ಸತತ 3 ತಿಂಗಳು ವಿದ್ಯುತ್ ಬಿಲ್ ಕಟ್ಟದವರಿಗೆ ವಿದ್ಯುತ್ ಕಟ್, ಮೀಟರ್‌ಗಳ ಪರವಾನಗಿಯೂ ರದ್ದು ಮಾಡಲು ಬೆಸ್ಕಾಂ ಆದೇಶ

 

ಕೊರೊನಾ, ಬೆಲೆ ಏರಿಕೆ, ಡಿಸೇಲ್, ಪೆಟ್ರೋಲ್ ಏರಿಕೆ, ವ್ಯಾಪಾರ ವಹಿವಾಟು ಹೀಗೆ ಅನೇಕ ಸಮಸ್ಯೆಗಳಿಂದ ನಲುಗುತ್ತಿರುವ ನೇಕಾರ ಸಮುದಾಯ ಹಾಗು ಬಡ, ಮಧ್ಯಮ ವರ್ಗದ ಜನತೆಗೆ ಬೆಸ್ಕಾಂ ಮತ್ತೊಂದು ಬರೆ ಎಳೆದಿದೆ. ಸತತ ಮೂರು ತಿಂಗಳ ಕಾಲ ವಿದ್ಯುತ್ ಶುಲ್ಕ ಪಾವತಿಸದವರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು (ಬೆಸ್ಕಾಂ) ವಿದ್ಯುತ್ ಸಂಪರ್ಕ ಕಡಿತದ ಶಾಕ್ ನೀಡುತ್ತಿದೆ. ಜತೆಗೆ ವಿದ್ಯುತ್ ಸಂಪರ್ಕ ಪರವಾನಗಿಯನ್ನೆ ರದ್ದುಗೊಳಿಸುವಂತ ಕಠಿಣ ನೀತಿಯನ್ನು ಜಾರಿಗೆ ತಂದಿದೆ.

ನೆಲಕಚ್ಚಿದ ನೇಕಾರ ಸಮುದಾಯ:

ನೋಟ್ ಬ್ಯಾನ್, ಜಿಎಸ್‌ಟಿ ಹೇರಿಕೆ, ಎರಡು ವರ್ಷಗಳ ಕೊರೊನಾ, ನೆಯ್ಗೆ ಉದ್ಯಮಕ್ಕೆ ಬಳಸುವ ಕಚ್ಚ ವಸ್ತುಗಳ ಬೆಲೆ ಏರಿಕೆ, ಡಿಸೇಲ್, ಪೆಟ್ರೋಲ್ ದರ ಏರಿಕೆ, ವ್ಯಾಪಾರ ವಹಿವಾಟು ಕುಸಿತದಿಂದ ಈಗಾಗಲೇ ನೇಕಾರ ಸಮುದಾಯ ಸಂಪೂರ್ಣ ನೆಲಕಚ್ಚಿದೆ. ಕೊರೊನಾ ಸಮಯದಲ್ಲಿ ವ್ಯಾಪಾರವೇ ಇಲ್ಲದಂತಾಗಿದ್ದು, ಕಳೆದೊಂದು ವರ್ಷದಿಂದ ಸುಧಾರಿಸಿಕೊಳ್ಳುತ್ತಿದ್ದ ಸಮಯದಲ್ಲಿ ವಿದ್ಯುತ್ ದರ ಏರಿಕೆ. ಹೀಗೆ ಪ್ರತಿ ಹಂತದಲ್ಲಿ ಪೆಟ್ಟು ತಿನ್ನುತ್ತಿರುವ ನೇಕಾರ ಸಮುದಾಯಕ್ಕೆ ಹಾಗೂ ಬಡ, ಮಧ್ಯಮ ವರ್ಗದ ಜನಕ್ಕೆ ಇದೀಗ ಬೆಸ್ಕಾಂ ಮತ್ತೊಂದು ಬರೆ ಎಳೆದಿದೆ.

