ಸಂಪರ್ಕ ರಸ್ತೆಯ ಹೆಸರಿನಲ್ಲಿ ನಿಖರ ಬೆಲೆ ನಿಗದಿ ಮಾಡದೇ ಫಲವತ್ತಾದ ಭೂಮಿ ಕಬಳಿಸುವ ಯತ್ನ- ರೈತ ಮುಖಂಡ ಆನಂದ್ ಮೂರ್ತಿ

ಸರ್ಕಾರಿ ಅಧಿಕಾರಿಗಳು ನಮ್ಮ ಭೂಮಿಗೆ ಸರಿಯಾದ ಬೆಲೆ ಘೋಷಣೆ ಮಾಡದೆ ಫಲವತ್ತಾದ ನಮ್ಮ ಭೂಮಿಯನ್ನು ಕಸಿದು ಕೊಳ್ಳುತ್ತಿದ್ದಾರೆ, ಸಂಪರ್ಕ ರಸ್ತೆಯ ಹೆಸರಿನಲ್ಲಿ ಮೋಸ ನಡೆಯುತ್ತಿದೆ. ನಮ್ಮ ಭೂಮಿಗೆ ಸರಿಯಾದ ಬೆಲೆ ನೀಡಲು ಮನಸಿಲ್ಲದ ಅಧಿಕಾರಿಗಳು ಹಲವಾರು ಕಾರಣಗಳನ್ನು ಹೇಳಿ ಪಲಾಯನ ಮಾಡುತ್ತಿದ್ದಾರೆ. ರೈತರ ಗೋಳನ್ನು ಕೇಳುವವರಿಲ್ಲ ಎಂದು ರೈತ ಮುಖಂಡರಾದ ಆನಂದ್ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರವಾಸಿ ಮಂದಿರದಲ್ಲಿ ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ, ಬೀರಸಂದ್ರ, ಬೈರದೆನಹಳ್ಳಿ, ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ ಗ್ರಾಮಗಳಲ್ಲಿ 118-37ಗುಂಟೆ ವಿಸ್ತೀರ್ಣದ ಜಮೀನನ್ನು ಕೆ. ಐ. ಎ. ಡಿ. ಬಿ. ಕಾಯ್ದೆ ಅನ್ವಯ ಪರಿಹಾರ ನಿಗದಿಪಡಿಸಲು ನೆವಂಬರ್ 29 ರಂದು ನಡೆದ ಸಭೆಯ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಪರ ಇರಬೇಕಾದ ಅಧಿಕಾರಿಗಳು ರೈತರ ವಿರುದ್ಧ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಶೋಚನೀಯ ಸಂಗತಿ. ಸರಿಯಾದ ಬೆಲೆ ನೀಡದೇ ನಮ್ಮ ಭೂಮಿಯನ್ನು ಮಾರಾಟ ಮಾಡುವುದಿಲ್ಲ ಎಂದರು . ಸಾಕಷ್ಟು ಬಾರಿ ಬೆಂಗಳೂರು ಕೆ ಐ ಎ ಡಿ ಬಿ ಕಚೇರಿಗೆ ದಾಖಲೆಗಳೊಂದಿಗೆ ಪರಿಹಾರದ ಹಣವನ್ನು ಪಡೆಯಲು ಮನವಿ ಮಾಡಿಕೊಂಡಿದ್ದರೂ ಸಹ ಅಧಿಕಾರಿಗಳ ವಿಳಂಬ ಧೋರಣೆ ತೋರುತ್ತಿದ್ದಾರೆ. ರೈತರಿಗಾಗುತ್ತಿರುವ ನಷ್ಟದ ಬಗ್ಗೆ ಯೋಚಿಸದ ಅಧಿಕಾರಿಗಳು ರೈತರಿಗೆ ಇಲ್ಲ ಸಲ್ಲದ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ಕೇಳುತ್ತಿದ್ದಾರೆ. ಭೂ ಸ್ವಾಧೀನಕ್ಕೆ ಒಳಪಟ್ಟ ಜಾಮೀನುಗಳ ಮಾರುಕಟ್ಟೆ ಹೊರತುಪಡಿಸಿ ವಾಣಿಜ್ಯೇತರ ಉದ್ದೇಶಕ್ಕಾಗಿ ಒಂದು ಗುಂಟೆ ಜಮೀನು 30 ರಿಂದ 40 ಲಕ್ಷದ ವರೆಗೂ ಸಹ ಮಾರಾಟವಾಗುತ್ತಿದ್ದು ಸದರಿ ಗ್ರಾಮಗಳ ಜಮೀನಿಗೆ ಸರಿಯಾದ ಬೆಲೆ ನೀಡಬೇಕೆಂದು ಮನವಿ ಮಾಡಿದರು .

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಾಗರಾಜು, ಮಂಜುನಾಥ್, ನರಸಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *