ಸರ್ಕಾರಿ ನೌಕರರಿಗೆ ದಸರಾ ಬಂಪರ್ ಬಹುಮಾನ ನೀಡಿರುವ ರಾಜ್ಯ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಶೇ 3.75 ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜುಲೈ 1 ರಿಂದ ಜಾರಿಗೆ ಬರುವಂತೆ ಶೇ 3.75 ರಷ್ಟು ಹೆಚ್ಚಿಸಿ ಹಾಗೂ UGC/ AICTE/ ICAR ವೇತನ ಶ್ರೇಣಿಗಳ ಬೋಧಕ ಸಿಬ್ಬಂದಿ ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆಯನ್ನು ಶೇ. 4 ಹೆಚ್ಚಿಸಿ ಅಂದರೆ ಶೇ 46ಕ್ಕೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ರೂ.1,109 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.
ಕಳೆದ ಬಾರಿ ರಾಜ್ಯ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಜನವರಿ 1ರಿಂದ ಪೂರ್ವಾನ್ವಯವಾಗಿ ಮೂಲ ವೇತನದ ಶೇಕಡ 31ರಿಂದ ಶೇಕಡ 35ಕ್ಕೆ ಪರಿಷ್ಕರಿಸಲಾಗಿತ್ತು.
ನಮ್ಮ ಈ ಆದೇಶವು ರಾಜ್ಯ ಸರ್ಕಾರಿ ನೌಕರರ ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.