ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ವಿವಾದಾತ್ಮಕ ಭಾಷಣ ಮಾಡಿರುವ ಸಚಿವ ಅಶ್ವತ್ಥನಾರಾಯಣ್ ಅವರನ್ನು ಕೂಡಲೇ ಸಂಪುಟದಿಂದ ತೆಗೆದುಹಾಕಿ, ಕೊಲೆಗೆ ಪ್ರಚೋದನೆ ನೀಡಿರುವ ಪ್ರಕರಣದಡಿ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧನ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಡಿವೈಎಸ್ ಪಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಅದ್ದೆ ಮಂಜುನಾಥ, ಸ್ವಾತಂತ್ರ್ಯ ಪೂರ್ವದಲ್ಲಿ ದುಡಿಯುವ ವರ್ಗವನ್ನು ಕೀಳಾಗಿ ನೋಡಲಾಗುತ್ತಿತ್ತು. ಸಂವಿಧಾನ ಜಾರಿಯಾದ ಬಳಿಕ ಅಂತಹ ಕೀಳು ಪದ್ಧತಿ ಬದಲಾಗಿದೆ. ಆದರೆ ಮತ್ತೆ ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹಳೆ ಚಾಳಿ ಮುಂದುವರೆಸಿದೆ. ಬ್ರಾಹ್ಮಣ, ಪುರೋಹಿತ ಶಾಹಿ ಪದ್ಧತಿಯನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಗುಡುಗಿದರು.
ಟಿಪ್ಪುವನ್ನು ಕೊಂದಿದ್ದು ಬ್ರಿಟಿಷರು ಇದಕ್ಕೆ ದಾಖಲೆಗಳಿವೆ. ಆದರೆ ಬಿಜೆಪಿ ನಾಯಕರು ಟಿಪ್ಪುವನ್ನು ಕೊಂದದ್ದು ಒಕ್ಕಲಿಗರು ಎಂದು ಹೇಳಿ ಒಕ್ಕಲಿಗರಿಗೆ ಅಪಮಾನ ಮಾಡುತ್ತಿದ್ದಾರೆ. ಟಿಪ್ಪು ಹೆಸರನ್ನು ದ್ವೇಷ ರಾಜಕೀಯಕ್ಕೆ ಬಳಕೆ ಮಾಡಲಾಗುತ್ತಿದೆ. ಆರ್.ಎಸ್ .ಎಸ್ ನವರು ಸಿಟಿ ರವಿ ಮತ್ತು ಅಶ್ವತ್ಥನಾರಾಯಣ್ ರನ್ನು ಬಿಟ್ಟು ಸಮಾಜದಲ್ಲಿ ಕಿಡಿ ಹಚ್ಚುತ್ತಿದ್ದಾರೆ. ಉರಿಗೌಡ, ನಂಜೇಗೌಡ ಬಗ್ಗೆ ಯಾವುದೇ ದಾಖಲೆಗಳಿಲ್ಲ, ಇದೆಲ್ಲಾ ಆರ್.ಎಸ್.ಎಸ್ ನ ಕಪೋಕಲ್ಪಿತ ಕಥೆಗಳು ಎಂದರು.
ಸಂವಿಧಾನ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಗೆ ಸಚಿವ ಅಶ್ವತ್ಥನಾರಾಯಣ್ ಅಪಮಾನ ಮಾಡಿದ್ದಾರೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿದ ಮೇಲೆ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡು ಅಪಮಾನ ಮಾಡಿದ್ದಾರೆ ಕೂಡಲೇ ಸಂಪುಟದಿಂದ ವಜಾ ಮಾಡಿ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧನ ಮಾಡಬೇಕು ಎಂದು ಒತ್ತಾಯ ಮಾಡಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ ಮಾತನಾಡಿ ಸಿದ್ದರಾಮಯ್ಯ ನವರ ಏಳಿಗೆ ಸಹಿಸದ ಬಿಜೆಪಿ ನಾಯಕರು ಯಾವುದೇ ಕೀಳುಮಟ್ಟಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ರಾಜಕೀಯವಾಗಿ ನೇರಾನೇರ ಎದುರಿಸಲಾಗದವರು ಹಿಂಬಾಗಿಲಿನಿಂದ ಚೂರಿ ಹಾಕುವ ಕೆಲಸ ಮಾಡುತ್ತಾರೆ. ಈಗಿರುವ ಬಿಜೆಪಿ ಸರಕಾರ ಕೂಡ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿಲ್ಲ. ಸಂವಿಧಾನಕ್ಕೆ ವಿರೋಧವಾಗಿ ಶಾಸಕರನ್ನ ಖರೀದಿ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ರಾಜ್ಯದ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ. ಸಚಿವ ಸ್ಥಾನಕ್ಕೆ ನಾಲಾಯಕ್ ಆಗಿರುವ ಅಶ್ವತ್ಥನಾರಾಯಣ್ ಅವರನ್ನು ರಾಜ್ಯಪಾಲರು ವಜಾ ಮಾಡಿ ಸಂವಿಧಾನ ಆಶಯವನ್ನು ಎತ್ತಿ ಹಿಡಿಯಬೇಕು ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸಿ.ಆರ್ ಗೌಡ, ಕೆಪಿಸಿಸಿ ಸದಸ್ಯರಾದ ಖಲೀಂ ಉಲ್ಲಾ ಖಾನ್, ಹೇಮಂತರಾಜು, ಮಾಜಿ ಶಾಸಕ ಮುನಿನರಸಿಂಹಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಜಯಲಕ್ಷ್ಮಿ, ಮುಖಂಡರಾದ ಕೃಷ್ಣಮೂರ್ತಿ, ಬಷೀರ್, ರಾಜೇಶ್, ಕಾಂತರಾಜು ಮತ್ತಿತರರು ಇದ್ದರು.