” ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ ” ಸಾಕ್ರೆಟಿಸ್………

” ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ ” ಸಾಕ್ರೆಟಿಸ್………

ಕ್ರಿಸ್ತ ಪೂರ್ವ 399 ಇಸವಿಯ ಆಸುಪಾಸಿನಲ್ಲಿ ಬದುಕಿದ್ದ ಪಾಶ್ಚಾತ್ಯ ಸಂಸ್ಕೃತಿಯ ಅತ್ಯದ್ಬುತ ಚಿಂತಕ, ಗ್ರೀಕ್ ದೇಶದ ಅಥೆನ್ಸ್ ನ ಈ ಸಾಕ್ರೆಟಿಸ್. ಮತ್ತೊಬ್ಬ ಅದ್ಭುತ ತತ್ವಜ್ಞಾನಿ ಪ್ಲೋಟೋ ಕೂಡ ಇವರ ಶಿಷ್ಯರೇ ಆಗಿದ್ದರು. ಬಹುತೇಕ ಭಾರತದ ಗೌತಮ ಬುದ್ಧ, ಚೀನಾದ ಕನ್ಫ್ಯೂಷಿಯಸ್, ಲಾವೋತ್ಸೇ ಎಂಬ ಜಗತ್ತಿನ ಅತ್ಯದ್ಭುತ ಚಿಂತಕರ ರೀತಿಯಲ್ಲಿಯೇ ಕ್ರಿಸ್ತಪೂರ್ವ ಕಾಲಘಟ್ಟದ, ನಾಗರಿಕತೆಯ ಪ್ರಾರಂಭದ ಹಂತದಲ್ಲೇ ಮನುಷ್ಯನ ಅಂತಃಶಕ್ತಿ ಮತ್ತು ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅತ್ಯಮೂಲ್ಯ ಸಾರ್ವತ್ರಿಕ ವಾಸ್ತವಗಳನ್ನು ಹೇಳಿದ್ದಾರೆ. ಅವುಗಳಲ್ಲಿ ಒಂದು ಸತ್ಯದ ಜೊತೆಗೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ.

ಇದೀಗ 2026ರಲ್ಲಿ 21ನೆಯ ಶತಮಾನದ ಕಾಲು ಭಾಗ ಪೂರೈಸಿ ಬದುಕುತ್ತಿರುವ ಈ ಸಂದರ್ಭದಲ್ಲಿ ಈ ವಾಕ್ಯವನ್ನು ಮರು ವ್ಯಾಖ್ಯಾನ ಮಾಡಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ಮೊದಲನೆಯದಾಗಿ,
ಸತ್ಯ ಎಂದರೇನು ಎಂಬುದೇ ಪ್ರಶ್ನಾರ್ಥಕವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಸತ್ಯ ಒಂದೇ ಎಂಬುದೇನೋ ಸಾರ್ವಕಾಲಿಕ ಸ್ಥಿರ ಭಾವ ನಿಜ, ಆದರೆ ಈ ಕಾಲಘಟ್ಟದಲ್ಲಿ ಸತ್ಯದ ವಾಸ್ತವಿಕ ಅರ್ಥವೇ ಬದಲಾಗಿದೆ. ಅನೇಕ ವಿಭಿನ್ನ ದೃಷ್ಟಿಕೋನಗಳು ಸತ್ಯವನ್ನೇ ಮರೆಮಾಚುತ್ತಿವೆ. ಸತ್ಯವನ್ನೇ ವಿವಿಧ ದೃಷ್ಟಿಯಲ್ಲಿ ವ್ಯಾಖ್ಯಾನಿಸುತ್ತಿವೆ, ಸತ್ಯವನ್ನೇ ಮರು ಚಿಂತನೆಗೆ ಒಳಪಡಿಸುತ್ತಿವೆ, ಸತ್ಯವನ್ನೇ ಹೊಸದಾಗಿ ಅರ್ಥೈಸಲಾಗುತ್ತಿದೆ.

ಮಹಾತ್ಮ ಗಾಂಧಿಯವರ ತಮ್ಮ ಬದುಕಿನಲ್ಲಿ ಸತ್ಯದೊಂದಿಗೆ ಮಾಡಿದ ಪ್ರಯೋಗವೇ ಪ್ರಶ್ನಾರ್ಹ ಮತ್ತು ಹುಚ್ಚುತನದ ಪರಮಾವಧಿ ಎನ್ನುವಂತೆಯೂ ಚಿತ್ರಿಸಲಾಗುತ್ತಿದೆ.

ಸತ್ಯಕ್ಕೆ ಸಾವಿಲ್ಲ, ನಿಜ.
ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಖಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ. ಕೋಪಕ್ಕೆ ತುತ್ತಾಗುತ್ತದೆ. ಅಸೂಯೆಗೆ ಮಣಿಯುತ್ತದೆ. ಸ್ವಾರ್ಥಕ್ಕೆ ಸೆರೆಯಾಗುತ್ತದೆ. ಅದು ಸತ್ಯದ ನಿಶ್ಯಕ್ತಿಯಲ್ಲ, ಸತ್ಯ ಅತ್ಯಂತ ಪ್ರಬಲ, ಅದು ಜನರ ಮಾನಸಿಕ ದೌರ್ಬಲ್ಯ.

ವಿಷಯ ಏನೇ ಇರಲಿ, ಕಾಲದ ಪಯಣದಲ್ಲಿ ಇರಬಹುದಾದ ಸಾರ್ವಕಾಲಿಕ ಸತ್ಯ, ತತ್ತಕ್ಷಣದ ಸತ್ಯ, ಸಾಂಧರ್ಬಿಕ ಸತ್ಯ, ಘಟನೆಯ ಸತ್ಯ, ಊಹಾತ್ಮಕ ಸತ್ಯ, ಯಾರಿಗೂ ಎಂದಿಗೂ ಸ್ಪಷ್ಟವಾಗದ ಸತ್ಯ ಹೀಗೆ ಸತ್ಯದ ನಾನಾ ಮುಖಗಳು ಅಗ್ನಿ ಪರೀಕ್ಷೆಗೆ ಒಳಗಾಗುತ್ತಾ ತನ್ನ ಅಸ್ತಿತ್ವಕ್ಕಾಗಿ ಸದಾ ಹೋರಾಡುತ್ತಲೇ ಇರುತ್ತದೆ.

ಈಗ ನಾವು ಸತ್ಯದೊಂದಿಗೆ ಬದುಕುತ್ತಿದ್ದೇವೆ ಎಂದೇ ಭಾವಿಸೋಣ. ಹಾಗಾದರೆ ನಾವು ಯಾರಿಗೂ ಹೆದರಬೇಕಾಗಿಲ್ಲವೇ ?

ಮೊದಲನೆಯದಾಗಿ,
ಹೆದರಿಕೆ ಎಂಬುದು ಕೂಡ ಒಂದು ಭಾವ‌. ಮನುಷ್ಯನಲ್ಲಿ ಅಂತರ್ಗತವಾಗಿರುವ ಭಾವಗಳಲ್ಲಿ ಹೆದರಿಕೆಯೂ ಒಂದು. ಅದು ಬಹುತೇಕ ಸಂದರ್ಭಗಳಲ್ಲಿ ಅಂತರ್ಮುಖಿಯಾಗಿ ಪ್ರಕಟವಾಗುತ್ತದೆ. ನೀವು ಎಷ್ಟೇ ಸತ್ಯವಂತರು, ಧೈರ್ಯವಂತರಾಗಿದ್ದರು ಸಹ ಭಯ ಎಂಬ ಭಾವವು ಆಗಾಗ ವ್ಯಕ್ತವಾಗುತ್ತಲೇ ಇರುತ್ತದೆ. ಇದನ್ನು ಹೊರತುಪಡಿಸಿಯು, ನಾವು ತುಂಬಾ ಪ್ರಾಮಾಣಿಕರಾಗಿದ್ದಾಗಲೂ ಈ ಆಧುನಿಕ ಕಾಲದಲ್ಲಿ ಸಂಕೀರ್ಣ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಇಲ್ಲ ಸಲ್ಲದ ಸುಳ್ಳುಗಳು, ಆರೋಪಗಳು, ಕಾನೂನಾತ್ಮಕ ಒತ್ತಡಗಳು, ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ, ನಮ್ಮನ್ನು ಹಣಿಯಲೆಂದೇ ಹುಟ್ಟುಹಾಕಿದ ಘಟನೆಗಳು ಎಲ್ಲವೂ ಸೇರಿ ತೀರಾ ಒತ್ತಡ ಹಾಕಿದಾಗ ಭಯ ಸಹಜವಾಗಿ ಆಗುತ್ತದೆ..

