿ ಅದನ್ನು ಪತ್ತೆಹಚ್ಚಿ ಇದನ್ನು ನೀಡುವ ಭ್ರಷ್ಟ ಕುಳಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಡಿ.4 ರಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಚುನಾವಣೆ ನಿಗಧಿಯಾಗಿರುವುದು ಸರಿಯಷ್ಟೆ. ಆದರೆ ಚುನಾವಣೆಗೆ ಮುನ್ನಾ ಅಭ್ಯರ್ಥಿಗಳು ನೌಕರರ ಸಂಘದ ನಿರ್ದೇಶಕರಿಗೆ ಹಣ,ಆಮಿಷವೊಡ್ಡಿ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿರುವ ಜೊತೆಗೆ ಕೋಟಿ ಕೋಟಿ ಹಣ ಸುರಿಯುತ್ತಿರುವ ನೌಕರ ಸಂಘದ ಆಭ್ಯರ್ಥಿಗಳಿಗೆ ಹಣದ ಮೂಲ ಯಾವುದು ಜನ ಸಾಮಾನ್ಯರನ್ನು ಹಿಂಸಿಸಿ ಹಣ ಮಾಡಿ ಚುನಾವಣೆಗೆ ಸುರಿಯುತ್ತಿದ್ದಾರೆಯೇ ಇಲ್ಲವೇ ರಾಜಕಾರಣಿಗಳು ಅಧಿಕಾರಿಗಳನ್ನು ತಮ್ಮ ಹಿಡಿತಕ್ಕೆ ಪಡೆದು ಗೆದ್ದ ನಂತರ ಸರ್ಕಾರಿ ಆಸ್ತಿಗಳನ್ನು ಕಬಳಿಸಲು ಬಂಡವಾಳ ಸುರಿಯುತ್ತಿದ್ದಾರೆಯೇ ಎಂದು ಅನುಮಾನ ವ್ಯಕ್ತಪಡಿಸಿದರು.

ಚುನಾವಣೆ ಡಿ.4 ರಂದು ನಡೆಯಲಿದ್ದು, ಅಂದುಹೋಗಿ ನೌಕರರ ಸಂಘದ ನಿರ್ದೇಶಕರಾಗಿರುವವರು ತಮ್ಮ ಹಕ್ಕು ಚಲಾಯಿಸಿ ನಂತರ ತಮ್ಮ ಇಲಾಖೆಯಲ್ಲಿನ ಜನಸೇವೆಯ ಕರ್ತವ್ಯ ಮುಂದುವರೆಸಲಿ ಅದು ಬಿಟ್ಟು ಮೂರು ದಿನಗಳ ಮೊದಲೇ ರೆಸಾರ್ಟ್,ಪ್ರವಾಸಕ್ಕೆ ಕರೆದುಕೊಂಡು ಹೋಗಿ ಮೋಜು,ಮಸ್ತಿ ಮಾಡುವ ಮೂಲಕ ರಾಜಕೀಯ ಪಕ್ಷಗಳಿಗಿಂತ ನಾವು ಏನೂ ಕಡಿಮೆ ಇಲ್ಲ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಮನವಿ ನೀಡುವಾಗ ಸಂಘಟನೆತ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ತಾ.ಅ ಮೂರಾಂಡಹಳ್ಳಿ ಶಿವಾರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಗೀರೀಶ್, ಶೈಲಜ, ರತ್ನಮ್ಮ, ಭಾಗ್ಯಮ್ಮ, ವೆಂಕಟಮ್ಮ, ಮುನಿರತ್ನ ಸೌಭಾಗ್ಯ ಮುಂತಾದವರಿದ್ದರು.

Leave a Reply

Your email address will not be published. Required fields are marked *