
ಸಂವಿಧಾನ – ತಿಳಿವಳಿಕೆ ಮತ್ತು ನಡವಳಿಕೆ……….
ಈ ಬಗ್ಗೆ ಗೆಳೆಯರ ಬಳಿ ಚರ್ಚೆ ಮಾಡುತ್ತಿದ್ದಾಗ ಅವರು ಹೇಳಿದರು
” ಭಾರತದ ಮೂಲ ಅಪರಾಧ ಕಾನೂನಿನಲ್ಲಿ ಅನೇಕ ತಪ್ಪುಗಳಿವೆ, ಹಲವಾರು ಲೋಪಗಳಿವೆ. ಅದರಿಂದಾಗಿಯೇ ನಮ್ಮ ವ್ಯವಸ್ಥೆ ಹದಗೆಟ್ಟಿದೆ. ರಾಜಕೀಯ ದುರ್ಬಲವಾಗಿದೆ. ಕಾನೂನಿನ ಕೆಲವು ತಿದ್ದುಪಡಿಯ ಅವಶ್ಯಕತೆ ಇದೆ…….. ”
ವಿಶ್ವದಲ್ಲೇ ಅತ್ಯಂತ ದೊಡ್ಡ ಲಿಖಿತ ಸಂವಿಧಾನ ಭಾರತದ್ದು. ಅತ್ಯಂತ ಚಿಕ್ಕ ಸಂವಿಧಾನ ಹೊಂದಿರುವುದು ಅಮೆರಿಕ. ಯಾವುದೇ ಲಿಖಿತ ಸಂವಿಧಾನ ಹೊಂದದೆ ಇತಿಹಾಸ ಮತ್ತು ಅನುಭವದ ಆಧಾರದ ಮೇಲೆ ಅಲಿಖಿತವಾಗಿರುವ ಸಂವಿಧಾನ ಇಂಗ್ಲೆಂಡ್ ನವರದು.
” ಕಾನೂನುಗಳು ಜಾಸ್ತಿಯಾದಷ್ಟೂ ಅಪರಾಧಗಳು ಹೆಚ್ಚಾಗುತ್ತದೆ ” ಎಂಬ ಮಾತು ಭಾರತಕ್ಕೆ ಸ್ಪಷ್ಟವಾಗಿ ಅನ್ವಯವಾಗುತ್ತದೆ. ಇಷ್ಟು ದೊಡ್ಡ ಎಲ್ಲಾ ಅಂಶಗಳನ್ನು ಒಳಗೊಂಡ ಸಂವಿಧಾನ ನಮ್ಮದಾದರೂ ಅದರ ದುರುಪಯೋಗ ಮಾತ್ರ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕಾರಣ ನಮ್ಮ ಜನಗಳ – ವ್ಯವಸ್ಥೆಯ – ನಾಗರಿಕತೆಯ ಮೂಲ ಸ್ವರೂಪದಲ್ಲಿ ಇರುವ ಆತ್ಮವಂಚನೆಯ ವ್ಯಕ್ತಿತ್ವ.
ಹೌದು, ಕಾನೂನಿನಲ್ಲಿ ಒಂದು ಅಂಶವಿದೆ. ಕೊಲೆ ಅತ್ಯಾಚಾರ ಸೇರಿದಂತೆ ಯಾವುದೇ ಅಪರಾಧಕ್ಕೆ ಸ್ಪಷ್ಟವಾದ ಸಾಕ್ಷಿ ಮತ್ತು ದಾಖಲೆ ಇದ್ದಾಗ ಮಾತ್ರ ಆರೋಪಿಗೆ ಶಿಕ್ಷೆ ವಿಧಿಸಬೇಕು. ನೂರು ಅಪರಾಧಿಗಳು ಶಿಕ್ಷೆಯಿಂದ ಪಾರಾದರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ಇದರ ಮೂಲ ಆಶಯ. ಆದರೆ ಆಗಿರುವುದೇನು ?
ಈ ದೇಶದ ಶೇಕಡಾ 90% ಕ್ಕೂ ಹೆಚ್ಚು ಗಂಭೀರ ಆರೋಪಗಳು ಸಾಕ್ಷಿಗಳ ಕೊರತೆಯಿಂದ, ಪ್ರಾಸಿಕ್ಯೂಷನ್ ಅದನ್ನು ದೃಢಪಡಿಸಲು ಸಾಧ್ಯವಾಗದ ಕಾರಣ, ವಕೀಲರ ಬುದ್ಧಿವಂತಿಕೆಯಿಂದ ಶಿಕ್ಷಿಯಾಗದೆ ಬಿಡುಗಡೆಯಾಗುತ್ತಿವೆ.
ಸಂವಿಧಾನದಲ್ಲಿ ಕೆಲವು ಲೋಪಗಳಿವೆ ಎಂದ ಮಾತ್ರಕ್ಕೆ ನಾವು ತಪ್ಪು ಮಾಡಬೇಕೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಹಸಿರು ದೀಪ ಇದೆ ಎಂಬ ಕಾರಣಕ್ಕೆ ಮುಂದೆ ಮನುಷ್ಯರು ಇದ್ದರೂ ವಾಹನ ಚಲಾಯಿಸಬಹುದೇ, ಅಪರಾಧ ಸಾಬೀತು ಪಡಿಸಲು ಸಾಕ್ಷಿಗಳ ಅವಶ್ಯಕತೆ ಇದೆ ಎಂದ ಮಾತ್ರಕ್ಕೆ ಸಾಕ್ಷ್ಯಗಳು ಇಲ್ಲದಂತೆ ಕೊಲೆ ಅತ್ಯಾಚಾರ ಭ್ರಷ್ಟಾಚಾರ ಮಾಡಬಹುದೇ…..
ಸಂವಿಧಾನದಲ್ಲಿ ಅಧಿಕಾರ ಹಿಡಿಯಲು ಜನ ಪ್ರತಿನಿಧಿಗಳ ಸಂಖ್ಯೆ ಮುಖ್ಯ ಎಂಬ ಒಂದು ಅಂಶವನ್ನೇ ಮುಂದೆ ಮಾಡಿ ಯಾರು ಯಾರೋ ಹೇಗೆ ಹೇಗೋ ವಾಮ ಮಾರ್ಗದಿಂದ ಅಧಿಕಾರ ಸ್ವೀಕರಿಸಬಹುದೇ, ಪರೀಕ್ಷೆಗಳಲ್ಲಿ ಅಂಕಗಳೇ ಮುಖ್ಯ ಎಂದು ವಿದ್ಯಾರ್ಥಿಗಳು ಯಾರಿಗೂ ಕಾಣದಂತೆ ಯಾವುದೋ ಮಾರ್ಗದಲ್ಲಿ ಅಂಕ ಹೆಚ್ಚು ಗಳಿಸಿದರೆ ಸಾಕೇ, ಯಾರಿಗೂ ಗೊತ್ತಾಗದಂತೆ ಲಂಚ ಪಡೆಯಬಹುದೇ………
ಸ್ವತಃ ಅಂಬೇಡ್ಕರ್ ಇದನ್ನು ಬಲ್ಲವರಾಗಿದ್ದರು. ಅವರೇ ಒಮ್ಮೆ ಹೇಳುತ್ತಾರೆ. ಕಾನೂನುಗಳ ರಚನೆಯ ಸಾರ್ಥಕತೆ ಅಡಗಿರುವುದು ಅದನ್ನು ಅನುಷ್ಠಾನ ಗೊಳಿಸುವವರ ಪ್ರಾಮಾಣಿಕತೆಯನ್ನು ಅವಲಂಬಿಸಿರುತ್ತದೆ.
ಲೋಪವಿರುವುದು ಕಾನೂನಿನಲ್ಲಿ – ಸಂವಿಧಾನದಲ್ಲಿಯಲ್ಲ. ನಮ್ಮ ಮನಸ್ಸುಗಳಲ್ಲಿ, ನಮ್ಮ ನಡವಳಿಕೆಯಲ್ಲಿ,
ನಮ್ಮ ವ್ಯಕ್ತಿತ್ವದಲ್ಲಿ…….
ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಲಂಚ ಪಡೆಯುವುದು ಅಪರಾಧ ಅದಕ್ಕೆ ಶಿಕ್ಷೆ ಇದೆ ಎಂದು. ಆದರೆ ಈ ದೇಶದ ಆಡಳಿತದ – ಕೆಲಸದ ಸಮಯದಲ್ಲಿ ಮತ್ತು ನಂತರದಲ್ಲೂ ಪ್ರತಿ ಕ್ಷಣ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಯುತ್ತಲೇ ಇದೆ.
ಕೊಲೆ, ಅತ್ಯಾಚಾರ, ದರೋಡೆಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಇದ್ದರು ಈಗಲೂ ಇದು ನಮ್ಮ ಸಮಾಜದ ದಿನನಿತ್ಯದ ಕಸುಬಾಗಿದೆ.
ಈಗ ಹೇಳಿ, ಕಾನೂನು ಮಾಡುವುದು ಹೇಗೆ. ಕಳ್ಳರ ಸಂತೆಯಲ್ಲಿ ಸಂತನನ್ನು ಹುಡುಕುವುದು ಹೇಗೆ….
ನನ್ನ ಅನುಭವದಲ್ಲಿ ಹೇಳುವುದಾದರೆ ಕಾನೂನುಗಳು ಎಷ್ಟೇ ಬಿಗಿಯಾಗಿದ್ದರು ಕಾಲ ಕ್ರಮೇಣ ಅದರ ಲೋಪಗಳು ತೆರೆದುಕೊಳ್ಳುತ್ತಾ ಸಡಿಲವಾಗುತ್ತವೆ ಮತ್ತು ಅಪರಾಧಗಳಿಗೆ ಸಹಾಯ ಮಾಡುತ್ತದೆ. ಪಕ್ಷಾಂತರ ನಿಷೇಧ ಕಾನೂನು ಈಗ ಪಕ್ಷಾಂತರಿಗಳಿಗೆ ವರವಾಗಿದೆ.
ಈಗಲೂ ಅಷ್ಟೇ,
ನ್ಯಾಯಾಲಯದ ವಿಚಾರಣೆಯಲ್ಲಿ ಅನುಭವ ಇರುವವರಿಗೆ ಇದು ತಿಳಿದಿರುತ್ತದೆ. ಒಬ್ಬ ನಿರಪರಾಧಿ ತಾನು ಒಳ್ಳೆಯವನು ಎಂದು ಸಾಬೀತು ಪಡಿಸಲು ಹಲವಾರು ದಾಖಲೆಗಳನ್ನು ಒದಗಿಸಬೇಕು. ನಾವು ಸಹಾಯದ ಸಾಲವಾಗಿ ಗೆಳೆಯರು ಮತ್ತು ಸಂಬಂಧಿಗಳಿಗೆ ಹಣ ಕೊಟ್ಟು ಅವರು ಅದನ್ನು ಹಿಂದಿರುಗಿಸದಿದ್ದಾಗ ಅದನ್ನು ಪಡೆಯಲು ನ್ಯಾಯಾಲಯದ ಮೊರೆ ಹೋದಾಗ ನಾವು ಹಣ ಕೊಟ್ಟಿರುವ ಕಾರಣ, ಸಂದರ್ಭ, ಕೊಟ್ಟಿರುವ ರೀತಿ, ಕಾನೂನಿನ ವ್ಯಾಪ್ತಿ ಮುಂತಾದ ಅನೇಕ ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಸಬೇಕು. ಆದರೆ ತಪ್ಪಿತಸ್ಥರು ಒಂದೇ ವಾಕ್ಯದಲ್ಲಿ ತಾನು ಅಪರಾಧ ಮಾಡಿಲ್ಲ ಅಥವಾ ಹಣ ಪಡೆದಿಲ್ಲ ಎಂದು ಹೇಳುತ್ತಾನೆ ಮತ್ತು ನಾವು ಕೊಟ್ಟಿರುವ ಸಾಕ್ಷಿ ದಾಖಲೆಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ಸಹಜವಾಗಿ ಅನೇಕ ಮಾರ್ಗಗಳು ಇರುತ್ತದೆ. ಏಕೆಂದರೆ ವ್ಯವಹಾರ ಮಾಡುವಾಗ ಮೊದಲೇ ಎಲ್ಲವನ್ನೂ ಊಹಿಸುವುದು ಕಷ್ಟ. ಒಂದು ವೇಳೆ ಊಹಿಸಿದರೆ ಎಷ್ಟೋ ವ್ಯವಹಾರಗಳು ನಡೆಯುವುದೇ ಇಲ್ಲ. ಎಲ್ಲರೂ ಸಂಬಳದ ಕೆಲಸ ಅಥವಾ ಶ್ರೀಮಂತರು ಅಲ್ಲವಲ್ಲ. ಹೊಟ್ಟೆ ಪಾಡಿಗೆ ಕೆಲಸ, ವ್ಯವಹಾರ ಮಾಡಲೇ ಬೇಕಲ್ಲವೇ. ಕೆಲವೊಮ್ಮೆ ಸಹಾಯವೂ ಮಾಡಬೇಕಾಗುತ್ತದೆ. ನಂಬಿಕೆಗಳ – ಭಾವನೆಗಳ ಆಧಾರದಲ್ಲಿ ಈ ದೇಶ ನಡೆಯುತ್ತಿದೆಯೇ ಹೊರತು ವಾಸ್ತವದ ಮೇಲಲ್ಲ.
ನಿರಪರಾಧಿಯೊಬ್ಬ ಅಥವಾ ಹಣದ ಸಹಾಯ ಮಾಡಿದವನು ಮೋಸ ಮಾಡಿದವನ ಮೇಲೆ ಮೊಕದ್ದಮೆ ಹೂಡಿದಾಗ ತೀರ್ಮಾನದ ಒಂದು ಭಾಗವಾಗಿ ನಿರಪರಾಧಿಯನ್ನು ವಿರೋಧಿ ವಕೀಲರು ಕಟಕಟೆಯಲ್ಲಿ ನಿಲ್ಲಿಸಿ ಕೇಳುವ ಪ್ರಶ್ನೆಗೆ ಆತ ಎಷ್ಟೇ ಪ್ರಾಮಾಣಿಕನಾಗಿದ್ದರೂ ತತ್ತರಿಸಿ ಹೋಗುತ್ತಾನೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಗಳು ಸಹ ಅತ್ಯಾಚಾರಿ ಪರ ವಕೀಲರ ಕೆಲವು ಪ್ರಶ್ನೆಗೆ ಅವಮಾನ ಸಹಿಸಲಾಗದೆ ಆತ್ಮಹತ್ಯೆಯೇ ಲೇಸು ಎಂದು ಆಲೋಚಿಸುವುದೂ ಉಂಟು….
ನಮ್ಮ ಕಣ್ಣ ಮುಂದೆಯೇ ನಡೆದ ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಪ್ರಕರಣ ನಡದೇ ಇಲ್ಲ ಎನ್ನುವಷ್ಟು ಆಳವಾಗಿ ಕಾನೂನಿನ ಸಾಕ್ಷಿಗಳನ್ನು ತಿರುಚಿ ವಾದಿಸಬಲ್ಲ ಸಮರ್ಥ ಕ್ರಿಮಿನಲ್ ಲಾಯರುಗಳು ಸಹ ಇದ್ದಾರೆ.
