ಕೋಲಾರ: ಧಾರ್ಮಿಕ ಕಾರ್ಯಗಳನ್ನು ನಿರಂತರವಾಗಿ ಮಾಡುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು.
ತಾಲೂಕಿನ ಕೆಂದಟ್ಟಿ ಗ್ರಾಮದಲ್ಲಿ ಶುಕ್ರವಾರ ಅಭಯ ಆಂಜನೇಯಸ್ವಾಮಿಯ ನೂತನ ದೇವಾಲಯದ ಪ್ರತಿಷ್ಟಾಪನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರ ಮೇಲೆ ದೇವರ ಅನುಗ್ರಹ ಇರಬೇಕು ಗ್ರಾಮೀಣ ಭಾಗದಲ್ಲಿ ನಿರಂತರ ಧರ್ಮಾಚರಣೆಯಿಂದ ಸಮನ್ವಯತೆ, ಸಹಬಾಳ್ವೆಯಿಂದ ಜೀವನ ನಡೆಸಲು ಸಹಕಾರಿಯಾಗುತ್ತದೆ. ಮನುಷ್ಯನು ಸ್ವಯಂ ಪೇರಿತವಾಗಿ ದೇವರ ದರ್ಶನ, ಧ್ಯಾನ ಹಾಗೂ ಮಹಾತ್ಮರು, ಸಂತರು, ತ್ಯಾಗಿಗಳು ಹಾಕಿದ ಮಾರ್ಗದಲ್ಲಿ ನಡೆಯಬೇಕು ಎಂದರು.
ಇವತ್ತಿನ ಜಾಗತೀಕರಣ ಹಾಗೂ ಅಧುನೀಕರಣದ ಭರಾಟೆಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಂರಕ್ಷಣೆ ಅಗತ್ಯವಾಗಿದೆ ನಿಜವಾದ ಮಾನವೀಯತೆ, ಅನುಕಂಪವು ಇಲ್ಲದಂತಹ ವಾತಾವರಣ ನಿರ್ಮಾಣಗೊಳ್ಳುತ್ತಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳು ಜನರಿಂದ ಕಣ್ಮರೆಯಾದರೆ ಧರ್ಮದ ಮೌಲ್ಯಗಳು ಹಾಗೂ ಸಂಸ್ಕೃತಿ ಉಳಿಯಲಾರದು. ಬದುಕಿನಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತವಾಗಬೇಕಾದರೆ ಒಳ್ಳೆಯ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಪ್ರತಿಯೊಂದು ಧರ್ಮವನ್ನು ಪರಸ್ಪರ ಅರ್ಥೈಸಿಕೊಂಡು ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆಯಿಂದ ಬದುಕಬೇಕು. ಸಮಾಜದಲ್ಲಿ ವಾಸಿಸುವ ಮನುಷ್ಯನ ಅಜ್ಞಾನದ ಕತ್ತಲೆ ಹೋಗಲಾಡಿಸಿ, ಸುಂದರ ಸಮಾಜ ಪರಿವರ್ತನೆಗೆ ದೇವರ ಹಿರಿಯರ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಮನುಷ್ಯನಾಗಿ ಬದುಕುವ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳು ನಾಶವಾಗುತ್ತಿವೆ. ಹಿಂದಿನ ಕಾಲದ ಜನರಲ್ಲಿ ತೃಪ್ತಿಯಿತ್ತು. ಇಂದು ಎಷ್ಟಿದ್ದರೂ ಸಾಲದಾಗಿದೆ. ಮಠಾಧಿಪತಿಗಳಿಂದ ಹಿಡಿದು ಸಾಮಾನ್ಯ ಪ್ರಜೆಯವರೆಗೂ ಯಾರಲ್ಲೂ ನೆಮ್ಮದಿಯಿಲ್ಲ. ಆಸೆಯೇ ತುಂಬಿ ತುಳುಕುತ್ತಿದೆ. ನಿರಂತರವಾಗಿ ಆತ್ಮಚಿಂತನೆ ನಡೆಸಬೇಕು. ನಾನು ಯಾರು ಎಂಬ ಪ್ರಶ್ನೆಯನ್ನು ಪ್ರತಿದಿನವೂ ಕೇಳಿಕೊಳ್ಳಬೇಕು. ಆತ್ಮ ಚಿಂತನೆಯಿಂದ ನಡೆದರೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.
ಇವತ್ತು ದೇವರನ್ನು ಒಂದು ಜಾತಿ ಸಮುದಾಯಗಳಿಗೆ ಅದರಲ್ಲೂ ಒಂದು ಪಕ್ಷಕ್ಕೆ ಸೀಮಿತವಾಗೊಳಿಸಲು ಹೊರಟಿದ್ದಾರೆ. ಆದರೆ, ದೇವರು ಎಲ್ಲರಿಗೂ ಎಂಬುದನ್ನು ಮನುಷ್ಯನೇ ಮರೆತಿದ್ದಾನೆ. ಜ್ಞಾನ ಸಂಪತ್ತು, ವಿವೇಕದ ಸಂಪತ್ತು, ಧರ್ಮದ ಸಂಪತ್ತನ್ನು ದೇವರಿಂದ ಪಡೆದಿದ್ದೇವೆ. ಆದರೆ, ಭೌತಿಕ ಜಗತ್ತಿನ ಆಕರ್ಷಣೆಗೆ ಒಳಪಟ್ಟು ಅದೆಲ್ಲವನ್ನು ಮರೆತು ಹಿಂಸೆ ಅನುಭವಿಸುವಂತಾಗಿದೆ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಛತ್ರಕೋಡಿಹಳ್ಳಿ ಮಂಜುನಾಥ್, ವೈ.ಶಿವಕುಮಾರ್, ಅಪ್ಪಸಂದ್ರ ರಘು ಸೇರಿದಂತೆ ಕೆಂದಟ್ಟಿ ಗ್ರಾಮಸ್ಥರು ಇದ್ದರು