ಗ್ರಾಮೀಣ ಮತ್ತು ಹಳ್ಳಿ ಜನರ ಸಾಮಾಜಿಕ ಭದ್ರತೆಗಾಗಿಯೆ ಮಾಡಲಾದ ಯೋಜನೆ ಇದಾಗಿದ್ದೂ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನ ವ್ಯವಸ್ಥಾಪಕ ಸಂದೀಪ್ ಭಟ್ನಾಗರ್ ತಿಳಿಸಿದರು.
ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೊಡ್ಡಬಳ್ಳಾಪುರ ಶಾಖೆಯ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಅಟಲ್ ಪೆನ್ಷನ್ ಯೋಜನೆ ಕುರಿತು ಅರಿವು ಕಾರ್ಯಕ್ರಮವನ್ನು ನಗರದ ಎಸ್ ಬಿಐ ಬ್ಯಾಂಕ್ ಕಚೇರಿ ಎದುರು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ಕುಟುಂಬಗಳಿಗಾಗಿ ದುಡಿಯುವ ಪ್ರತಿಯೊಬ್ಬ ನಾಗರೀಕನು ಕುಂಟುಂಬಸ್ಥರ ಅನುಕೂಲಕ್ಕಾಗಿ ಪಿಎಂಎಸ್ ಬಿವೈ, ಪಿಎಂಜೆಜೆಬಿವೈ, ಎಪಿವೈ ಯೋಜನೆಗಳನ್ನು ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು, ನಗರದ ಎಸ್ ಬಿ ಐ ಕಛೇರಿಗೆ ಖುದ್ದು ಹಾಜರಾಗಿ ಅರ್ಜಿ ಸಲ್ಲಿಸಬಹುದು ಅಥವ ಸಿಎಸ್ಸಿ ಸೆಂಟರ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂದರು.
ಪ್ರಧಾನಮಂತ್ರಿ ಸುರಕ್ಷಾ ಯೋಜನೆಯಲ್ಲಿ 18 ರಿಂದ 70 ವರ್ಷ ವಯಸ್ಸಿನವರಿಗಾಗಿ ವಾರ್ಷಿಕ ಕೇವಲ 20 ರೂ, ಪಾವತಿಸಿದರೇ ಮರಣಾನಂತರ ಕುಂಟುಂಬಸ್ಥರ 2 ಲಕ್ಷ ರೂಪಾಯಿಗಳನ್ನು ಅವಲಂಬಿತರಿಗೆ ನೀಡಲಾಗುವುದು, ಅಪಘಾತದಿಂದ ಭಾಗಶಃ ಅಂಗವಿಕಲರಾದರೇ 1 ಲಕ್ಷ ರೂಪಾಯಿಗಳನ್ನು, ಸಂಪೂರ್ಣ ಅಂಗವೈಕಲ್ಯ ಉಂಟಾದರೇ 2 ಲಕ್ಷ ರೂ ನೀಡಲಾಗುವುದು ಎಂದರು.
ಇತ್ತೀಚೆಗೆ ಎಲ್ಲೆಡೆ ಡಿಜಿಟಲ್ ಪೇಮೆಂಟ್ ಗಳ ಮೊರೆ ಹೋಗಿದ್ದೂ ಡೆಬಿಟ್ ಕಾರ್ಡ್ ಗಳನ್ನು ಬಳಸುವವರೆ ಇಲ್ಲದಾಗಿದೆ, ರೂಪೇ ಡೆಬಿಟ್ ಕಾರ್ಡ್ ಬಳಕೆಮಾಡುವವರು ಅಚಾನಕ್ಕಾಗಿ ಸಾವಿಗೀಡಾದರೇ ನಾಮಿನಿ ಇದ್ದವರಿಗೆ 1 ಲಕ್ಷ ಹಣ ನೀಡಲಾಗುವುದು ಎಂದರು. ದೇಶದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಭದ್ರತೆಯನ್ನು ಮೂಡಿಸುವುದೇ ಈ ಯೋಜನೆಗಳ ಉದ್ದೇಶವಾಗಿದೆ ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದು ಉಪಪ್ರಧಾನ ವ್ಯವಸ್ಥಾಪಕರಾದ ರಾಜಶೇಖರ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ವ್ಯವಸ್ಥಾಪಕ ದಾಮೋದರ್, ದೊರೆ ರಾಜು, ರಾಜು ಮಿತ್ತಲ್, ಪ್ರಕಾಶ್ ಮೂರ್ತಿ, ಅಂಕೇಗೌಡ ಇತರರು ಇದ್ದರು.