Categories: ಲೇಖನ

ಸರ್ಕಾರಗಳ ಸಾಧನೋತ್ಸವ…….

ಸರ್ಕಾರಗಳ ಸಾಧನೋತ್ಸವ…….

ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ 8ನೇ ವರ್ಷದ ( 5+3 ) ಸಾಧನಾ ಉತ್ಸವ, ಭಾರತದ ಪ್ರಧಾನಿ ಸನ್ಮಾನ್ಯ
ಶ್ರೀ ನರೇಂದ್ರ ಮೋದಿಯವರ ನಿರಂತರ 12ನೇ ವರ್ಷದ ಸಾಧನಾ ಮಹೋತ್ಸವ……

ಅದರ ಬಗ್ಗೆ ಬರಹಗಳು, ಭಾಷಣಗಳು, ಜಾಹೀರಾತುಗಳು, ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಹೇಳುತ್ತಿರುವುದು ನೋಡಿದರೆ ಕರ್ನಾಟಕ ಅತ್ಯಂತ ಅಭಿವೃದ್ಧಿಯ ಪಥದಲ್ಲಿ ಶಾಂತಿಯಿಂದ, ನೆಮ್ಮದಿಯಿಂದ, ಉತ್ಸಾಹದಿಂದ ಮುಂದೆ ಸಾಗುತ್ತಿದೆ. ಹಾಗೆಯೇ ಭಾರತವು ಸಹ ಇಡೀ ವಿಶ್ವದಲ್ಲಿಯೇ ವಿಶ್ವಗುರು ಆಗುವತ್ತಾ ದಾಪುಗಾಲಿಟ್ಟು ಮುನ್ನಡೆಯುತ್ತಿದೆ. ಎಲ್ಲರೂ ಸುಖ ಸಂತೋಷದಲ್ಲಿದ್ದಾರೆ. ಇನ್ನೇನು ದೇಶಕ್ಕೆ, ರಾಜ್ಯಕ್ಕೆ ಅಂತಹ ದೊಡ್ಡ ಕೊರತೆ ಏನೂ ಇಲ್ಲ. ಶುಭಾಶಯಗಳು ಕನ್ನಡಿಗರಿಗೆ, ಭಾರತೀಯರಿಗೆ…….

ಇದು ವಾಸ್ತವವೇ ಅಥವಾ ನಾವು ನೋಡುವ ದೃಷ್ಟಿಕೋನ ಅವಲಂಬಿಸಿದೆಯೇ…..

ರಾಜ್ಯದ ಯಾವುದೇ ಸರ್ಕಾರಿ ಇಲಾಖೆಯಲ್ಲಿ ಅಥವಾ ರಾಷ್ಟ್ರದ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ ಜನರಿಗೆ ಬಹುತೇಕ ಲಂಚವಿಲ್ಲದೆ ಕೆಲಸ ಆಗುವುದಿಲ್ಲ. ಭ್ರಷ್ಟಾಚಾರ ಸರ್ವ ವ್ಯಾಪ್ತಿಯಾಗಿ ಆವರಿಸಿದೆ ಇದು ಸುಳ್ಳೇ….

ದೇಶದ ಪ್ರಧಾನಿಯನ್ನು ಅತ್ಯಂತ ಸರಳರು, ಪ್ರಾಮಾಣಿಕರು, ದಕ್ಷರು ಅಧ್ಯಾತ್ಮಿಕ ಸಂತರು ಎಂಬಂತೆ ವ್ಯಾಖ್ಯಾನಿಸಲಾಗುತ್ತದೆ. ಆದರೆ ದೇಶ ಮಾತ್ರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ ಇದನ್ನು ಯಾವ ರೀತಿ ವಿಶ್ಲೇಷಣೆ ಮಾಡಬೇಕು…

ಕರ್ನಾಟಕದ ಮುಖ್ಯಮಂತ್ರಿ ಅತ್ಯಂತ ಜಾತ್ಯಾತೀತರು, ಸರ್ವಜನಾಂಗದ ಶಾಂತಿಯ ತೋಟದ ನೈಜ ವಕ್ತಾರರು, ಸಾಮಾಜಿಕ ನ್ಯಾಯದ ಹರಿಕಾರರು ಎಂದು ಕರೆಯಲಾಗುತ್ತದೆ. ಆದರೆ ಕರ್ನಾಟಕದಲ್ಲಿರುವಷ್ಟು ಜಾತಿ ಪದ್ಧತಿಯ ಆಳ ಬೇರುಗಳು, ಅಸಮಾನತೆ, ಅಮಾನವೀಯತೆ, ಮೌಢ್ಯತೆ ಇತರ ರಾಜ್ಯಗಳಿಗಿಂತ ಹೆಚ್ಚು. ಇದನ್ನೂ ಸಹ ಹೇಗೆ ವಿಶ್ಲೇಷಿಸಬೇಕು. ಯಾವ ಮಾನದಂಡಗಳನ್ನು ಉಪಯೋಗಿಸಿ ಇವರನ್ನು ನಾವು ಬೆಂಬಲಿಸುವುದು ಅಥವಾ ಟೀಕಿಸುವುದನ್ನು ಮಾಡಬೇಕು…..

ನಮ್ಮದೇಶ ವಿಶ್ವಮಟ್ಟದಲ್ಲಿ ಹಸಿವಿನ ಕ್ರಮಾಂಕದಲ್ಲಿ ನೂರರ ಮೇಲಿದೆ, ಪತ್ರಿಕಾ ಸ್ವಾತಂತ್ರ್ಯದಲ್ಲಿಯೂ ನೂರರ ಮೇಲಿದೆ, ಸಂತೋಷ ನೆಮ್ಮದಿಯ ಗುಣಮಟ್ಟದಲ್ಲಿಯೂ ನೂರರ ಮೇಲಿದೆ. ಇವೆಲ್ಲವೂ ದೇಶ ಹಿಂದುಳಿದಿದೆ ಎಂದು ಸಾರಿ ಹೇಳುವ ಮಾನದಂಡಗಳು. ರಾಜ್ಯ ಭ್ರಷ್ಟಾಚಾರದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದು ಏನನ್ನು ಸೂಚಿಸುತ್ತದೆ…..

ರಾಜ್ಯ ಮತ್ತು ದೇಶದ ಅನೇಕ ನಗರಗಳು ವಾಸಿಸಲು ಯೋಗ್ಯವಾಗಿ ಉಳಿದಿಲ್ಲ. ಗಾಳಿಯಲ್ಲಿನ ಧೂಳಿನ ಕಣಗಳ ಪ್ರಮಾಣ ಹೆಚ್ಚಾಗಿರುವುದರಿಂದ ಉಸಿರಾಡಲೇ ಸಾಧ್ಯವಾಗುತ್ತಿಲ್ಲ. ನೀರು, ಆಹಾರ ವಿಷಯುಕ್ತವಾಗಿ, ಮಲಿನವಾಗಿ ಇಡೀ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕುಗ್ಗಿಸಿವೆ. ಆದರೆ ಇವರುಗಳು ಮಾಡುವುದು ಮಾತ್ರ ಬಹುದೊಡ್ಡ ಸಾಧನ ಸಮಾವೇಶಗಳು…..

ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳ ದೃಷ್ಟಿಯಲ್ಲಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯಕ್ಕೆ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಧಿಕಾರ ಸ್ಥಾನದ ಅವಧಿಯಲ್ಲಿ ತಮ್ಮ ಹಿಂದಿನವರಿಗಿಂತ ದಾಖಲೆಗಳನ್ನು ಮಾಡುತ್ತಿದ್ದಾರೆ. ಒಳ್ಳೆಯ ರಸ್ತೆಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಕಟ್ಟಡಗಳು, ವಾಹನಗಳು, ತಂತ್ರಜ್ಞಾನ ಕೈಗಾರಿಕೋದ್ಯಮ, ವಾಣಿಜ್ಯ ಎಲ್ಲದರಲ್ಲೂ ರಾಜ್ಯ ಮತ್ತು ದೇಶ ನಾಗಾಲೋಟದಲ್ಲಿ ಸಾಗುತ್ತಿದೆ, ಹೀಗೆ ಅವರು ಹೇಳಿಕೊಳ್ಳುತ್ತಾರೆ….

ಆದರೆ ಸಾಮಾನ್ಯ ಜನರು ಮಾತ್ರ
ಬೆಲೆ ಏರಿಕೆಯಿಂದ, ಶಿಕ್ಷಣದ ದುಬಾರಿತನದಿಂದ, ಆಸ್ಪತ್ರೆಯ ಖರ್ಚು ವೆಚ್ಚಗಳಿಂದ ಕುಟುಂಬ ನಿರ್ವಹಣೆ ಮಾಡದೆ ನರಕಾಯಾತನೆ ಅನುಭವಿಸುತ್ತಿದ್ದಾರೆ. ಅಪಘಾತಗಳು, ಆತ್ಮಹತ್ಯೆಗಳು, ಅಪರಾಧಗಳು, ಅನಾಹುತಗಳು ಹೆಚ್ಚಾಗುತ್ತಿದೆ. ಸಾಧನೆ ಎಂದು ಹೇಳಬೇಕಿರುವುದು ಮುಖ್ಯಮಂತ್ರಿಗಳು ಮತ್ತು ಪ್ರಧಾನಮಂತ್ರಿಗಳಲ್ಲ ಅಥವಾ ಆಯಾ ಪಕ್ಷದ ಕಾರ್ಯಕರ್ತರಲ್ಲ ಅಥವಾ ಏಜೆಂಟರಲ್ಲ ಅಥವಾ ಪತ್ರಕರ್ತರೂ ಅಲ್ಲ. ಮಧ್ಯಮ ವರ್ಗದ ಸಾಮಾನ್ಯ ಜನರ ಅಂತರಾಳದ ಆತ್ಮಸಾಕ್ಷಿ ಮಾತ್ರ. ಅದು ಕೂಡ ಸಮಗ್ರ ಚಿಂತನೆ ನಂತರ. ಆಗ ಮಾತ್ರ ವಿಷಯ ವಾಸ್ತವದ ಹತ್ತಿರಕ್ಕೆ ಹೋಗಲು ಸಾಧ್ಯ.

ನನ್ನ ಸುಖವೇ ಜಗತ್ತಿನ ಸುಖ, ನಾನು ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ ಎಂಬ ಸ್ವಾರ್ಥ ಚಿಂತನೆ ಖಂಡಿತವಾಗಲೂ ಒಪ್ಪಿತವಲ್ಲ, ಸ್ವೀಕಾರಾರ್ಹವಲ್ಲ……

ಈಗ ಕರ್ನಾಟಕ ಸರ್ಕಾರ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಸಾಧನೆಯ ಸಮಾವೇಶ ಮಾಡುತ್ತಿದೆ. ಈ ಮೂರು ವರ್ಷಗಳ ನಂತರ ನಿಜಕ್ಕೂ ಸಮಾರಂಭವೆಂಬ ಬೃಹತ್ ವಿಜೃಂಭಣೆಯ ಕಾರ್ಯಕ್ರಮ ಮಾಡುವಷ್ಟು ಸಾಧನೆ ಈ ಸರ್ಕಾರದಿಂದಾಗಿದೆಯೇ ? ಇಲ್ಲಿನ ಶಾಸಕಾಂಗ ಮತ್ತು ಕಾರ್ಯಾಂಗ ಕಾನೂನು ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಿಜಕ್ಕೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿದೆಯೇ ?….

ಸರ್ಕಾರದ ಸಾಧನೆಯ ಬಹುದೊಡ್ಡ ಮಾನದಂಡವೆಂದರೆ ಶಿಕ್ಷಣ, ಆರೋಗ್ಯ, ಭದ್ರತೆ, ಬೆಲೆ ನಿಯಂತ್ರಣ, ಭ್ರಷ್ಟಾಚಾರ ಇಲ್ಲದಿರುವಿಕೆ, ಸಾಮಾಜಿಕ ನ್ಯಾಯ, ಪರಿಸರ ಸಂರಕ್ಷಣೆ, ಅಪರಾಧಗಳ ನಿಯಂತ್ರಣ, ಉದ್ಯೋಗ ಸೃಷ್ಟಿ, ಮೂಲ ಸೌಕರ್ಯಗಳ ಅಭಿವೃದ್ಧಿ, ಆಡಳಿತದ ಮೇಲೆ ನಿಯಂತ್ರಣ, ಪ್ರಾದೇಶಿಕ ತಾರತಮ್ಯ ನಿವಾರಣೆ, ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆ, ಕ್ರೀಡೆ ಸಾಹಿತ್ಯ ಸಂಗೀತ ವಿಜ್ಞಾನಗಳಲ್ಲಿ ಮಹತ್ತರ ಸಾಧನೆ, ವ್ಯಕ್ತಿತ್ವ ನಿರ್ಮಾಣ, ಒಟ್ಟಾರೆ ಈ ಎಲ್ಲದರ ಬೆಳವಣಿಗೆಯಿಂದ ಜನರ ಜೀವನ ಮಟ್ಟ ಸುಧಾರಣೆ.

ಈ ನಿಟ್ಟಿನಲ್ಲಿ ಏನಾದರೂ ದೊಡ್ಡಮಟ್ಟದ ವ್ಯತ್ಯಾಸವಾಗಿದ್ದಲ್ಲಿ ಖಂಡಿತವಾಗಲು ಅದನ್ನು ಸಾಧನೆ ಎಂದು ಒಂದಷ್ಟು ಸಂಭ್ರಮ ಪಡಬಹುದು. ಇಲ್ಲದಿದ್ದರೆ ಉಳಿದ ಎರಡು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆ ಮಾಡಿ ಆನಂತರ ಸಾಧನೆಯ ಸಮಾವೇಶ ಮತ್ತು ಮುಂದಿನ ಚುನಾವಣೆಗೆ ಜನರಲ್ಲಿ ಮತ ಕೇಳಬೇಕಾಗುತ್ತದೆ.

ಇದರ ಆಧಾರದ ಮೇಲೆ ಕರ್ನಾಟಕವನ್ನು ಸಮಗ್ರವಾಗಿ ನೋಡುವುದಾದರೆ ರಾಜ್ಯ ಸರ್ಕಾರದ ಸಾಧನೆ ತೃಪ್ತಿದಾಯಕವಾಗಿಲ್ಲ. ಒಂದಷ್ಟು ಸಣ್ಣಪುಟ್ಟ ಸಹಜ ತಾಂತ್ರಿಕ ಬದಲಾವಣೆಯ ಬೆಳವಣಿಗೆ, ಅಭಿವೃದ್ಧಿಯನ್ನು ಹೊರತುಪಡಿಸಿದರೆ ಒಟ್ಟಾರೆ ಜನಜೀವನದ ಮೇಲೆ ಪರಿಣಾಮ ಬೀರುವಂತಹ ಯಾವುದೇ ಗಂಭೀರ ಪ್ರಯತ್ನಗಳು ಸಾಗುತ್ತಿಲ್ಲ. ವಸ್ತು ಸಂಸ್ಕೃತಿ ಎಂದಿನಂತೆ ಅಭಿವೃದ್ಧಿಯ, ಆಧುನಿಕ ತಂತ್ರಜ್ಞಾನದ ಬೆಳವಣಿಗೆಯ ಹಾದಿಯಲ್ಲಿದೆ ಎಂಬುದು ನಿಜ, ಆದರೆ ಸುಸ್ಥಿರ ಅಭಿವೃದ್ಧಿ ಮಾತ್ರ ಸಾಧ್ಯವಾಗುತ್ತಿಲ್ಲ.

ಆರ್ಥಿಕ ಅಭಿವೃದ್ಧಿ ಕೆಲವೇ ವ್ಯಕ್ತಿಗಳಲ್ಲಿ, ಕೆಲವೇ ಸಂಸ್ಥೆಗಳಲ್ಲಿ ಕೇಂದ್ರೀಕೃತವಾಗುತ್ತಿದ್ದರೆ, ಸಾಮಾಜಿಕ ವ್ಯವಸ್ಥೆ ಮನಸ್ಸುಗಳು ಒಡೆದ ಸನ್ನಿವೇಶದತ್ತ ಸಾಗುತ್ತಿದೆ, ಶಾಂತಿ ಕದಡುತ್ತಿದೆ. ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ರಿಮಿನಲ್ ಅಪರಾಧಗಳು ಬೇರೆ ಬೇರೆ ರೂಪ ಪಡೆದು ಜನರನ್ನು ವಂಚಿಸುತ್ತಲೇ ಇದೆ. ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದೆ ದಿನೇ ದಿನೇ ಹದಗೆಡುತ್ತಿದೆ. ಪರಿಸರ ನಾಶವು ನಿರಂತರವಾಗಿ ನಡೆಯುತ್ತಿದೆ. ಉದ್ಯೋಗ ಸೃಷ್ಠಿಯಲ್ಲಿ ಗಣನೀಯ ಸುಧಾರಣೆ ಏನು ಇಲ್ಲ. ಮಾನವೀಯ ಮೌಲ್ಯಗಳ, ನೈತಿಕ ಮೌಲ್ಯಗಳ ಅಧ:ಪತನವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರ ಮತ್ತು ವಿಶ್ವಮಟ್ಟದಲ್ಲಿ ಕ್ರೀಡೆ, ಸಂಗೀತ, ಸಾಹಿತ್ಯದಲ್ಲಿ ಅಂತಹ ಬದಲಾವಣೆಯನ್ನು ಕಾಣುತ್ತಿಲ್ಲ.

ಹಾಗಾದರೆ ಸಾಧನೆ ಸಮಾವೇಶ ಯಾರಿಗಾಗಿ, ಏತಕ್ಕಾಗಿ. ಕೇವಲ ರಾಜಕೀಯ ಪಕ್ಷಗಳ ಪ್ರಚಾರಕ್ಕಾಗಿ, ಮುಂದಿನ ಚುನಾವಣೆಯ ಗೆಲುವಿಗಾಗಿ, ಮತದಾರರ ಮೇಲೆ ಪ್ರಭಾವ ಬೀರುವ ಸಲುವಾಗಿ ಮಾತ್ರ ಈ ಸಮಾವೇಶವೇ.

ಸಾಧನೆಯ ಸಮಾವೇಶವೆಂದರೆ,
ಅದು ಆಡಳಿತ ವ್ಯವಸ್ಥೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪುವಂತೆ ಆದಾಗ ಮಾತ್ರ,
ಸಾಧನೆಯ ಪ್ರಚಾರವೆಂದರೆ, ಮಧ್ಯಮ ವರ್ಗದ ಜನ ಹಿಂದಿಗಿಂತ ಈಗ ತಮ್ಮ ಸುಖ, ಸಂತೋಷ, ನೆಮ್ಮದಿಯ ಗುಣಮಟ್ಟದಲ್ಲಿ ಖುಷಿ ಖುಷಿಯಾಗಿದ್ದಾಗ ಮಾತ್ರ, ಸಾಧನೆಯ ಸಂಭ್ರಮವೆಂದರೆ, ಮಕ್ಕಳು, ಮಹಿಳೆಯರು, ದುರ್ಬಲರು, ಶೋಷಿತರು ತಮ್ಮ ರಕ್ಷಣೆ, ಸ್ವಾತಂತ್ರ್ಯ ಸಮಾನತೆಯನ್ನು ನಿಜವಾಗಲೂ ಅನುಭವಿಸಿದಾಗ,
ಸಾಧನೆಯ ಸಾಧನೆ ಎಂದರೆ ಇಡೀ ಪರಿಸರ ತನ್ನ ಅಸ್ತಿತ್ವವನ್ನು ಹಾಗೆಯೆ ಉಳಿಸಿಕೊಂಡು ಯಾವುದೇ ಮಲಿನವಾಗದೆ ನಳನಳಿಸುತ್ತಿದ್ದಾಗ,
ಸಾಧನೆಯ ಹೆಮ್ಮೆ ಎಂದರೆ ಭಾಷೆ, ನೆಲ, ಜಲ, ಸಂಸ್ಕೃತಿ ತನ್ನ ಸ್ಥಾನವನ್ನು ಕಳೆದುಕೊಳ್ಳದೆ ಸಮೃದ್ಧವಾಗಿ ಬೆಳವಣಿಗೆಯಾದಾಗ ಮಾತ್ರ….

ಈ ಎಲ್ಲವೂ ಸರ್ಕಾರದ ಕಡೆಯಿಂದ ಸಾಧ್ಯವಾದಾಗ ಮಾತ್ರ ಸಾಧನೆಯ ಸಮಾವೇಶಕ್ಕೆ ಅರ್ಥವಿರುತ್ತದೆ. ಏಕೆಂದರೆ ರಾಜ್ಯ ಮತ್ತು ಕೇಂದ್ರದ ಎಲ್ಲಾ ಸಂಪನ್ಮೂಲಗಳ ಒಡೆತನ ಇರುವುದು ಸರ್ಕಾರದ ನಿಯಂತ್ರಣದಲ್ಲಿ. ಆದ್ದರಿಂದ ಸಮಾಜದಲ್ಲಿ ಹಿಂಸೆ, ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ಆತ್ಮಹತ್ಯೆ, ಅಪಘಾತ, ಅನಾಹುತ ನಿರಂತರವಾಗಿ ಹೆಚ್ಚುತ್ತಲೇ ಇರುವಾಗ ಸಾಧನೆಯ ಸಮಾವೇಶ ಒಂದು ಪ್ರಚಾರದ ತಂತ್ರ ಅಥವಾ ಅಪಹಾಸ್ಯವಾಗುತ್ತದೆ.

ರೈತ, ಕಾರ್ಮಿಕರು ಮುಖದಲ್ಲಿ ನಗುವನ್ನು ಕಂಡಾಗ ಅದು ನಿಜವಾದ ಸಾಧನೆ. ಕೇವಲ ಕೆಲವು ದೊಡ್ಡ ಮಟ್ಟದ ಉದ್ಯಮಿಗಳು, ಬ್ರೋಕರ್ಗಳು, ಪುಡಾರಿಗಳು ಮಾತ್ರ ಅಭಿವೃದ್ಧಿ ಹೊಂದಿದರೆ ಅದು ಸಾಧನೆಯಲ್ಲ. ರಸ್ತೆ ಬದಿಯ ಸಣ್ಣಪುಟ್ಟ ಹಣ್ಣು, ತರಕಾರಿ, ಊಟ, ಔಷಧಿ, ಬಟ್ಟೆ, ದಿನಸಿ ಮಾರುವವರು, ಕೆಲವು ವೃತ್ತಿ ನಿರತರು ನೆಮ್ಮದಿಯ ನಿಟ್ಟುಸಿರು ಬಿಟ್ಟಾಗ ಅದು ನಿಜವಾದ ಸಾಧನೆ.

ಇದು ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಅನ್ವಯಿಸುತ್ತದೆ. ಆ ಸರ್ಕಾರದ ಸಾಧನೆ ಹೆಚ್ಚೇನು ಇಲ್ಲ. ಅದು ಸಹ ವಿಫಲತೆಯ ಹಾದಿಯನ್ನು ಹಿಡಿದಿದೆ. ಕೇವಲ ಪ್ರದರ್ಶನ, ಭಾವುಕತೆಯಲ್ಲಿ ಮಾತ್ರ ಮುನ್ನಡೆಯುತ್ತಿದೆ. ಸಮಗ್ರ ಅಭಿವೃದ್ಧಿ ಸಾಧ್ಯವಾಗಿಲ್ಲ.

ನಮಗೆ ಕೇಂದ್ರ ಮತ್ತು ರಾಜ್ಯವೆಂಬ ಬೇದವೇನು ಇಲ್ಲ. ಆಡಳಿತ ಸಮಗ್ರವಾಗಿ ಎಲ್ಲಾ ಜನರನ್ನು ತಲುಪಿದಾಗ ರಾಜ್ಯ ಮತ್ತು ದೇಶದ ನಿಜವಾದ ಅಭಿವೃದ್ಧಿ. ಆಗ ಅದೊಂದು ಸಾಧನೆ ಎಂದು ಸಂಭ್ರಮಿಸಬೇಕು. ಈಗಂತೂ ಆ ಪರಿಸ್ಥಿತಿ ಖಂಡಿತ ಇಲ್ಲ, ಅದಕ್ಕಾಗಿ ವಿಷಾದವಿದೆ….

ಹಾಗೆಂದು ಏನು ಕೆಲಸವೇ ಆಗಿಲ್ಲವೆಂದಲ್ಲ, ಖಂಡಿತವಾಗಲೂ ಒಂದಷ್ಟು ಒಳ್ಳೆಯ ಕೆಲಸಗಳು ಆಗುತ್ತಿವೆ. ಆದರೆ ಅದನ್ನು ಸಾಧನೆ ಎಂದು ವಿಜೃಂಭಿಸುವಷ್ಟು ವಾಸ್ತವವಾಗಿ ಇಲ್ಲ.

ಮುಂದಿನ ದಿನಗಳಲ್ಲಿ ಸರ್ಕಾರಗಳು ಆತ್ಮ ವಿಮರ್ಶೆ ಮಾಡಿಕೊಂಡು, ತಮ್ಮ ತಪ್ಪುಗಳನ್ನು ತಿದ್ದಿಕೊಂಡು, ಒಂದಷ್ಟು ಬದಲಾವಣೆಯಾಗಿ ನಿಜವಾದ ಸಾಧನೆ ಮಾಡುವಂಥಾಗಲಿ ಎಂದು ಆಶಿಸೋಣ, ಹಾರೈಸೋಣ, ಎಚ್ಚರಿಸೋಣ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ತಿಪ್ಪೂರು ವಿಎಸ್ ಎಸ್ ಎನ್ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪೂರು ವ್ಯವಸಾಯ ಸೇವಾ ಸಹಕಾರ ಸಂಘ(ವಿಎಸ್ಎಸ್ ಎನ್) ಚುನಾವಣೆ ನಡೆದಿದ್ದು, ವಿಎಸ್ಎಸ್ ಎನ್ ನ ನೂತನ ಅಧ್ಯಕ್ಷರಾಗಿ…

12 hours ago

ಹಕ್ಕಿಜ್ವರ ಶಂಕೆ: ನವಿಲುಗಳ ಮಾರಣ ಹೋಮ…

ನೆಲಮಂಗಲ: ನೆಲಮಂಗಲದಲ್ಲಿ ನವಿಲುಗಳ ಸಾಮೂಹಿಕ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಹಕ್ಕಿಜ್ವರ (Bird Flu)ಶಂಕೆಯಿಂದ ಸುಮಾರು 10-15 ನವಿಲುಗಳು ಸಾವನ್ನಪ್ಪಿದ…

13 hours ago

ಮೇ.21ಕ್ಕೆ ಭೂಸ್ವಾಧೀನ ವಿರೋಧಿಸಿ ಡಿಸಿ ಕಚೇರಿಗೆ ಟ್ರ್ಯಾಕರ್ ಮೆರವಣಿಗೆ

ದೊಡ್ಡಬೆಳವಂಗಲ ಹೋಬಳಿಯ 2100 ಎಕರೆಯ ಭೂಸ್ವಾಧೀನ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿಗೆ ದೊಡ್ಡಬೆಳವಂಗಲ,‌ ಚಿಕ್ಕಬೆಳವಂಗಲ, ಸೊಣ್ಣೇನಹಳ್ಳಿ, ರಾಂಪುರ, ನಾರನಹಳ್ಳಿ ಗ್ರಾಮಗಳ ರೈತರಿಂದ…

14 hours ago

ಸ್ನೇಹಿತನ ಬರ್ತಡೇ ಪಾರ್ಟಿಗೆ ಬಂದಿದ್ದ ಯುವಕ ಈಜುಕೊಳಕ್ಕೆ ಬಿದ್ದು ಸಾವು

ದೊಡ್ಡಬಳ್ಳಾಪುರ: ಸ್ನೇಹಿತನ ಬರ್ತಡೇ ಪಾರ್ಟಿಗೆಂದು ಖಾಸಗಿ ರೆಸಾರ್ಟ್‌ಗೆ ಬಂದಿದ್ದ ಯುವಕನೊಬ್ಬ ನಿದ್ದೆಗಣ್ಣಿನಲ್ಲಿ ಈಜುಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ದೊಡ್ಡಬಳ್ಳಾಪುರ ತಾಲೂಕಿನ…

15 hours ago

ದಶಕಗಳುರುಳಿದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಿಲ್ಲ ಜಿಲ್ಲಾ ಕೇಂದ್ರ

ರಾಜ್ಯ ರಾಜಧಾನಿ ಬೆಂಗಳೂರಿಗೆ ಪಕ್ಕದಲ್ಲೇ ಇರುವ ಜಿಲ್ಲೆ ಎಂದರೆ ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಕೈಗಾರಿಕಾ ಬೆಳವಣಿಗೆ, ವೇಗವಾದ ನಗರೀಕರಣ,…

1 day ago

ದೇವೇಗೌಡರ ವ್ಯಕ್ತಿತ್ವವನ್ನು ವಿಮರ್ಶೆಗೆ ಒಳಪಡಿಸುವುದು ಸಹ ಅಷ್ಟೇ ಸಂಕೀರ್ಣ….

ಸನ್ಮಾನ್ಯ ಶ್ರೀ ಎಚ್. ಡಿ. ದೇವೇಗೌಡ,... 94, ನಾಟ್ ಔಟ್, ಶತಕಕ್ಕೆ 6 ಮಾತ್ರ ಬಾಕಿ, ಅವರು ಶತಕವನ್ನು ಪೂರೈಸಲಿ…

1 day ago