ಸಂವಿಧಾನ ಜಾಗೃತಿ ರಥಕ್ಕೆ ಅದ್ಧೂರಿ ಸ್ವಾಗತ: ಸಂವಿಧಾನದ ಹಕ್ಕು, ಕರ್ತವ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಸಂವಿಧಾನ ಜಾಗೃತಿ ಮೂಡಿಸುವಂತಹ ರಥವನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿ, ಕಳಶಗಳನ್ನು ಹೊತ್ತು ಕಾಲ್ನಡಿಗೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಇದೇ ಸಂದರ್ಭದಲ್ಲಿ ವಿವಿಧ ಕಲಾತಂಡಗಳ ಮೂಲಕ, ವಿದ್ಯಾರ್ಥಿಗಳನ್ನೊಳಗೊಂಡಂತೆ ಫ್ಲಾಶ್ ಕಾರ್ಡನ್ನು ಉಪಯೋಗಿಸುವ ಮೂಲಕ ಅಂಬೇಡ್ಕರ್ ಅವರ ಹಿತ ನುಡಿಗಳು ಅಶೋಕ್ತಿಗಳನ್ನು ತೋರಿಸುವ ಹಾಗೂ ಸಂವಿಧಾನದ ಹಕ್ಕು ಕರ್ತವ್ಯಗಳ ಅರಿವು ಮೂಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ನಂತರ ಸಂವಿಧಾನ ಪೀಠಿಕೆಯನ್ನು ಗ್ರಾಮಸ್ಥರಿಗೆ ಬೋಧಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಬಗ್ಗೆ ಭಾಷಣ ಮಾಡಿಸಲಾಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಬಗ್ಗೆ ಭಾಷಣ ಮಾಡಿಸಲಾಯಿತು.

ಸಂವಿಧಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಹೆಗ್ಗಡಿಹಳ್ಳಿ ಗ್ರಾ.ಪಂ. ಸದಸ್ಯ ಮುನಿಕೃಷ್ಣಪ್ಪ, ಸ್ವಾತಂತ್ರ್ಯ ಬಂದಾಗಿನಿಂದಲೂ ವಿವಿಧ‌ ಸಂಘಟನೆಗಳು ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಸಂವಿಧಾನದಿಂದಲೇ ನಾವೆಲ್ಲ ಜೀವಿಸುತ್ತಿದ್ದೇವೆ. ಜನಸಾಮಾನ್ಯರಿಗೆ ಎಲ್ಲ ರೀತಿಯ ಸ್ಥಾನ‌ಮಾನ ನೀಡಿರುವ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಸ್ವಾತಂತ್ರ್ಯ ಬಂದಾಗ ಎಷ್ಟು‌ ಸಂಭ್ರಮ ಪಟ್ಟಿದ್ದೇವೋ ಅದೇ ರೀತಿ ಸಂಭ್ರಮದ ವಾತಾವರಣ ಇಲ್ಲಿ‌ ಮನೆ ಮಾಡಿದೆ ಎಂದು ಹೇಳಿದರು.

ನಂತರ ತಾಲ್ಲೂಕು ಪಂಚಾಯತಿ ಇಒ ಮುನಿರಾಜು ಮಾತನಾಡಿ, ಸಂವಿಧಾನ ಜಾಗೃತಿ ಜಾಥಾ ವಿಶೇಷವಾದ ಅಭಿಯಾನ. ಈಗಾಗಲೇ ಜಾಥಾ ಕಾರ್ಯಕ್ರಮ ದೇವನಹಳ್ಳಿ, ಹೊಸಕೋಟೆ ಮುಗಿಸಿ ನಮ್ಮ ತಾಲೂಕಿಗೆ ಆಗಮಿಸಿದೆ. ಹೆಗ್ಗಡಿಹಳ್ಳಿ ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘಟನೆಗಳ‌ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಿದ್ದಾರೆ. ಎಲ್ಲ ಪಂಚಾಯ್ತಿಗಳಲ್ಲಿ‌ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿದ ಬಳಿಕ ದೊಡ್ಡಬಳ್ಳಾಪುರದಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ ವಿದಾಯ ಹೇಳಲಾಗುವುದು ಎಂದು ಹೇಳಿದರು.

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮಾಪತಿ ಮಾತನಾಡಿ, ಇಂದು ಸಂವಿಧಾನ ಜಾಗೃತಿ ಜಾಥಾ ತಾಲ್ಲೂಕಿಗೆ ಬಂದಿದೆ, ಜಾಥಾದಲ್ಲಿ ತಾಲ್ಲೂಕಿನ ಎಲ್ಲ ಹಂತದ ಅಧಿಕಾರಿಗಳು ಭಾಗವಹಿಸಿದ್ದಾರೆ, ಜನರಿಂದ ಉತ್ತಮ ಸ್ಫಂದನೆ ವ್ಯಕ್ತವಾಗುತ್ತಿದೆ. ಜಾಥಾ ತಾಲೂಕಿನಲ್ಲಿ  ಒಂದು ವಾರಗಳ ಕಾಲ ಸಂಚರಿಸಿ ನೆಲಮಂಗಲ ತಾಲ್ಲೂಕಿಗೆ ಹೊರಡಲಿದೆ ಎಂದರು.

ನಂತರ ಮೆಳೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತದ ಮೂಲಕ ಸಂವಿಧಾನ ಜಾಗೃತಿ ಜಾಥಾ ರಥವನ್ನು ಗ್ರಾಮಸ್ಥರು ಸ್ವಾಗತಿಸಿ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಹಿಳೆಯರಿಂದ ರಂಗೋಲಿ, ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಮತ್ತು ಪ್ರಬಂಧ ಸ್ಫರ್ಧೆ ಏರ್ಪಡಿಸಲಾಗಿತ್ತು‌. ಸ್ಫರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎನ್.ಶ್ರೀನಿವಾಸ್ ಅವರು ಬಹುಮಾನ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯಹನುಮಣ್ಣ, ಮೆಳೆಕೋಟೆ ಗ್ರಾ.ಪಂ.ಅಧ್ಯಕ್ಷ ಬಿ.ಎನ್ ಶ್ರೀನಿವಾಸ್, ಜೆಡಿಎಸ್ ಮುಖಂಡ ಗೌರಿಶ್, ಕಾಂಗ್ರೆಸ್ ಜಿಲ್ಲಾ ಉಪಾದ್ಯಕ್ಷರಾದ ಎಸ್.ಡಿ ಮುನಿರಾಜು, ಜಾಗೃತಿ ಮತ್ತು ಉಸ್ತುವಾರಿ ಸದಸ್ಯ ರಾಮಣ್ಣ, ಮಂಜುನಾಥ, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಗುರುರಾಜಪ್ಪ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಹಾಗೂ ಎಲ್ಲಾ ವಾರ್ಡನ್ ಗಳು, ಸ್ವಸಹಾಯ ಸಂಘದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *