ಜೀವಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಯೂ ತನಗೆ ಹೋಲಿಕೆಯಿರುವ ಸಂತತಿಯನ್ನು ಸೃಷ್ಟಿಸುತ್ತದೆ. ಸಂತತಿಯು ಬೆಳೆದು ಪ್ರೌಢಾವಸ್ಥೆ ತಲುಪಿ ಮತ್ತೆ ಹೊಸ ಸಂತತಿಯನ್ನು ಮುಂದುವರೆಸುತ್ತದೆ. ಅಂದರೆ ಹುಟ್ಟು, ಬೆಳವಣಿಗೆ ಮತ್ತು ಸಾವಿನ ಚಕ್ರ ಕೊನೆಯಿರದಂತೆ ನಡೆಯುತ್ತಿರುತ್ತದೆ. ಸಂತಾನೋತ್ಪತ್ತಿಯು ಪೀಳಿಗೆಯಿಂದ ಪೀಳಿಗೆಗೆ ಪ್ರಭೇದದ ನಿರಂತರತೆಯೊಂದಿಗೆ ತಳಿ ವೈವಿಧ್ಯತೆಯನ್ನು ಕಾಪಾಡುತ್ತದೆ.
ಜೀವಪ್ರಪಂಚದಲ್ಲಿ ಹೇರಳವಾದ ವೈವಿಧ್ಯತೆಯಿದ್ದು, ಪ್ರತಿಯೊಂದು ಜೀವಿಯೂ ವೃದ್ಧಿಯಾಗಲು ಮತ್ತು ಸಂತತಿಯನ್ನು ಪುನರುತ್ಪಾದಿಸಲು ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಿಕೊಂಡಿದೆ. ಹೇಗೆ ಸಂತಾನೋತ್ಪತ್ತಿ ಮಾಡಬೇಕೆಂಬುದನ್ನು… ಜೀವಿಯ ಆವಾಸ ಸ್ಥಾನ, ಆಂತರಿಕ ಶರೀರಕ್ರಿಯೆಗಳು ಹಾಗೂ ಮತ್ತಿತರ ಅಂಶಗಳು ನಿರ್ಧರಿಸುತ್ತವೆ. ಒಂದೇ ಜೀವಿ ಅಥವಾ ಎರಡು ಜೀವಿಗಳು ಸಂತಾನೋತ್ಪತ್ತಿಯಲ್ಲಿ ಭಾಗವಹಿಸುತ್ತವೆ ಎಂಬುದನ್ನು ಅವಲಂಬಿಸಿ ಸಂತಾನೋತ್ಪತ್ತಿಯನ್ನು ಅಲೈಂಗಿಕ (asexual reproduction) ಮತ್ತು ಲೈಂಗಿಕ ಸಂತಾನೋತ್ಪತ್ತಿ (sexual reproduction ) ಎಂದು ಕರೆಯಲಾಗುತ್ತದೆ.
ಲೈಂಗಿಕ ಸಂತಾನೋತ್ಪತ್ತಿಯು ಪುರುಷ ಮತ್ತು ಸ್ತ್ರೀ ಲಿಂಗಾಣುಗಳ ಉತ್ಪತ್ತಿ ಹಾಗೂ ಸಮ್ಮಿಲನವನ್ನು ಒಳಗೊಂಡು ‘ಯುಗ್ಮಜ’ (zygote) ವಾಗುತ್ತದೆ. ಈ ಯುಗ್ಮಜವು ಬೆಳವಣಿಗೆ ಹೊಂದಿ ಹೊಸ ಜೀವಿಯನ್ನು ಉತ್ಪತ್ತಿ ಮಾಡುತ್ತದೆ. ಇದು ವಿಸ್ತಾರವಾದ, ಸಂಕೀರ್ಣವಾದ ಮತ್ತು ನಿಧಾನಗತಿಯ ಪ್ರಕ್ರಿಯೆ. ಈ ರೀತಿಯ ಸಂತಾನೋತ್ಪತ್ತಿಯಿಂದ ಬಂದಂತಹ ಜೀವಿಗಳು ಪರಸ್ಪರ ಸಾಮ್ಯತೆಯಿಲ್ಲದ ಸಂತತಿಗೆ ಕಾರಣವಾಗುತ್ತವೆ. ಇದು ವಿಕಾಸದ ಹಾದಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ.
ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಸ್ತ್ರೀ ಹಾಗೂ ಪುರುಷ ಲಿಂಗಾಣುಗಳು ಸಮ್ಮಿಲನವಾಗುವುದು ಪ್ರಮುಖ ಘಟ್ಟ. ಇದನ್ನೇ ನಿಷೇಚನ (fertilization) ಎಂದು ಕರೆಯುತ್ತಾರೆ. ಇದು ಕೆಳವರ್ಗದ ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ನಡೆಯುತ್ತದೆ. ಗಂಡು ಮತ್ತು ಹೆಣ್ಣು ಲಿಂಗಾಣುಗಳು ಪೂರ್ತಿ ಬೆಳವಣಿಗೆಯಾದ ನಂತರ ಹೊರಮಾಧ್ಯಮಕ್ಕೆ(ನೀರು) ಬಿಡುಗಡೆಗೊಳ್ಳುತ್ತವೆ. ಇದರಲ್ಲಿ ಅಸಂಖ್ಯಾತ ಲಿಂಗಾಣುಗಳು ಬಿಡುಗಡೆಯಾದರೂ ಅವು ಮಿಲನಗೊಂಡು ಹೊಸಜೀವಿಯಾಗಿ ರೂಪುಗೊಂಡು ವಯಸ್ಕ ಹಂತವನ್ನು ತಲುಪುವುದು ಕಷ್ಟಸಾಧ್ಯ! ಆದರೆ ಮೇಲ್ವರ್ಗದ ಜೀವಿಗಳಲ್ಲಿ ಲಿಂಗಾಣುಗಳು ದೇಹದ ಒಳಗೆ ಮಿಲನವಾಗುತ್ತವೆ ಹಾಗೂ ಅವುಗಳ ಸಂಖ್ಯೆ ಬಹಳ ಕಡಿಮೆಯಿರುತ್ತದೆ. ಕಡಿಮೆಯಿದ್ದರೂ ಉಳಿಯುವ ಸಾಧ್ಯತೆ ಹೆಚ್ಚು. ಇದನ್ನು ಆಂತರಿಕ ನಿಷೇಚನ (internal fertilization) ಎನ್ನುತ್ತಾರೆ. ಇದರಲ್ಲಿ ಚಲನೆಯುಳ್ಳ ಪುರುಷ ಲಿಂಗಾಣುಗಳು ಚಲನೆಯಿಲ್ಲದೆ ಅಂಡಾಣುವನ್ನು ತಲುಪುವುದು ಅತ್ಯವಶ್ಯಕ. ಈ ಸಂತಾನೋತ್ಪತ್ತಿಯಲ್ಲಿ ಉತ್ಪಾದನೆಯಾಗುವ ವೀರ್ಯಾಣುಗಳ ಸಂಖ್ಯೆ ಅಧಿಕವಾಗಿದ್ದರೂ ಕೂಡ ಅಂಡಾಣುಗಳ ಸಂಖ್ಯೆ ಬಹಳ ಕಡಿಮೆ. (ಮನುಷ್ಯನಲ್ಲಿ ವೀರ್ಯಾಣುಗಳ ಸಂಖ್ಯೆ 300 ರಿಂದ 400 ಮಿಲಿಯನ್. ಅಂಡಾಣು ಒಂದೇ ಒಂದು.