ನಾವು ಪ್ರಾಮಾಣಿಕರೆಂಬುದು ನಿಜವೇ ಆಗಿದ್ದರೂ ಯಾವ ರೂಪದಲ್ಲಿ ಬೇಕಾದರೂ ಆರೋಪ ಹೊರಿಸುವ ಸಾಧ್ಯತೆ ಇರುವುದರಿಂದ ಭಯ ಎಂಬುದು ಇದ್ದೇ ಇರುತ್ತದೆ. ಉದಾಹರಣೆಗೆ ನಾವೊಂದು ವ್ಯವಹಾರ ಮಾಡುತ್ತಿರುತ್ತೇವೆ. ಎಲ್ಲವನ್ನು ಅತ್ಯಂತ ಪಾರದರ್ಶಕ, ತತ್ವ, ಸತ್ಯ ನಿಷ್ಠೆಯಿಂದಲೇ ಮಾಡುತ್ತಿರುತ್ತೇವೆ‌. ಆದರೆ ಇನ್ಯಾರೋ ನಮ್ಮ ವಿರೋಧಿಗಳು ನಮ್ಮನ್ನು ಸೋಲಿಸಲು ನಮ್ಮೊಂದಿಗೆ ಬೇರೆ ರೀತಿಯ ಅನೈತಿಕ, ಕಾನೂನುಬಾಹಿರ ಚಟುವಟಿಕೆ ನಡೆಸಿ, ಇನ್ನೇನೋ ಅಪಾಯಕಾರಿ ವಸ್ತುಗಳನ್ನು ಅಡಗಿಸಿ, ಪೋಲೀಸರಿಗೆ ಮಾಹಿತಿ ನೀಡಿ ನಮ್ಮನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಆಗ ಸಾಕ್ಷಿ, ಆಧಾರಗಳು ಸಹ ನಮಗೆ ವಿರುದ್ಧವಾಗಿ ಇರುತ್ತದೆ. ನಮ್ಮದು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಣ್ಣ ತಪ್ಪಿಲ್ಲದಿದ್ದರೂ ನಮಗೆ ಶಿಕ್ಷೆಯಾಗುತ್ತದೆ.

ಅಲ್ಲಿಗೆ ಸತ್ಯ ನಿಮ್ಮೊಳಗೆ, ನಿಮಗೊಬ್ಬರಿಗೆ ಮಾತ್ರ ತಿಳಿದಿರುತ್ತದೆ. ಆದರೆ ಇಡೀ ಜಗತ್ತಿಗೆ ನೀವು ಅಪರಾಧಿಯಾಗುತ್ತೀರಿ. ಆಗಲೂ ನೀವು ಭಯಪಡದೆ ಜೈಲಿನಲ್ಲಿ ಕೊಳೆತು ಜೀವ ತ್ಯಾಗ ಮಾಡುವಿರಾದರೆ ನೀವು ಮನುಷ್ಯ ರೂಪದ ವಿಶೇಷ ವ್ಯಕ್ತಿಗಳಾಗಿರುತ್ತೀರೇ ಹೊರತು ಸಾಮಾನ್ಯ ನಾಗರಿಕ ಸಮಾಜಕ್ಕೆ ಈ ಮಾತು ಅನ್ವಯವಾಗುವುದಿಲ್ಲ. ಇದು ಅನೇಕ ರಾಜಕೀಯ, ಆರ್ಥಿಕ, ಸಾಮಾಜಿಕ ವಿಷಯಗಳಿಗೆ ಹೆಚ್ಚು ಅನ್ವಯಿಸುತ್ತದೆ.

ಅಂದರೆ ಸಾಕ್ರೆಟಿಸ್ ಕಾಲಕ್ಕೂ, ಈ ಕಾಲಕ್ಕೂ ಜಗತ್ತಿನಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿ. ಆಗ ಮಾನವೀಯ ಮೌಲ್ಯಗಳು ತುಂಬಿ ತುಳುಕುತ್ತಿದ್ದಾಗ, ಇಡೀ ವ್ಯವಸ್ಥೆ, ಮೌಲ್ಯಗಳಲ್ಲಿ ಮುಂದುವರೆಯುತ್ತಿದ್ದಾಗ ಸತ್ಯಕ್ಕೆ ಅಷ್ಟರಮಟ್ಟಿಗೆ ಶಕ್ತಿ ಇತ್ತು. ಬಹುಶಃ ಭಾರತದಲ್ಲಿ ಮಹಾತ್ಮ ಗಾಂಧಿಯವರ ಕಾಲಘಟ್ಟದವರೆಗೆ ಸತ್ಯ ಒಂದಷ್ಟು ಉಸಿರಾಡುತ್ತಿತ್ತು. ಸತ್ಯವಂತರಿಗೆ ಭಯವೂ ಕಡಿಮೆ ಇತ್ತು. ಆದರೆ ಈಗಿನ ಕಾಲಘಟ್ಟದಲ್ಲಿ ಸತ್ಯವಂತರೇ ಹೆಚ್ಚು ಭಯಪಡಬೇಕಾಗಿದೆ.

ಏಕೆಂದರೆ ಈ ಜಗತ್ತು ಮೌಲ್ಯಗಳನ್ನು ದಾಟಿ ಕೃತಕ ಬುದ್ಧಿಮತ್ತೆಯ ಸಂದರ್ಭದಲ್ಲಿ, ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆಯುತ್ತಿರುವ ಸ್ಥಿತಿಯಲ್ಲಿದೆ. ಈಗ ಸಾಕ್ರೆಟಿಸ್ ಕಾಲದಲ್ಲಿ ಊಹಿಸಲು ಸಾಧ್ಯವಾಗದ ಆಧುನಿಕ ತಂತ್ರಜ್ಞಾನ, ಅತಿಯಾದ ಸ್ವೇಚ್ಛಾಚಾರ, ಹಿಂಸೆ, ವಂಚನೆ, ಇಡೀ ಸಮಾಜದ ನೈತಿಕತೆ ಕೆಳ ಹಂತಕ್ಕೆ ಇಳಿದು ” Success at any cost ” ಎಂಬ ಯಶಸ್ಸಿನ ಸಿದ್ದಾಂತ, ಅಪಾರ ಕೃತ್ರಿಮತೆ, ಹಣ ಕೇಂದ್ರೀಕೃತ ಸಮಾಜವಾಗಿ ದೇಹ, ಮನಸ್ಸುಗಳು ಮಲಿನಗೊಂಡಿರುವಾಗ ಸತ್ಯ ಮತ್ತು ಧೈರ್ಯ ಪಾಲನೆ ತುಂಬಾ ತುಂಬಾ ಕಷ್ಟ.

ಸತ್ಯ ಇಲ್ಲವೇ ಇಲ್ಲ ಎಂದಲ್ಲ, ವೈಯಕ್ತಿಕ ಮಟ್ಟದಲ್ಲಿ ಇರಬಹುದು. ಆದರೆ ಸಾರ್ವಜನಿಕವಾಗಿ ಅದು ಅಷ್ಟು ಸುಲಭವಲ್ಲ.

ತೀರಾ ಆಳವಾಗಿ ಯೋಚಿಸಿದಾಗ ಈಗಲೂ ಸಾಕ್ರೆಟಿಸ್ ಅವರ ಮಾತುಗಳು ನಿಜವೇ ಆಗಿದೆ, ಆದರ್ಶವೇ ಆಗಿದೆ‌. ಸತ್ಯ ಪಥದಲ್ಲಿ ಬದುಕುತ್ತಿರುವವರು ಯಾರಿಗೂ ಹೆದರುವ ಅಗತ್ಯವಿಲ್ಲ. ಆದರೆ ಅದು ತೀರಾ ಖಾಸಗಿ ಮತ್ತು ವೈಯಕ್ತಿಕವಾದದ್ದು. ಸಾರ್ವಜನಿಕ ಜೀವನದಲ್ಲಿ ಅದನ್ನು ಅನುಸರಿಸುವುದು ತುಂಬಾ ತುಂಬಾ ಕಷ್ಟ. ಕೆಲವೊಮ್ಮೆ ಕೌಟುಂಬಿಕವಾಗಿಯೂ ಸಂಪೂರ್ಣ ಸತ್ಯವಂತರಾಗಿರಲು ಸಾಧ್ಯವಿಲ್ಲ. ಆಗಲೂ ಸ್ವಲ್ಪ ಭಯಪಡಲೇಬೇಕಾಗುತ್ತದೆ. ಇಲ್ಲದಿದ್ದರೆ ಸಂಸಾರ ಉಳಿಯುವುದಿಲ್ಲ. ಸಂಸಾರವೇ ಉಳಿಯದ ಸತ್ಯದಿಂದ ಪ್ರಯೋಜನ ಇಲ್ಲ ಎನಿಸುತ್ತದೆ. ವ್ಯಾವಹಾರಿಕ ಸುಳ್ಳುಗಳು ಅನಿವಾರ್ಯ. ಅಪಾಯಕಾರಿ ಸುಳ್ಳುಗಳು ಅಪರಾಧ.

ಒಟ್ಟಿನಲ್ಲಿ ವ್ಯವಹಾರಿಕ ಜಗತ್ತನ್ನು ನೋಡಿದಾಗ ಸಾಕ್ರೆಟಿಸ್ ಮಾತುಗಳು ವಾಸ್ತವದಿಂದ ದೂರವಿದೆ. ಆಳದಲ್ಲಿ ಮಾತ್ರ ಆದರ್ಶವಾಗಿ ಉಳಿದಿದೆ. ಅಪರೂಪದಲ್ಲಿ ಯಾರೋ ಕೆಲವರಲ್ಲಿ ಮಾತ್ರ ಇನ್ನೂ ಜೀವಂತವಿದೆ….

ಕಾಲಾಯ ತಸ್ಮೈ ನಮಃ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!