ಹೀಗಿದೆ ನಮ್ಮ ಕಾನೂನು, ವ್ಯವಸ್ಥೆ, ಮನಸ್ಸು, ನಡವಳಿಕೆ. ಇದು ಮುಗಿಯದ ಕಥೆ…..
ಒಟ್ಟಾರೆ ಸಮಸ್ಯೆ ಇರುವುದು ಕಾನೂನು ಅಥವಾ ಸಂವಿಧಾನದಲ್ಲಿ ಅಲ್ಲ. ಒಂದು ವೇಳೆ ಸಣ್ಣ ಪುಟ್ಟ ಸಮಸ್ಯೆ ಇದ್ದರೂ ಅದನ್ನು ತಿದ್ದುಪಡಿ ಮುಖಾಂತರ ಬದಲಾಯಿಸಬಹುದು.
ಆದರೆ ವ್ಯಕ್ತಿತ್ವದ – ವ್ಯವಸ್ಥೆಯ ಸಮಸ್ಯೆ ಬದಲಾಯಿಸುವುದು ಹೇಗೆ ?
” ತನಗೂ ಒಂದು ದಿನ ಸಾವಿದೆ ಎಂಬುದನ್ನು ಅರಿತವನು ಇನ್ನೊಬ್ಬರಿಗೆ ಎಂದೂ ತೊಂದರೆ ಕೊಡುವುದಿಲ್ಲ ”
ಗೌತಮ ಬುದ್ಧ………
ಆಧುನಿಕ ಸಮಾಜದ ಮೋಸ, ವಂಚನೆ, ಹಿಂಸಾಕೃತ್ಯಗಳು, ಅಧಿಕಾರ ದಾಹ, ಅತ್ಯಾಚಾರ, ಆತ್ಮಹತ್ಯೆ, ಅಪಘಾತಗಳು ಈ ಎಲ್ಲವನ್ನು ನೋಡಿದಾಗ ನಿಜಕ್ಕೂ ಬುದ್ಧನ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತದೆ, ಕಾಡುತ್ತದೆ. ಮನುಷ್ಯ ಪ್ರಾಣಿಗೆ ಇಷ್ಟು ಸರಳ ವಿಷಯಗಳು ಅರ್ಥವಾಗುವುದಿಲ್ಲವೇ ಎಂದು ಆಶ್ಚರ್ಯವಾಗುತ್ತದೆ…….
ಬುದ್ಧನ ಈ ಚಿಂತನೆ ಕೇವಲ ಒಣ ಅಕ್ಷರಗಳಾಗಲಿ, ಮಾತುಗಳ ಜೋಡಣೆಯಾಗಲಿ ಅಲ್ಲ. ದೇಹ ಮತ್ತು ಮನಸ್ಸನ್ನು ಧೀರ್ಘವಾಗಿ ಮತ್ತು ಆಳವಾಗಿ ದಂಡಿಸಿದ ನಂತರ ಚಿಂತನ, ಮಂಥನ, ಅಧ್ಯಯನಗಳಿಂದ ಆಗಿನ ಕಾಲದಲ್ಲೇ ಒಡಮೂಡಿದ ಜ್ಞಾನೋದಯದ ಸಾಲುಗಳು, ಸಾರ್ವಕಾಲಿಕ ಸತ್ಯಗಳು……
ಇದನ್ನು ಎಳವೆಯಲ್ಲಿ, ಪ್ರೌಢಾವಸ್ಥೆಯಲ್ಲಿ, ಯೌವ್ವನದಲ್ಲಿ ನಮ್ಮ ಪೀಳಿಗೆಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದೇಯಾದರೆ ಕನಿಷ್ಠ ಮುಂದಿನ ದಿನಗಳಾದರು ಉತ್ತಮವಾಗಿ ರೂಪಗೊಳ್ಳಬಹುದು. ಆದರೆ ದುರಂತವೆಂದರೆ, ಪ್ರತಿನಿತ್ಯದ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಗಳಾಗಲಿ, ಶಿಕ್ಷಣದ ಮೌಲ್ಯಗಳಾಗಲಿ, ಸಮಾಜದ ಚಟುವಟಿಕೆಗಳಾಗಲಿ ಈ ನಿಟ್ಟಿನಲ್ಲಿ ಸಾಗುತ್ತಲೇ ಇಲ್ಲ. ಬದಲಾಗಿ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ…..
ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ………
ಧರ್ಮವೇ ಕರ್ಮ( ಕಾಯಕ ) ವಾಗಬೇಕಾದ ಸನ್ನಿವೇಶದಲ್ಲಿ……..
ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಈಗಾಗಲೇ ದೇವರು, ಧರ್ಮ, ಸಂವಿಧಾನ, ಪ್ರಜಾಪ್ರಭುತ್ವ, ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಖುರಾನ್, ಬೈಬಲ್, ಭಗವದ್ಗೀತೆ, ಸೌಹಾರ್ದತೆ, ಸಂಯಮ, ಸಮನ್ವಯ ಮುಂತಾದ ವಿಷಯಗಳ ಬಗ್ಗೆ ಬಹುತೇಕ ಸಾಮಾನ್ಯ ಜನರಿಗೂ ತಲುಪುವಷ್ಟು ಚರ್ಚೆಗಳು, ಅಭಿಪ್ರಾಯಗಳು ವ್ಯಕ್ತವಾಗಿದೆ……
ದ್ವೇಷಿಸುತ್ತಾ, ಅಸೂಯೆಪಡುತ್ತಾ ಬದುಕುವುದುಕ್ಕಿಂತ ಈಗ ಉಳಿದಿರುವುದು ಮತ್ತು ಮುಂದುವರಿಯಬೇಕಾಗಿರುವುದು ತಿಳಿವಳಿಕೆ ಮತ್ತು ನಡವಳಿಕೆ. ಇದೇ ಅತ್ಯಂತ ಮಹತ್ವದ ವಿಷಯ……
ಆಧುನಿಕ ಸಮಾಜ ನೀಡಿರುವ ಎಲ್ಲಾ ಸಿರಿ ಸಂಪತ್ತುಗಳು – ಪ್ರಜಾಪ್ರಭುತ್ವ ಎಂಬ ಅಪರಿಮಿತ ಸ್ವಾತಂತ್ರ್ಯ ಎಲ್ಲವನ್ನೂ ಉಪಯೋಗಿಸಿಕೊಂಡು ಇರುವಷ್ಟು ದಿನ, ಇರುವುದರಲ್ಲಿ ಒಂದಷ್ಟು ಸುಖ, ಸಂತೋಷ, ನೆಮ್ಮದಿಯಿಂದ ಬಾಳಬೇಕೆ ಅಥವಾ ಈಗಿನ ಸಂದರ್ಭಕ್ಕೆ ಅಪ್ರಸ್ತುತವಾದ ಅಥವಾ ಅಷ್ಟೇನೂ ಪ್ರಯೋಜನವಲ್ಲದ ಪುರಾತನ ಕಾಲದ ಯಾವುದೋ ನಂಬಿಕೆ, ಸಂಪ್ರದಾಯಗಳಿಗೆ ಕಟ್ಟುಬಿದ್ದು ಮನುಷ್ಯರೇ ಧರ್ಮದ, ಜಾತಿಯ ಆಧಾರದಲ್ಲಿ ಒಬ್ಬರಿಗೊಬ್ಬರು ಕೊಂದುಕೊಳ್ಳುತ್ತಾ, ಸದಾ ಆತಂಕದಿಂದ ಬದುಕಬೇಕೇ ಎಂಬ ಆಯ್ಕೆ ಮಾತ್ರ.
ಅದು ನಿಮ್ಮ ವಿವೇಚನೆಗೆ ಬಿಡುತ್ತಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ.