
ಸರ್ಕಾರಿ ಕಚೇರಿಗಳಲ್ಲಿ ಎಲ್ಲಾ ಅಧಿಕಾರಿಗಳು ಬೆಳಗ್ಗೆ ಕಚೇರಿಗೆ ಬಂದ ಕೂಡಲೇ ತಮ್ಮ ಜೇಬಿನಲ್ಲಿ ಎಷ್ಟು ಹಣ ಇದೆ ಎಂದು ರಿಜಿಸ್ಟರ್ ಬುಕ್ ನಲ್ಲಿ ನಮೂದಿಸಬೇಕು. ತದನಂತರ ಸಂಜೆ ಕೆಲಸ ಮುಗಿದ ಬಳಿಕ ಎಷ್ಟು ಹಣ ತಮ್ಮಲ್ಲಿದೆ ಎಂದು ನಮೂದಿಸಿ ಹೋಗಬೇಕು. ಒಂದು ವೇಳೆ ಹೆಚ್ಚು ಹಣ ಇದ್ದರೆ ಕಾರಣ ತಿಳಿಸಬೇಕು ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅವರು ಸೂಚಿಸಿದರು.
ನಗರದ ತಾಲೂಕು ಕಚೇರಿ, ಮೆಟ್ರಿಕ್ ಪೂರ್ವ ಬಾಲಕಿಯರು ಹಾಗೂ ಬಾಲಕರ ವಿದ್ಯಾರ್ಥಿ ನಿಲಯ, ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ ಸ್ಥಿತಿಗತಿ ಅತ್ಯಂತ ಘೋರವಾಗಿದೆ. ಶೌಚಾಲಯಗಳಿಗೆ ಬಾಗಿಲುಗಳು, ಸ್ವಚ್ಚತೆ ಇಲ್ಲದೇ ಗೊಬ್ಬೆದ್ದು ನಾರುತ್ತಿವೆ. ಸಾರ್ವಜನಿಕ ಆಸ್ಪತ್ರೆ ದನಗಳ ಕೊಟ್ಟಿಗೆ ರೀತಿ ಇದೆ. ಸರ್ಕಾರದಿಂದ ಸಾಕಷ್ಟು ಅನುದಾನ ಬಂದರು ಅದನ್ನು ಸರಿಯಾಗಿ ವಿನಿಯೋಗಿಸಿ ಮೂಲಭೂತ ಸೌಕರ್ಯ ಒದಗಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಆಸ್ಪತ್ರೆ ಮೇಲ್ವಿಚಾರಕರ ಮನೆ ಇದೆ ರೀತಿಯಾಗಿ ಇರುತ್ತದೆಯೇ ಎಂದು ಪ್ರಶ್ನೆ ಮಾಡಿದರು.
ಇಂದು ಸಂಜೆ ಕೇವಲ ಇಬ್ಬರು ವೈದ್ಯರು ಮಾತ್ರ ನಮಗೆ ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ ಕ್ಯಾಶ್ ಡಿಕ್ಲರೇಷನ್ ಇಲ್ಲ. ಈ ಆಸ್ಪತ್ರೆಗೆ ಬಡವರು ಹೆಚ್ಚಾಗಿ ಬರುತ್ತಾರೆ. ಒಬ್ಬ ರೋಗಿ ಬೆಳಗ್ಗೆಯಿಂದ ಔಷಧ ಇಲ್ಲದೇ ಪರದಾಡುತ್ತಿದ್ದಾನೆ ಎಂದು ದೂರ ಬಂದಿದೆ. ಈಗ ನಾವು ಬಂದು ಔಷಧ ಕೊಡಿಸಿದ್ದೇವೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗೆ ಇದೇ ಕೊನೆ ಎಚ್ಚರಿಕೆ, ಮುಂದಿನ ದಿನಗಳಲ್ಲಿ ಇದೇ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅದೇರೀತಿ ತಾಲೂಕು ಕಚೇರಿ, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ಕಾರ್ಯವೈಖರಿ ಅಷ್ಟು ಚೆನ್ನಾಗಿಲ್ಲ. ಸರ್ವೇ ಕಚೇರಿಯಲ್ಲಿ ಕೆಲಸ ಮಾಡುವ 26 ಅಧಿಕಾರಿಗಳ ಪೈಕಿ ಕೇವಲ ಇಬ್ಬರು ಮಾತ್ರ ನಮಗೆ ಕಾಣಿಸಿಕೊಂಡರು. ಉಳಿದವರು ಎಲ್ಲಿ ಹೋದರು ಎಂಬುದು ಗೊತ್ತಿಲ್ಲ. ಕಾಣೆಯಾಗಿದ್ದಾರೆ ಎಂದು ನಾವು ದೂರು ನೀಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.
ನಗರದಲ್ಲಿ ಸಂಚಾರ ಮಾಡುವ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸುವಂತೆ ಅರಿವು ಮೂಡಿಸಬೇಕು. ಅರಿವು ಮೂಡಿಸಿದರೂ ಒಂದು ವೇಳೆ ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸಬೇಕು ಎಂದು ನಗರ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಅವರಿಗೆ ಸೂಚಿಸಿದರು.