‘ಇಂದು ನಾಳೆ ಇನ್ನಿಲ್ಲ , ಹೇಳಿದ ಸಮಯ ತಪ್ಪಲ್ಲ’ ಎಂಬ ಧ್ಯೇಯವಾಕ್ಯದೊಂದಿಗೆ ಸರ್ಕಾರದ ವಿವಿಧ ಯೋಜನೆಗಳು, ದಾಖಲೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರೈಸುವ ಸಕಾಲ ಮಿಷನ್ ಅನುಷ್ಠಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು 2023 ರ ಡಿಸೆಂಬರ್ ತಿಂಗಳಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ.
ಜಿಲ್ಲಾಡಳಿತದ ಈ ಸ್ಪಂದನಶೀಲತೆ ಹಾಗೂ ಸಾಧನೆಗೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ 64,099 ಅರ್ಜಿಗಳು ಸಕಾಲ ಅಡಿ ಸ್ವೀಕೃತಿಯಾಗಿದ್ದವು. 65,820 ಅರ್ಜಿಗಳು ವಿಲೇವಾರಿಯಾಗಿವೆ. 3218 ಅರ್ಜಿಗಳು ತಿರಸ್ಕೃತಗೊಂಡಿವೆ. 859 ಅರ್ಜಿಗಳು ಮಾತ್ರ ಬಾಕಿ ಇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯು, ಶೇ.18.5 ಅಂಕಗಳನ್ನು(ವೇಟೇಜ್) ಪಡೆದು ಈ ಸಾಧನೆ ಮಾಡಿದೆ. ಇದಕ್ಕಾಗಿ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಡಾ.ಶಿವಶಂಕರ.ಎನ್, ಜಿಪಂ ಸಿಇಓ ಡಾ.ಅನುರಾಧ ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ಜಿಪಂ ಉಪಕಾರ್ಯದರ್ಶಿ ರಮೇಶ್ ಟಿ.ಕೆ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಈ ಪ್ರಯತ್ನವನ್ನು ಸಚಿವರು ಶ್ಲಾಘಿಸಿದ್ದಾರೆ.