ವರ್ಷಾನುಗಟ್ಟಲೇ ಕೋಟ್ಯಾಂತರ ರೂ. ಬಾಕಿ:

ಬಿಬಿಎಂಪಿ, ಜಲಮಂಡಳಿ, ಬಿಡಿಎ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೇರಿ ಇತರೆ ಸರಕಾರಿ ಇಲಾಖೆಗಳು ಹಲವು ವರ್ಷಗಳಿಂದ ಕೋಟ್ಯಂತರ ರೂ. ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿವೆ. ಈ ಇಲಾಖೆಗಳ ವಿರುದ್ಧ ಬೆಸ್ಕಾಂ ಯಾವುದೇ ಕ್ರಮ ಜರುಗಿಸುತ್ತಿಲ್ಲ. ನೋಟಿಸ್ ಜಾರಿಗೊಳಿಸಿ ಎಚ್ಚರಿಕೆಯನ್ನಷ್ಟೆ ನೀಡುತ್ತಿದೆ. ಆದರೆ, ಸಾಮಾನ್ಯ ಜನರ ಮೇಲೆ ಗದಾಪ್ರಹಾರ ನಡೆಸುತ್ತಿದೆ.

ವಿದ್ಯುತ್ ಕಟ್, ಮೀಟರ್ ಕಟ್, ಲೈಸೆನ್ಸ್ ಕ್ಯಾನ್ಸಲ್:

ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬೆಸ್ಕಾಂ, ಸತತವಾಗಿ ಮೂರು ತಿಂಗಳು ಬಿಲ್ ಪಾವತಿಸದವರ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಜತೆಗೆ ಮೀಟರ್‌ಗಳನ್ನೆ ಕಿತ್ತೊಯ್ಯುತ್ತಿದೆ. ಆ ಮೂಲಕ ಶುಲ್ಕ ವಸೂಲಿಗೆ ಮುಂದಾಗಿದೆ. ಯಾವುದೇ ನೋಟಿಸ್ ನೀಡದೆಯೇ ಬೆಸ್ಕಾಂ ಸಿಬ್ಬಂದಿಯು ಮೀಟರ್‌ಗಳನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ಇದರಿಂದ ಕತ್ತಲಲ್ಲಿ ದಿನ ದೂಡುವಂತಾಗಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ. ಬೆಸ್ಕಾಂ ಸಿಬ್ಬಂದಿಯು ಇಲ್ಲಿಯವರೆಗೆ ಬಿಲ್ ಪಾವತಿಸದವರ ಮನೆಗಳ ವಿದ್ಯುತ್ ಸಂಪರ್ಕವನ್ನಷ್ಟೆ ಕಡಿತಗೊಳಿಸುತ್ತಿದ್ದರು. ಶುಲ್ಕ ಪಾವತಿಸಿದ ಬಳಿಕ ಸಂಪರ್ಕ ಕಲ್ಪಿಸುತ್ತಿದ್ದರು. ಆದರೆ, ಕೆಲ ದಿನಗಳಿಂದೀಚೆಗೆ ವಿದ್ಯುತ್ ಸಂಪರ್ಕದ ಪರವಾನಗಿಯನ್ನೆ ರದ್ದುಗೊಳಿಸಿ, ಮೀಟರ್‌ಗಳನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ಹೀಗಾಗಿ, ಗ್ರಾಹಕರು ಮತ್ತೆ ವಿದ್ಯುತ್ ಸಂಪರ್ಕ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಆಗ್ರಹ.

ಮಗ್ಗಳನ್ನೇ ನಂಬಿ ಜೀವನ ಮಾಡುವ ನೇಕಾರರಿಗೆ ಮಗ್ಗಗಳೇ ಜೀವನಾಧಾರವಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಮಗ್ಗಗಳು ಕೆಟ್ಟು ನಿಲ್ಲುತ್ತಿವೆ. ಟಿಸಿಗಳನ್ನು ಬದಲಿಸಿ ಎಂದು ಹೇಳಿದರೂ ಬೆಸ್ಕಾಂನವರು ಬದಲಿಸುವುದಿಲ್ಲ. ರಿಡೀಂಗ್ ಮೀಟರ್‌ಗಳನ್ನು ಅಳವಡಿಸಿ ದಶಕಗಳೇ ಆಗಿದೆ. ಸರಿಯಾಗಿ ರೀಡಿಂಗ್ ಮೀಟರ್ ಕಾಣಿಸದೆ ಬೇಕಾಬಿಟ್ಟಿಯಾಗಿ ಬಿಲ್ ಹಾಕುತ್ತಿದ್ದಾರೆ. ಹೊಸ ಟಿಸಿ, ರೀಡಿಂಗ್ ಮೀಟರ್‌ಗಳನ್ನು ಅಳವಡಿಸುವಂತೆ ಮನವಿ ಮಾಡಿದರೂ ಬೆಸ್ಕಾಂ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ನೇಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವೆಂಬರ್ 22ಕ್ಕೆ ನೇಕಾರರ ಪ್ರತಿಭಟನೆ:

ಬೆಸ್ಕಾಂ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿ ನೇಕಾರ ಹೋರಾಟ ಸಮಿತಿ ವತಿಯಿಂದ ಬೆಸ್ಕಾಂ ಕಚೇರಿ ಮುಂಭಾಗ ನ.೨೨ರಂದು ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ. ನೇಕಾರ ಮತ್ತು ಬಡ-ಸಾಮಾನ್ಯ ಜನರ ಮೇಲೆ ಮರಣ ಶಾಸನ ಬರೆಯುತ್ತಿರುವ ಬೆಸ್ಕಾಂ ಮತ್ತು ಸರಕಾರದ ವಿರುದ್ಧ ಜನಾಂದೋಲನ ರೂಪಿಸಿ ಹೋರಾಟ ಮಾಡಲಾಗುವುದು ಎಂದು ನೇಕಾರ ಹೋರಾಟ ಸಮಿತಿ ಅಧ್ಯಕ್ಷ ಹೇಮಂತರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೇಕಾರ ವರ್ಗ ಹಾಗೂ ಗ್ರಾಹಕರೂ ಎಂದಿನAತೆ ಸ್ಪಂದಿಸುತ್ತಿದ್ದಾರೆ. ವಿದ್ಯುತ್ ಕಟ್, ಮೀಟರ್ ಕಟ್ ಮತ್ತು ಪರವಾನಗಿ ರದ್ದು ಮಾಡುವ ನೀತಿಗಳು ಮೇಲಾಧಿಕಾರಿಗಳದ್ದು, ನಾವು ಅವರ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದು ದೊಡ್ಡಬಳ್ಳಾಪುರ ಬೆಸ್ಕಾಂ ಎಇಇ ಆರ್. ಮಂಜುನಾಥ ತಿಳಿಸಿದರು.

ಸರಕಾರಿ ಕಚೇರಿಗಳು, ವಿವಿಧ ಅಭಿವೃದ್ಧಿ ನಿಗಮ ಮಂಡಳಿಗಳು ಸೇರಿ ಹಲವಾರು ಸಂಸ್ಥೆಗಳು ಕೋಟ್ಯಾಂತರ ರೂ. ಬಾಕಿ ಉಳಿಸಿಕೊಂಡಿದ್ದರು ಅವರಿಂದ ಬಾಕಿ ವಸೂಲಿ ಮಾಡಲಾಗದೆ. ಬೆಸ್ಕಾಂ ಬಡ ನೇಕಾರ, ಜನ ಸಾಮಾನ್ಯರ ಮೇಲೆ ಕಠಿಣ ಕ್ರಮ ಜಾರಿ ಮಾಡುತ್ತಿದೆ, ಇದೇ ನಿಯಮವನ್ನು ಕೋಟ್ಯಾಂತರ ರೂ.ಬಾಕಿ ಉಳಿಸಿಕೊಂಡಿರುವವರ ಮೇಲೂ ಜಾರಿ ಮಾಡಲಿ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಬೆಸ್ಕಾಂ, ಸರಕಾರ ನಡೆದುಕೊಳ್ಳುತ್ತಿದೆ ಎಂದು ನೇಕಾರ ಹೋರಾಟ ಸಮಿತಿ ಅಧ್ಯಕ್ಷ ಹೇಮಂತರಾಜು ದೂರಿದರು.

Leave a Reply

Your email address will not be published. Required fields are marked *