ಗ್ಯಾರಂಟಿಗಳ ಬಗ್ಗೆ ಷರತ್ತುಗಳನ್ನು ವಿಧಿಸಿರುವ ರಾಜ್ಯ ಕಾಂಗ್ರೆಸ್ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಕಲಿ ಗ್ಯಾರಂಟಿಗಳ ಮೂಲಕ ಜನರಿಗೆ ಟೋಪಿ ಹಾಕಲಾಗಿದೆ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಷರತ್ತು ಸರಕಾರ ಮತ್ತು ಕಂಡಿಷನ್ಸ್ ಕಾಂಗ್ರೆಸ್ ಎಂದು ಮೂದಲಿಸಿದ್ದಾರೆ.
‘ಷರತ್ತುಸಹಿತ’ವಾಗಿ ಘೋಷಣೆ ಮಾಡಲಾಗಿರುವ 5 ಗ್ಯಾರಂಟಿಗಳ ಬಗ್ಗೆ ಈಗಾಗಲೇ ಜನರಿಗೆ ಒಂದು ನಿರ್ದಿಷ್ಟ ಅಭಿಪ್ರಾಯ ಬಂದಿದೆ. ಹರುಷದ ಕೂಳಿಗೆ ಆಸೆಪಟ್ಟು ವರುಷದ ಕೂಳು ಕಳೆದುಕೊಂಡರು ಎನ್ನುವ ಮಾತನ್ನು ಹೇಳಲಾರೆ. ಆದರೆ, ರಾಜ್ಯದ ಜನತೆಗೆ ಇದರ ಒಳಮರ್ಮ ಅರ್ಥವಾಗಲು ಬಹಳ ದಿನ ಬೇಕಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಗ್ಯಾರಂಟಿಗಳ ಬಗ್ಗೆ ಚರ್ಚೆ ಅಥವಾ ವಿಮರ್ಶೆಗೆ ನನಗೆ ಆತುರವಿಲ್ಲ, ನನಗೆ ತಾಳ್ಮೆ ಇದೆ. ಆದರೆ, ಮತ ಗಳಿಕೆಗೆ ಮುನ್ನ ಕೊಟ್ಟ ಭರವಸೆಗಳು ಅಧಿಕಾರಕ್ಕೆ ಬಂದ ಮೇಲೆ ‘ಷರತ್ತು ಸಹಿತ’ ಎಂದಾಗಿದ್ದರ ಬಗ್ಗೆ ನನಗೆ ನೋವಿದೆ.
ಜನರ ಸಹನೆ ಎನ್ನುವುದು ಖಂಡಿತ ಕಟ್ಟೆಯೊಡೆಯುತ್ತದೆ, ನಾನು ಕಾಯುತ್ತೇನೆ ಹಾಗೂ ಅವರ ಜತೆ ನಿಲ್ಲುತ್ತೇನೆ ಎಂದು ಅವರು ಹೇಳಿದ್ದಾರೆ.
ಹಾಲಿ ಮುಖ್ಯಮಂತ್ರಿಗಳು 2013-18ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ 2.75 ಲಕ್ಷದಷ್ಟು ಸರಕಾರಿ ಹುದ್ದೆಗಳನ್ನು ಖಾಲಿ ಇಟ್ಟಿದ್ದರು. ಆ ಖಾಲಿ ಹುದ್ದೆಗಳನ್ನು ತುಂಬಲು ಅವರು ಆ ಸಂದರ್ಭದಲ್ಲಿ ಎಳ್ಳಷ್ಟೂ ಪ್ರಯತ್ನ ಮಾಡಲಿಲ್ಲ. ಅಂದು ಕಾಣದ ನಿರುದ್ಯೋಗ ಈ ಚುನಾವಣೆಗೆ ಮುನ್ನ ಕಂಡಿತು, ಮತ ಫಸಲು ತಂದುಕೊಟ್ಟಿತು. ಮುಗ್ಧ ಯುವಜನರಿಗೆ 3,000 ಮಾಸಿಕ ಭತ್ಯೆ ಎಂದು ಗ್ಯಾರಂಟಿ ಕೊಟ್ಟಾಗ ಷರತ್ತಿನ ಬಗ್ಗೆ ನಾಲಿಗೆ ಮೌನವಾಗಿತ್ತು! ಅದೇ ಯುವಜನರ ವೋಟಿನಿಂದ ಪಟ್ಟಕ್ಕೇರಿದ ಮೇಲೆ ‘ಪ್ರಸಕ್ತ ಸಾಲಿಗೆ ಮಾತ್ರ’ ಎನ್ನುವ ಷರತ್ತು ವಿಧಿಸಿ 24 ತಿಂಗಳಷ್ಟೇ ಭತ್ಯೆ ಎಂದಿದ್ದು ನನ್ನನ್ನು ಬಾಧಿಸಿದೆ. ಯುವಕರಿಗೆ ಟೋಪಿ ಹಾಕಿದ ‘ನಕಲಿ ಗ್ಯಾರಂಟಿ’ಗೆ ಶಾಸ್ತಿ ದೂರವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ತುಟಿಗೆ ತುಪ್ಪ ಸವರುವವರನ್ನು ನೋಡಿದ್ದೆ. ಹಣೆಗೆ ತುಪ್ಪ ಸವರುವವರನ್ನು ನೋಡಿರಲಿಲ್ಲ. ಗ್ಯಾರಂಟಿ ಕಾರ್ಡಿಗೆ ಸಹಿ ಹಾಕಿ ಕೊಟ್ಟು ಯಾಮಾರಿಸಿದ ಮಹಾನುಭಾವರು ಹಣೆಗೆ ತುಪ್ಪ ಸವರಿ ನಯಗಾರಿಕೆಯಿಂದ ಭಂಡತನ ಮೆರೆದು ಯುವಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಯುವಜನರೂ ತಮ್ಮ ಶಕ್ತಿಯನ್ನು ತೋರಿಸಲಿದ್ದಾರೆ, ನಾನು ಕಾಯುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಈಗ ಒಂದು ಗ್ಯಾರಂಟಿ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಉಳಿದವುಗಳ ಬಗ್ಗೆ ಕ್ರಮೇಣ ಮಾತನಾಡುತ್ತೇನೆ. ಜನರ ತಲೆ ಮೇಲೆ ಐದು ಮಕ್ಮಲ್ ಟೋಪಿಗಳನ್ನು ಹಾಕಿದ ಈ ‘ಷರತ್ತು ಸರಕಾರ’ವನ್ನು ಆ ಜನರು ಕ್ಷಮಿಸುವುದಿಲ್ಲ. ಕಂಡಿಷನ್ಸ್ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಿಯೇ ಕಲಿಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…