ತಾಲೂಕಿನ ತಾಯಿ-ಮಗು ಸರಕಾರಿ ಆಸ್ಪತ್ರೆಗೆ ಬರುವ ಒಳ ಮತ್ತು ಹೊರ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ತಾಲೂಕಿನ ಬೃಹತ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕುಡಿಯುವ ಬಾಟೆಲ್ ನೀರಿಗಾಗಿ ಹೊರಗಿನ ಹೋಟೆಲ್‌ಗಳನ್ನು ಅವಲಂಬಿಸಬೇಕಾಗಿದೆ. ಇನ್ನೂ ಸರಕಾರಿ ಆಸ್ಪತ್ರೆಗೆ ತಡರಾತ್ರಿ ಬರುವ ರೋಗಿಗಳಿಗೆ ಕುಡಿಯುವ ನೀರು ಸಿಗುವುದೇ ಕಷ್ಟಕರವಾಗಿದೆ.
100 ಹಾಸಿಗೆಗಳ ತಾಯಿ-ಮಗು ಆಸ್ಪತ್ರೆಯನ್ನು ಮೇಲ್ದಜೆಗೇರಿಸಲಾಗಿದೆ. ನಿತ್ಯವೂ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ರೋಗಿಗಳು ಮಾತ್ರೆ ನುಂಗಲು ಸಹ ಆಸ್ಪತ್ರೆಯಲ್ಲಿ ನೀರು ದೊರೆಯುತ್ತಿಲ್ಲ. ಆಸ್ಪತ್ರೆಯ ಆಡಳಿತ ಮಂಡಳಿ ಇದರತ್ತ ಗಮನ ಹರಿಸದೆ ರೋಗಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಸಹ ಮಾಡದಿರುವುದು ಆಸ್ಪತ್ರೆಗೆ ಬರುವ ರೋಗಿಗಳ ಕಣ್ಣು ಕೆಂಪಗಾಗಿಸಿದೆ.
ಪ್ರತಿನಿತ್ಯ ಆಸ್ಪತ್ರೆಗೆ ಸುಮಾರು 1500 ಜನ ಬಂದು ಹೋಗುತ್ತಾರೆ. ಒಳ ಮತ್ತು ಹೊರ ರೋಗಿಗಳಿಗೆ ಕುಡಿಯಲು ಶುದ್ಧ ನೀರಿಲ್ಲ. ಇದಕ್ಕಾಗಿ ಒಂದು ಶುದ್ಧ ನೀರಿನ ಘಟಕ ನಿರ್ಮಾಣ ಅತ್ಯಂತ ಜರೂರು ಅವಶ್ಯಕವಾಗಿದೆ. ಸರಕಾರಿ ಆಸ್ಪತ್ರೆಗೆ ಬಡವರೇ ಬರುವುದರಿಂದ ನೀರಿನ ಬಾಟೆಲ್‌ಗಳಿಗಾಗಿ ವೃಥ ಹಣ ವ್ಯಯಿಸಬೇಕಾಗಿದೆ.
ಹೆರಿಗೆಗಾಗಿ ಬರುವ ಮಹಿಳೆಯರಿಗೆ ಡಿಲಿವರಿ ಆದ ಬಳಿಕ ಕುಡಿಯಲು ಮತ್ತು ಬಳಸಲು ಬಿಸಿ ನೀರಿನ ಅಗತ್ಯತೆ ಇದೆ. ಬಾಣಂತಿಯರಿಗೆ ಬಿಸಿ ನೀರಿಗಾಗಿ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಬಿಸಿ ನೀರಿಗೂ ಹೋಟೆಲ್‌ಗಳನ್ನು ಆಶ್ರಯಿಸಬೇಕಾಗಿದೆ. ಹೋಟೆಲ್‌ಗಳಲ್ಲಿ ಬಿಸಿ ನೀರಿಗಾಗಿ ಒಂದು ಲೀಟರ್‌ನ ದುಪಟ್ಟು ಹಣ ತೆತ್ತಬೇಕಾಗಿದೆ.
ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಮಂದಿ ರೋಗಿಗಳು ಬಂದು ಹೋಗುತ್ತಾರೆ. ಖಾಸಗಿ ಕಂಪನಿಯವರು ಕುಡಿಯವ ನೀರಿನ ಪ್ಲಾಂಟ್ ಆಸ್ಪತ್ರೆಗೆ ಕೊಡುಗೆ ನೀಡಿದ್ದರು. ಪದೇ ಪದೇ ಕೆಟ್ಟು ನಿಂತಿರುವುದರಿAದ ರೋಗಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳ ಅನುಕೂಲಕ್ಕಾಗಿ ಯಾರಾದರೂ ದಾನಿಗಳು ಶಾಶ್ವತ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಟ್ಟರೆ ತುಂಬಾ ಅನುಕೂಲವಾಗುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ರಮೇಶ್ ಅವರು ತಿಳಿಸಿದರು.
ಅಪಘಾತ ಅಥವಾ ಹೆರಿಗೆಯಂತಹ ತುರ್ತು ಸಂದರ್ಭದಲ್ಲಿ ರಾತ್ರಿ ವೇಳೆ ಆಸ್ಪತ್ರೆಗೆ ಬಂದರೆ ಇಡೀ ಆಸ್ಪತ್ರೆ ಆವರಣದಲ್ಲಿ ಕುಡಿಯುವ ನೀರು ಸಿಗುವುದಿಲ್ಲ. ಇನ್ನೂ ರಾತ್ರಿ ವೇಳೆ ಹೋಟೆಲ್‌ಗಳು ತೆರೆದಿರುವುದಿಲ್ಲ. ಇಂತಹ ಸಮಯದಲ್ಲಿ ನೀರಿಲ್ಲದೆ ಪರದಾಡುವಂತಾಗಿದೆ. ಶೀಘ್ರವಾಗಿ ನೀರನ ಘಟಕ ಅಳವಡಿಸಿ ನೀರಿನ ವ್ಯವಸ್ಥೆ ಮಾಡಿ ರೋಗಿಯ ಸಂಬಂಧಿ ಮಂಜುನಾಥ ಎಂಬುವವರು ಒತ್ತಾಯಿಸಿದರು.