ಒಂದು ಅಂಡಾಣು ಫಲಿತವಾಗಬೇಕೆಂದರೆ 300 ರಿಂದ 400 ಮಿಲಿಯನ್ ವೀರ್ಯಾಣುಗಳು ಬೇಕು.) ಈ ಪ್ರಕ್ರಿಯೆಯಲ್ಲಿ ಲಿಂಗಾಣುಗಳ ಮಿಲನ ಹಾಗೂ ಮುಂದಿನ ಹಂತದ ಬೆಳವಣಿಗೆ, ಭ್ರೂಣೋತ್ಪತ್ತಿ (embryogenesis) ಹಾಗೂ ಅದರ ಸರಿಯಾದ ಪಾಲನೆ ಪೋಷಣೆ ಹೆಣ್ಣು ಜೀವಿಯ ದೇಹದ ಒಳಗೇ ಆಗುತ್ತದೆ. ನಿರ್ದಿಷ್ಟ ಬೆಳವಣಿಗೆಯ ನಂತರ ಮರಿಗಳು ಅಥವಾ ಮೊಟ್ಟೆಗಳು ಹೆಣ್ಣು ಜೀವಿಯ ದೇಹದಿಂದ ಹೊರ ಬರುತ್ತವೆ. ಇದು ಸಾಮಾನ್ಯವಾಗಿ ಜೀವ ಜಗತ್ತಿನ ಎಲ್ಲಾ ಪ್ರಾಣಿ, ಸಸ್ಯವರ್ಗದಲ್ಲಿ ಕಂಡುಬರುವ ರೀತಿ. ಆದರೆ ಇದಕ್ಕೆ ಅಪವಾದ ಎಂಬಂತೆ ‘ಸಮುದ್ರ ಕುದುರೆ’ (Hippo campus ) ಎನ್ನುವ ಮೀನುಗಳಲ್ಲಿ ಗಂಡು ಗರ್ಭ ಧರಿಸಿ ಭ್ರೂಣಗಳನ್ನು ಪೋಷಿಸಿ, ಮರಿಗಳಿಗೆ ಜನ್ಮ ನೀಡುತ್ತದೆ..!
ಸಮುದ್ರ ಕುದುರೆಯು ಪ್ರಾಣಿ ಸಾಮ್ರಾಜ್ಯದ ಮೀನುಗಳ ವರ್ಗಕ್ಕೆ ಸೇರುತ್ತದೆ. ಇದು ಮೂಳೆಯಿರುವ ಸಮುದ್ರಮೀನು. Actinoptergyii ಎಂಬ ಉಪವರ್ಗಕ್ಕೂ Syngnathidae ಎಂಬ ಕುಟುಂಬಕ್ಕೂ ಸೇರುತ್ತದೆ.
ಸಮುದ್ರ ಕುದುರೆಯಲ್ಲಿ ಸುಮಾರು 46 ಪ್ರಭೇದಗಳಿವೆ. Hippocampus ಎಂಬ ಪದವು ಗ್ರೀಕ್ ಶಬ್ಧದಿಂದ ಬಂದಿದೆ. Hippos ಎಂದರೆ ಕುದುರೆ; campus ಎಂದರೆ ಸಮುದ್ರ ಜೀವಿ ಎಂದಾಗುತ್ತದೆ. (ಅಲ್ಲದೇ, Hippocampus ಎಂಬುದು ನಮ್ಮ ಮೆದುಳಿನ ಒಂದು ಸಂಕೀರ್ಣ ಭಾಗವಾಗಿದ್ದು, ಕಲಿಯುವಿಕೆ ಹಾಗೂ ನೆನಪಿನ ಶಕ್ತಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ.) ಸಮುದ್ರ ಕುದುರೆ ಆಳವಿಲ್ಲದ, ತೀರಪ್ರದೇಶಗಳಲ್ಲಿ ಕಂಡುಬರುತ್ತದೆ. ಇವುಗಳನ್ನು ಅಳಿವೆಯ ಸಮುದ್ರ ಕುದುರೆ (Esturian Hippocampus), ಹಳದಿ ಅಥವಾ ಚುಕ್ಕೆ ಸಮುದ್ರ ಕುದುರೆ ಎಂದು ಅವುಗಳ ವಾಸಸ್ಥಳದ ಆಧಾರದ ಮೇಲೆ ಗುರುತಿಸಲಾಗುತ್ತದೆ. ಈ ಜೀವಿಗಳು ಬೇರೆ ಮೀನುಗಳಿಗಿಂತ ರಚನೆಯಲ್ಲಿ ವಿಭಿನ್ನವಾಗಿವೆ. ಇವುಗಳು 20 ಸೆಂಟಿಮೀಟರ್’ನಿಂದ ಹಿಡಿದು 8 ಇಂಚುಗಳಷ್ಟು ಉದ್ದವಾಗಿ ಬೆಳೆಯಬಲ್ಲವು. ಇವುಗಳ ತಲೆ ಕುದುರೆಯಾಕಾರದಲ್ಲಿದೆ. ತಲೆಯಲ್ಲಿ ಮೂತಿಯು ಮುಂದಕ್ಕೆ ಚಾಚಿಕೊಂಡಿದ್ದು, ಹಲ್ಲುಗಳಿಲ್ಲದ ಸಣ್ಣ ಬಾಯಿರುತ್ತದೆ. ದೇಹವು ಉಂಗುರಾಕಾರದ ಮೂಳೆಯ ಮಾಪಕಗಳಿಂದಾಗಿರುತ್ತದೆ(scales). ಇವು ಸಾಮಾನ್ಯವಾಗಿ ನಿಧಾನವಾಗಿ, ನೇರವಾಗಿ ಚಲಿಸುತ್ತವೆ. ಬೇರೆ ಮೀನುಗಳಿಗಿರುವಂತೆ ಇವುಗಳಿಗೆ ಹೊಟ್ಟೆ ಹಾಗೂ ಬಾಲದ ಕಿವಿರುಗಳಿಲ್ಲ. ಸಮುದ್ರದ ಹುಲ್ಲಿನ ಮಧ್ಯ ಅಥವಾ ಯಾವುದಾದರೂ ಚಲನೆಯಿಲ್ಲದ ಸಮುದ್ರದ ವಸ್ತುಗಳಿಗೆ ತಮ್ಮ ಬಾಲದಿಂದ ಅಂಟಿಕೊಂಡು ಶತ್ರುಗಳಿಂದ ತಪ್ಪಿಸಿಕೊಳ್ಳುತ್ತವೆ.
ಸಮುದ್ರ ಕುದುರೆಯ ಸಂತಾನೋತ್ಪತ್ತಿಯೇ ವಿಶಿಷ್ಟವಾದುದು. ಸಾಮಾನ್ಯವಾಗಿ ಸಮುದ್ರ ಕುದುರೆಗಳು ಮೇ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ(seasonal breeders) ಜೊತೆಗೆ ಇವು ಏಕ ಸಂಗಾತಿಗಳಾಗಿವೆ.
ಸಂತಾನೋತ್ಪತ್ತಿಗೆ ಮುಂಚೆ ಗಂಡು, ಹೆಣ್ಣು courtshipನಲ್ಲಿ ತೊಡಗುತ್ತವೆ. ಕಾಂಗರುಗಳಿಗಿರುವಂತೆ ಗಂಡು ಸಮುದ್ರ ಕುದುರೆಯ ಬಾಲದ ಮೇಲ್ಭಾಗದಲ್ಲಿ ಉಬ್ಬಿದಾಕಾರದ ಗರ್ಭಚೀಲವಿರುತ್ತದೆ (brood pouch). ಹೆಣ್ಣು ಸಮುದ್ರ ಕುದುರೆಯು ovipositor (ಕೊಳವೆಯಾಕಾರದ ರಚನೆ)ನ್ನು ಬಳಸಿ ಗರ್ಭಚೀಲದೊಳಗೆ ಅಂಡಾಣುಗಳನ್ನು ಬಿಡುಗಡೆಗೊಳಿಸುತ್ತದೆ. ಈ ಸಮಯದಲ್ಲಿ ವೀರ್ಯಾಣುಗಳು ವೀರ್ಯಾಣುನಾಳದಿಂದ ಗರ್ಭಚೀಲವನ್ನು ಸೇರುತ್ತವೆ. Hippocampus kudaದಲ್ಲಿ ಗರ್ಭಚೀಲವು ಆರು ಸೆಕೆಂಡ್ ಗಳಷ್ಟು ಕಾಲ ಮಾತ್ರ ತೆರೆದಿರುತ್ತದೆ. ಈ ಸಮಯದಲ್ಲಿ ಸಮುದ್ರದ ನೀರು ಒಳಹೋಗಿ ವೀರ್ಯಾಣು ಅಂಡಾಣುಗಳು ಮಿಲನಗೊಳ್ಳಲು ಸಹಾಯ ಮಾಡುವುದಲ್ಲದೆ ವೀರ್ಯಾಣುಗಳನ್ನು ಕಾರ್ಯರೂಪುಗೊಳ್ಳುವಂತೆ ಮಾಡುತ್ತದೆ.
ಪ್ರಭೇದಗಳನ್ನು ಅನುಸರಿಸಿ ಫಲಿತಗೊಂಡ ಅಂಡಾಣುಗಳು ಗರ್ಭಚೀಲದಲ್ಲಿ 10 ದಿನದಿಂದ ಆರು ವಾರಗಳ ತನಕ ಇರುತ್ತವೆ. ಈ ಅವಧಿಯು ನೀರಿನ ಉಷ್ಣತೆಯನ್ನು ಅವಲಂಬಿಸಿರುತ್ತದೆ. ಪ್ರಭೇದಗಳನ್ನು ಅವಲಂಬಿಸಿ ಗರ್ಭಚೀಲದೊಳಗೆ 500 ರಿಂದ 1000 ಮರಿಗಳಿರುತ್ತವೆ. ಬೆಳವಣಿಗೆಯ ಅವಧಿಯಲ್ಲಿ ಗರ್ಭಚೀಲದ ಒಳಗಡೆಯಿರುವ ದ್ರವದ ರಾಸಾಯನಿಕಗಳು ಭ್ರೂಣಗಳಿಗೆ ಪೋಷಣೆ ನೀಡುತ್ತವಲ್ಲದೇ prolactin ಎನ್ನುವ ಹಾರ್ಮೋನ್ ಕೂಡ ಬಿಡುಗಡೆಯಾಗುತ್ತದೆ. (Prolactin ಹಾರ್ಮೋನ್ ಸಾಮಾನ್ಯವಾಗಿ ಹೆಣ್ಣು ಜೀವಿಯಲ್ಲಿ ಹೆಚ್ಚು.
ಮರಿ ಜನಿಸಿದ ನಂತರ ಹಾಲು ಸ್ರವಿಸುವಿಕೆಗೆ ಇದು ಸಹಾಯ ಮಾಡುತ್ತದೆ). ಇದು ಹೆಣ್ಣು ಜೀವಿಯಿಂದ ಬಂದಂತ ಪ್ರೋಟಿನ್’ಗಳನ್ನು ಒಡೆದು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಗರ್ಭಧಾರಣೆ ಅವಧಿ ಪೂರ್ತಿಯಾದ ನಂತರ ಗರ್ಭಚೀಲದ ಒಳಭಾಗದಲ್ಲಿರುವ ಅಂಗಾಂಶಗಳು ಸಂಕುಚಿತಗೊಳ್ಳುವುದರಿಂದ ಗರ್ಭಚೀಲವು ತೆರೆದುಕೊಂಡು ಮರಿಗಳು ನೀರಿಗೆ ಬಿಡುಗಡೆಗೊಳ್ಳುತ್ತವೆ. (ಹೆಚ್ಚಿನ ಮೀನುಗಳು ಮೊಟ್ಟೆಯಿಡುತ್ತವೆ. ಆದರೆ ಕೆಲವು ಮೀನುಗಳು ಮರಿ ಹಾಕುತ್ತವೆ.) ಮರಿಗಳು ಸಾಮಾನ್ಯವಾಗಿ 2.2 ರಿಂದ 2.8 ಇಂಚುಗಳಷ್ಟು ಉದ್ದವಿರುತ್ತದೆ. ನಂತರ ಮರಿಗಳು ಸ್ವತಂತ್ರವಾಗಿ ಬೆಳವಣಿಗೆ ಹೊಂದುತ್ತವೆ; ಜೊತೆಗೆ ಶತ್ರುಗಳಿಂದ ತಪ್ಪಿಸಿಕೊಂಡು ನೀರಿನ ಪ್ರವಾಹದೊಂದಿಗೆ ಆಹಾರ ಹೆಚ್ಚಿರುವ ಜಾಗಗಳಲ್ಲಿ ಆಶ್ರಯ ಪಡೆಯುತ್ತವೆ. ಪ್ರಕೃತಿಯ ವೈಪರೀತ್ಯಗಳೊಂದಿಗೆ ಹೋರಾಟ ನಡೆಸುತ್ತಾ ಬದುಕುಳಿದವು ಮಾತ್ರ ತಮ್ಮ ಸಂತತಿಯನ್ನು ಮುಂದುವರೆಸುತ್ತವೆ.
ಈ ಮೀನನ್ನು ಅಪಾರವಾಗಿ ಚೀನಾದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಹಾಗೂ ಅಲೋಪತಿ ವೈದ್ಯಕೀಯ ಕ್ಷೇತ್ರ, ಬಂಜೆತನ ನಿವಾರಣೆ, ಬಕ್ಕತಲೆ, ಅಸ್ತಮಾ, ಕೀಲುನೋವುಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ. Hippocampus kuda ಪ್ರಭೇದದಿಂದ ತೆಗೆಯುವ ಕ್ಯಾಥಪ್ಸೀನ್ (Cathepsin) ಎನ್ನುವ ಪ್ರೋಟಿನ್’ನನ್ನು ಕೀಲುನೋವು ಹಾಗೂ ಅದಕ್ಕೆ ಸಂಬಂಧಿಸಿದ ಉರಿಯೂತವನ್ನು ಕಮ್ಮಿ ಮಾಡಲು ಉಪಯೋಗಿಸುತ್ತಾರೆ. ಸಮುದ್ರ ಕುದುರೆಯು ಹೆಚ್ಚು ಪ್ರೋಟೀನ್ ಹಾಗೂ ಕೊಬ್ಬಿನಂಶಗಳನ್ನು ಹೊಂದಿರುವುದರಿಂದ ಆಹಾರವಾಗಿಯೂ ಸೇವಿಸುತ್ತಾರೆ.
ಸಮುದ್ರ ಕುದುರೆಗಳ ಜೀವಿತಾವಧಿ ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಇರುತ್ತದೆ. ಇವುಗಳನ್ನು ಅಕ್ವೇರಿಯಂಗಳಲ್ಲು ಸಾಕಬಹುದು. ಅಕ್ವೇರಿಯಂಗಳಲ್ಲಿ ಸರಿಯಾಗಿ ರಕ್ಷಣೆ ನೀಡಿದರೆ 3 ರಿಂದ 6 ವರ್ಷಗಳವರೆಗೆ ಬದುಕಬಲ್ಲವು.
ಸಮುದ್ರ ಕುದುರೆಗಳು ಸಮುದ್ರದ ಅತ್ಯಂತ ಆಕರ್ಷಣೀಯ ಜೀವಿಗಳು. ಇವುಗಳನ್ನು ಅಕ್ವೇರಿಯಂನಲ್ಲಿ ಅಲಂಕಾರಕ್ಕಾಗಿ, ವೈದ್ಯಕೀಯ ಕ್ಷೇತ್ರದಲ್ಲಿ, ಆಹಾರ ಹಾಗೂ ಇನ್ನಿತರ ಕಾರಣಗಳಿಗಾಗಿ ಬಳಸುವುದರಿಂದ ಇವುಗಳ ಕೆಲವು ಪ್ರಭೇದಗಳು ಗಣನೀಯವಾಗಿ ಕುಸಿಯುತ್ತಿವೆ.
ಪ್ರತಿವರ್ಷ 40 ಮಿಲಿಯನ್ ಸಮುದ್ರ ಕುದುರೆಗಳು ಸಾಯುತ್ತಿವೆ. ಅಲ್ಲದೇ, ಆವಾಸಸ್ಥಾನದ ಅಳಿಯುವಿಕೆ, ಸಮುದ್ರ ಮಾಲಿನ್ಯ ಹಾಗೂ ಹವಳ ದ್ವೀಪಗಳ ನಾಶವಾಗುವಿಕೆಯು ಇವುಗಳ ಅಳಿವಿಗೆ ಕಾರಣವಾಗುತ್ತಿರುವುದು ವಿಷಾದನೀಯ.
ಜೀವವಿಕಾಸದ ಹಾದಿಯಲ್ಲಿ ಮೀನಾದರೂ ವಿಭಿನ್ನವಾಗಿ ವಿಕಾಸಹೊಂದಿ ಗಂಡಿನಲ್ಲಿ ಗರ್ಭಧಾರಣೆ ಹಾಗೂ ಪೋಷಣೆ ಮಾಡುವುದು ಎರಡೂ ವಿಸ್ಮಯಕಾರಕ ಸಂಗತಿಗಳೇ. ವಿಕಾಸದ ನೇರದಾರಿಯನ್ನು ಬಿಟ್ಟು ಬೇರೆ ರೀತಿಯ ವಿಕಾಸದ ಹಾದಿ ಹಿಡಿದ ಸಮುದ್ರ ಕುದುರೆ ಜೀವಲೋಕದ ವಿಸ್ಮಯವೇ ಸರಿ.
✍ ನಾಗಮಣಿ ಬಿ.ಜೆ, ಜೀವಶಾಸ್ತ್ರ ಉಪನ್ಯಾಸಕರು
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು. ಹಾಸನ