ವಿದ್ಯಾವಂತ, ಆಧುನಿಕ ಸಮಾಜದಲ್ಲಿ ಹೆಣ್ಣು ಮಕ್ಕಳ ಬಗೆಗಿನ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಹೆಣ್ಣುಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಲು ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಸಮಾಜದ ರಚನೆಯಲ್ಲಿ ಮಹಿಳೆಯರಿಗೆ ಸಮಾನ ಪಾಲು ಇದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಭಾರತ ಸೇವಾದಳ ದೊಡ್ಡಬಳ್ಳಾಪುರ ತಾಲೂಕು ಘಟಕದ ಅಧ್ಯಕ್ಷ ಆರ್.ವಿ ಮಹೇಶ್ ಕುಮಾರ್ ಹೇಳಿದರು.
ನಗರದ ರೋಜಿಪುರ ವಾರ್ಡ್ ನ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಕೆಲವುಕಡೆ ಹೆಣ್ಣುಮಕ್ಕಳು ಇಂದಿಗೂ ಶಿಕ್ಷಣ, ಆರೋಗ್ಯದಂತಹ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಮೊದಲು ಕಲಿಸಬೇಕಾದದ್ದು ಆತ್ಮರಕ್ಷಣೆ. ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿ, ಪೋಷಕರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ಬಾಲ್ಯದಿಂದಲೇ ಹೆಣ್ಣುಮಕ್ಕಳಿಗೆ ತರಬೇತಿ ನೀಡುವುದು ಅವಶ್ಯಕ ಎಂದರು.
ನಾನು ಹುಡುಗಿ ಎಂಬ ಕಾರಣಕ್ಕೆ ನಾನು ಇದನ್ನು ಮಾಡಲಾರೆ ಎಂಬ ಭಾವನೆ ಅವಳಿಗೆ ಇರಬಾರದು. ಇದಕ್ಕೆ ವ್ಯತಿರಿಕ್ತವಾಗಿ, ನಾನು ಎಲ್ಲವನ್ನೂ ಒಬ್ಬಂಟಿಯಾಗಿ ಮಾಡಬಲ್ಲೆ ಎಂದು ಅವಳಿಗೆ ನಂಬುವಂತೆ ಮಾಡಬೇಕು. ಮನೆಯಲ್ಲಿ ಹೆಣ್ಣು ಮತ್ತು ಗಂಡು ಇದ್ದರೆ ಹುಡುಗಿ ಈ ಕೆಲಸ ಮಾಡಬೇಕು, ಹುಡುಗ ಈ ಕೆಲಸ ಮಾಡಬಾರದು ಎಂದು ಆಚರಣೆಗಳನ್ನು ಮಾಡಬೇಡಿ. ಇವೆರಡೂ ಒಂದೇ ಮಟ್ಟದಲ್ಲಿವೆ ಎಂಬುದನ್ನು ಅರಿತುಕೊಳ್ಳಲಿ. ಹೆಣ್ಣು ಮಗುವಿನ ಆಲೋಚನೆಗಳು ಸ್ವತಂತ್ರವಾಗಿರಬೇಕು, ಸ್ಪಷ್ಟ ಅಭಿಪ್ರಾಯಗಳನ್ನು ಹೊಂದಿರಬೇಕು ಮತ್ತು ಅವುಗಳನ್ನು ದೃಢವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂಬ ನಂಬಿಕೆಯನ್ನು ಪಾಲಕರು ಮಗಳಲ್ಲಿ ತುಂಬುವುದು ಅವಶ್ಯಕ ಎಂದು ಹೇಳಿದರು.
ದೊಡ್ಡಬಳ್ಳಾಪುರ ನಗರದಲ್ಲಿ ಸುಮಾರು 22 ಅಂಗನಾವಡಿ ಕೇಂದ್ರಗಳಿಗೆ ಸ್ವಂತಕಟ್ಟಡವಿಲ್ಲದೇ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿರುವುದು ಗಮನಕ್ಕೆ ಬಂದಿದ್ದು, ಜಾಗ ಗುರುತಿಸಿಕೊಟ್ಟರೆ ಸಚಿವರ ಗಮನಕ್ಕೆ ತಂದು ಕಟ್ಟಡ ನಿರ್ಮಾಣಕ್ಕೆ ಅನುವುಮಾಡಿಕೊಡಲಾಗುವುದು ಎಂದರು.
ಈ ವೇಳೆ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಅಧಿಕಾರಿ ರವಿಕುಮಾರ್, ಅಂಗನವಾಡಿ ಕಾರ್ಯಕರ್ತೆ ಶೈಲಜಾ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.