ಸಮಾಜದ ಸ್ವಾಸ್ಥ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ- ಇಲ್ಲವಾದಲ್ಲಿ‌ ಕಠಿಣ ಕಾನೂನಿನ ಕ್ರಮ ಗ್ಯಾರಂಟಿ- ಡಿವೈಎಸ್‌ಪಿ ರವಿ.ಪಿ

ದುರ್ವರ್ತನೆ ಬದಲಾಯಿಸಿಕೊಂಡು ಸನ್ನಡತೆಯಿಂದ ಸಮಾಜದಲ್ಲಿ ಇರುವಂತೆ ಡಿವೈಎಸ್‌ಪಿ ರವಿ.ಪಿ ಅವರು ರೌಡಿ ಶೀಟರ್ ಗಳಿಗೆ ಕಿವಿ ಮಾತು ಹೇಳಿದರು.

ದೊಡ್ಡಬಳ್ಳಾಪುರ ಉಪವಿಭಾಗ ವ್ಯಾಪ್ತಿಯ ನಗರ, ಗ್ರಾಮಾಂತರ, ದೊಡ್ಡಬೆಳವಂಗಲ, ಹೊಸಹಳ್ಳಿ‌ ಪೊಲೀಸ್ ಠಾಣೆ ಸೇರಿದಂತೆ ಒಟ್ಟು 8 ಠಾಣೆಗಳ ಸುಮಾರು 52 ರೌಡಿ ಶೀಟರ್ ಗಳ ಮಾಹಿತಿ ಪಡೆದ ಅವರು, ದುಷ್ಟ ವರ್ತನೆಯನ್ನು ಬದಲಾಯಿಸಿಕೊಂಡು ಸೌಜನ್ಯತೆಯಿಂದ ಸಮಾಜದಲ್ಲಿ‌ ನೀವೂ ಬದುಕಿ ಇತರರು ಬದುಕಲು ಅನುವು ಮಾಡಿಕೊಡಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ. ಇಲ್ಲವಾದಲ್ಲಿ‌ ಕಠಿಣ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಕಾನೂನಿಗೆ ಗೌರವ, ಮಾನವೀಯತೆ, ನೈತಿಕ, ಸಾಮಾಜಿಕ ಮೌಲ್ಯಗಳಿಗೆ ಬೆಲೆ ಕೊಡುವಂತ ಕೆಲಸ ಪ್ರತಿಯೊಬ್ಬರು ಮಾಡಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಯಾರೇ ತಪ್ಪು ಮಾಡಿದರು ಕಾನೂನಿನ ಶಿಕ್ಷೆಗೆ ಒಳಗಾಗಲೇಬೇಕು. ಎಲ್ಲರಿಗೂ ಉಜ್ವಲ ಭವಿಷ್ಯ ಇರುತ್ತದೆ ಈ ನಿಟ್ಟಿನಲ್ಲಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿದ್ದೀರಿ, ಇನ್ನಾದರೂ ಸಮಾಜಘಾತುಕ ಕೃತ್ಯದಲ್ಲಿ ತೊಡಗದೆ ಒಳ್ಳೆಯ ರೀತಿಯಲ್ಲಿ ಬದುಕಿ ಬಾಳಿ. ಮತ್ತೆ ಏನಾದರೂ ಅಪರಾಧ ಪ್ರಕರಣಗಳಲ್ಲಿ ಕಂಡು ಬಂದದ್ದೇ ಆದರೆ,‌ ಮತ್ತೆ ರೌಡಿ ಶೀಟ್‌ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇತ್ತೀಚಿಗೆ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆಯೂ ಸಹ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.

ತಮ್ಮ ತಮ್ಮ ಪೊಲೀಸ್‌ ಠಾಣೆಗಳ ವ್ಯಾಪ್ತಿಗೆ ಬರುವ ಪ್ರತೀ ರೌಡಿಗಳ ಮಾಹಿತಿಯನ್ನು ಪಡೆದುಕೊಂಡು ನಿಗಾವಹಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಮುನಿಕೃಷ್ಣ, ನಗರ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ, ದೊಡ್ಡಬೆಳವಂಗಲ ಠಾಣಾ ಇನ್ಸ್ ಪೆಕ್ಟರ್ ಎಂ.ಆರ್. ಹರೀಶ್, ಹೊಸಹಳ್ಳಿ ಠಾಣಾ ಇನ್ಸ್ ಪೆಕ್ಟರ್ ರಾವ್ ಗಣೇಶ್‌ ಸೇರಿದಂತೆ ವಿವಿಧ ಠಾಣೆಗಳ‌ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *