ಸಮಾಜದಲ್ಲಿ ಬಡತನ ಮತ್ತು ಜಾತಿ ವ್ಯವಸ್ಥೆ ಸಂಪೂರ್ಣವಾಗಿ ತೊಲಗದೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ- ಸಿಎಂ ಸಿದ್ದರಾಮಯ್ಯ

ಸಮಾಜದಲ್ಲಿ ಬಡತನ ಮತ್ತು ಜಾತಿ ವ್ಯವಸ್ಥೆ ಸಂಪೂರ್ಣವಾಗಿ ತೊಲಗದೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಸಮಾಜದಲ್ಲಿ ಮೇಲು ಕೀಳು ಇರಬಾರದು, ಬಡವ ಬಲ್ಲಿದ ಇರಬಾರದು, ಜಾತಿ ವ್ಯವಸ್ಥೆ ಇರಬಾರದು, ಎಲ್ಲರೂ ಮನುಷ್ಯರಾಗಿ, ಸಮಾನವಾಗಿ ಬದುಕಬೇಕು ಎಂಬುವುದೇ ಬಸವಾದಿ ಶರಣರ ಕನಸು. ಇದೇ ತತ್ವದ ಆಧಾರದ ಮೇಲೆ ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿದರು. ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರು ಸಹ ಈ ತತ್ವ ಸಿದ್ದಾಂತಗಳ ಆಧಾರದಲ್ಲಿ ಆಡಳಿತ ನಡೆಸಿ, ರಾಜ್ಯದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇವರಾಜ ಅರಸು ಅವರು ಅರಸು ಮನೆತನದಲ್ಲಿ ಹುಟ್ಟಿದ್ದರೂ, ಸಮಾಜದ ತಳ ಸಮುದಾಯವಾದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರ ಬಗ್ಗೆ ಬಹಳ ಕಾಳಜಿ ಹೊಂದಿದ್ದರು ಎಂದರು.

ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲು ನಮ್ಮ ಸಂವಿಧಾನ ಒತ್ತು ನೀಡಿದೆ. ಇದೇ ಹಾದಿಯಲ್ಲಿ ಸಂವಿಧಾನಕ್ಕೆ ಬದ್ಧವಾಗಿ ನಾವು ಆಡಳಿತ ನಡೆಸುತ್ತಿದ್ದೇವೆ. ನೆಹರು ಕಾಲದಿಂದ ಇಂದಿನವರೆಗೂ ಅಸಮಾನನತೆಯ ಸಮಾಜವನ್ನು ತೊಡೆದು ಸಮ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಇನ್ನೂ ನಮ್ಮಲ್ಲಿ ಸಾಮಾಜಿಕ ಸಮಾನತೆ ಸಾಧ್ಯವಾಗಿಲ್ಲ. ಸಮಾನವಾಗಿ ಸಂಪತ್ತು ಹಂಚಿಕೆ ನಮಗೆ ಸಾಧ್ಯವಾಗಿಲ್ಲ. ವ್ಯಕ್ತಿಯನ್ನು ಜಾತಿ ಆಧಾರದಲ್ಲಿ ಗುರುತಿಸುವಂತಹ ವ್ಯವಸ್ಥೆ ಇನ್ನೂ ನಮ್ಮಲ್ಲಿ ಇದೆ. ಜನರನ್ನು ಅವರ ಪ್ರತಿಭೆ ಮೇಲೆ, ವ್ಯಕ್ತಿತ್ವದ ಮೇಲೆ ಗುರುತಿಸದೆ ಜಾತಿ ಆಧಾರದಲ್ಲಿ ಗುರುತಿಸಲಾಗುತ್ತಿದೆ. ಆದರೆ ಯಾರೂ ಕೂಡಾ ಜಾತಿ ಆಧಾರದಲ್ಲಿ ಸಮಾಜದಲ್ಲಿ ಪ್ರತಿಭಾವಂತ ಆಗಲು ಸಾಧ್ಯವಿಲ್ಲ. ಸರಿಯಾದ ಅವಕಾಶಗಳು ಸಿಕ್ಕಿದರೆ ಮಾತ್ರ ಪ್ರತಿಭಾವಂತ ಆಗಲು ಸಾಧ್ಯ ಎಂದು ತಿಳಿಸಿದರು.

ಬಸವಾದಿ ಶರಣಗರು 800 ವರ್ಷಗಳ ಹಿಂದಯೇ ಸಮಾನತೆಗಾಗಿ ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಆದರೆ ಸಂಪೂರ್ಣ ಸಮ ಸಮಾಜ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ ಎಂದರು.

ಪ್ರತಿಯೊಬ್ಬರಿಗೂ ಶಿಕ್ಷಣ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕದರೆ ಮಾತ್ರ ಜಾತಿ ವ್ಯವಸ್ಥೆ ಹೋಗಬಹುದು. ಇದಕ್ಕಾಗಿಯೇ ಅರಸು ಅವರು ದಲಿತರ, ಮಹಿಳೆಯರ, ರೈತರ, ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು ನೀಡಿದರು. ಮಲ ಹೊರುವ ಪದ್ಧತಿ ಸೇರಿದಂತೆ ಅನೇಕ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿದರು ಎಂದು ಹೇಳಿದರು.

ಎಲ್ಲರಿಗೂ ಸಮಾನ ಅವಕಾಶ ಸಿಗಲು ಹಾವನೂರು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದ ಆಯೋಗ ರಚನೆ ಮಾಡಿ, ಎಷ್ಟೇ ವಿರೋಧ ಇದ್ದರೂ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದರು. ಇದರಿಂದ ಹಿಂದುಳಿದ ವರ್ಗದವರಿಗೆ ಶಿಕ್ಷಣದಲ್ಲಿ ಮೀಸಲಾತಿ ಸಾಧ್ಯವಾಯಿತು. ತಳ ಸಮುದಾಯದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಬಲಗೊಳಿಸಲು ಎಷ್ಟೇ ವಿರೋಧ ಇದ್ದರೂ, ಜಾರಿಗೊಳಿಸಿದರು. ಹಿಂದುಳಿದವರಿಗೆ ಶೇ.38 ರಷ್ಟು ಮೀಸಲಾತಿ ಸಿಕ್ಕಿದ್ದರೆ ಅದಕ್ಕೆ ಅರಸು ಅವರೇ ಕಾರಣ ಎಂದರು.

ಹಿಂದುಳಿದವರನ್ನು ತುಳಿಯಲು ಈಗಲೂ ನಿರಂತರ ಹುನ್ನಾರಗಳು ನಡೆಯುತ್ತಿವೆ. ನಾನು ಮುಖ್ಯಮಂತ್ರಿ ಆದ ಮೇಲೆ ಬಡವರಿಗಾಗಿ, ಮಹಿಳೆಯರಿಗಾಗಿ, ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಐದು ಗ್ಯಾರಂಟಿ ಯೋಜನೆಗಳು ಬಡವರು, ಮಹಿಳೆಯರು, ರೈತರು, ಯುವಕರ ಪರವಾಗಿದೆ. ಆದರೆ ಬದಲಾವಣೆ ಬಯಸದ, ಬಡವರ ವಿರೋಧಿ ಪಟ್ಟಭದ್ರರು ಇದನ್ನು ವಿರೋಧಿಸುತ್ತಿದಾರೆ ಎಂದು ತಿಳಿಸಿದರು.

ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ನಾವು ಜಾತಿ ಗಣತಿ ಮಾಡಿದ್ದೇವೆ. ಜಾತಿ ಗಣತಿ ಮಾಡದೆ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಗತಿ ತಿಳಿಯಲು ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ ಒದಗಿಸಲು ನಾವು ನಡೆಸುತ್ತಿರುವ ಪ್ರಯತ್ನಗಳಿಂದ ಹತಾಶರಾಗಿ ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ಮಾಡುತ್ತಿದಾರೆ ಎಂದರು.

ನಾನು 1984ರಲ್ಲಿ ಮೊದಲ ಬಾರಿಗೆ ಮಂತ್ರಿಯಾದ ಬಳಿಕ ಕಳೆದ 40 ವರ್ಷಗಳಲ್ಲಿ ಇಂದಿನವರೆಗೆ ನನ್ನ ಜೀವನದಲ್ಲಿ ಯಾವುದೇ ಕಳಂಕವಿಲ್ಲ. ನಾನು ಯಾವುದೇ ತಪ್ಪು ಮಾಡದಿದ್ದರೂ ಈಗ ಕಪ್ಪು ಮಸಿ ಬಳಿಯಲು ನಿರಂತರ ಪ್ರಯತ್ನ ನಡೆಯುತ್ತಿದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ, ಸಾಮಾಜಿಕ ನ್ಯಾಯದ ವಿಷಯದಲ್ಲಿ, ನಂಬಿರುವ ಸಿದ್ಧಾಂತಗಳ ಕುರಿತು ಯಾವತ್ತೂ ರಾಜಿ ಮಾಡುವುದಿಲ್ಲ ಎಂದರು.

ಅರಸು ಅವರು ಉಳುವವನೇ ಭೂಮಿಯೊಡೆಯ ಎಂದು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಅಸಂಖ್ಯಾತ ಜನರಿಗೆ ಭೂಮಿಯ ಮಾಲೀಕತ್ವ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಭೂಮಿಯ ಹಕ್ಕನ್ನು ಖಾತ್ರಿಪಡಿಸಲು 79 ಎ ಮತ್ತು ಬಿ ಗೆ ಮಾಡಿರುವ ತಿದ್ದುಪಡಿಯನ್ನು ಮತ್ತೆ ಸರಿಪಡಿಸಲಾಗುವುದು ಎಂದು ಹೇಳಿದರು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಖರ್ಚು ಮಾಡಲು ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ತಂದದ್ದು ನಮ್ಮ ಸರ್ಕಾರ. ಕೇಂದ್ರದಲ್ಲಿ ಈ ರೀತಿಯ ಕಾಯ್ದೆಯನ್ನು ಜಾರಿಗೆ ತರದೇ ಇಲ್ಲಿ ಅನುಷ್ಠಾನದ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಈ ರೀತಿ ಟೀಕಿಸಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ತಿಳಿಸಿದರು.

ಕರ್ನಾಟಕ ಏಕೀಕರಣ 1956 ನವಂಬರ್‌ 1 ರಂದೇ ಆಗಿದ್ದರೂ, 1973 ರಲ್ಲಿ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಈ ಹಿನ್ನೆಲೆಯಲ್ಲಿಯೇ ನಾವು ಕರ್ನಾಟಕ ಸಂಭ್ರಮ ವರ್ಷಾಚರಣೆ ನಡೆಸುತ್ತಿದ್ದು, ನವೆಂಬರ್‌ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧ ಮುಂಭಾಗದಲ್ಲಿ ನವೆಂಬರ್‌ 1 ರಂದು ಅನಾವರಣಗೊಳಿಸಲಾಗುವುದು ಎಂದರು.

Ramesh Babu

Journalist

Recent Posts

ಯುವತಿಯಿಂದ ಮದ್ವೆಗೆ ನಿರಾಕರಣೆ: HIV ಇಂಜೆಕ್ಷನ್ ಚುಚ್ಚಿದ ಯುವಕ.!

ಹೈದರಾಬಾದ್: ಮದುವೆಯಾಗಲು ನಿರಾಕರಿಸಿದ ಯುವತಿಯೊಬ್ಬಳಿಗೆ ಆಕೆಯ ಪ್ರಿಯಕರನೇ HIV ಪಾಸಿಟಿವ್ ಇಂಜಕ್ಷನ್ ಚುಚ್ಚಿದ ಆಘಾತಕಾರಿ ಘಟನೆ ಹೈದರಾಬಾದ್‌ನ ಮೆಡ್ಚಲ್ ಪ್ರದೇಶದಲ್ಲಿ…

1 hour ago

ಗುರುಭವನದಲ್ಲಿ ಅದ್ಧೂರಿ ವಿಶ್ವ ಮಹಿಳಾ ದಿನಾಚರಣೆ

ಸೇವೆಗಾಗಿ ಬಾಳು ಭಾರತ ಸೇವಾದಳ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಭಾರತ ಸೇವಾದಳ ದೇವನಹಳ್ಳಿ ತಾಲೂಕು ಘಟಕ, ಕರ್ನಾಟಕ ರಾಜ್ಯ ಪ್ರಾಥಮಿಕ…

10 hours ago

ಭೂದಾಖಲೆಗಳ ತಿದ್ದುಪಡಿಗಾಗಿ ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆ: ಲೋಕಾ ಬಲೆಗೆ ಬಿದ್ದ ಭ್ರಷ್ಟ ಗ್ರಾಮ ಆಡಳಿತಾಧಿಕಾರಿ

ಭೂದಾಖಲೆಗಳ ತಿದ್ದುಪಡಿಗಾಗಿ ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಆಡಳಿತಾಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ…

11 hours ago

ಯುಗಾದಿ ಸಮಯದಲ್ಲಿ ಮತ್ತೆ ಚಿಗುರಿದ ಪ್ರೀತಿ: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದವರು ಕಟೆಕಟೆಯಲ್ಲಿ ಒಂದಾದರು: ಒಂದಾದ ದಂಪತಿಗೆ ಪ್ರೀತಿಯ ಪಾಠ ಹೇಳಿದ ನ್ಯಾಯಾಧೀಶರು

ಸಣ್ಣಪುಟ್ಟ ಜಗಳಗಳಿಂದ ಕೋರ್ಟಿನ ಮೆಟ್ಟಿಲೇರಿ ದೂರಾವಾಗಲು ನಿರ್ಧರಿಸಿದ್ದ ನಾಲ್ವರು ದಂಪತಿಗಳನ್ನು ಶನಿವಾರ ನಡೆದ ಲೋಕಾಅದಾಲತ್ ನಲ್ಲಿ ನ್ಯಾಯಾಧೀಶರುಗಳು ಹೇಳಿದ ಬುದ್ಧಿಮಾತಿನಿಂದ…

13 hours ago

ವಾರದೊಳಗೆ ಸಹಜ ಸ್ಥಿತಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ- ಆಹಾರ ಸಚಿವ ಕೆ.ಎಚ್ ಮುನಿಯಪ್ಪ

ಕೊಲ್ಲಿ ದೇಶಗಳಲ್ಲಿ ಯುದ್ಧದ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಂಟಾದ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಗಳ ಪೂರೈಕೆ…

14 hours ago

“ಗೃಹಬಳಕೆ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದ್ದಲ್ಲಿ ಸೂಕ್ತ ಕಾನೂನು ಕ್ರಮ”

ಗೃಹಬಳಕೆ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದ್ದಲ್ಲಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಆಹಾರ ಸಚಿವರು ಸೂಚಿಸಿದ್ದು, ಅದರಂತೆ ಗೃಹ ಬಳಕೆ…

14 hours ago