ಶ್ವಾಸಕೋಶದಲ್ಲಿ ರಕ್ತಸ್ರಾವ, ಸಾವಿನ ದವಡೆ ತಲುಪಿದ್ದ ವ್ಯಕ್ತಿಗೆ ಯಶಸ್ವಿ ಚಿಕಿತ್ಸೆ

ಬಳ್ಳಾರಿ: ತೀವ್ರ ಉಸಿರಾಟದ ಸಮಸ್ಯೆ ಹಾಗೂ ಹೃದಯದ ಅಪಧಮನಿಯ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ 38 ವರ್ಷದ ಬಳ್ಳಾರಿ ಮೂಲದ ವ್ಯಕ್ತಿಗೆ ಕನ್ನಿಂಗ್‌ ಹ್ಯಾಮ್‌ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡುವ ಮೂಲಕ ಸಾವಿನ ದವಡೆ ತಲುಪಿದ್ದ ವ್ಯಕ್ತಿಗೆ ಮರುಜೀವ ನೀಡಲಾಗಿದೆ.

ಫೋರ್ಟಿಸ್ ಆಸ್ಪತ್ರೆಯ ಇಂಟರ್ನಲ್‌ ಮೆಡಿಸನ್‌ ಕನ್ಸಲ್ಟೆಂಟ್‌, ಡಾ. ನಾಸಿರುದ್ದೀನ್ ಜಿ. ನೇತೃತ್ವದ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡಿಸಿದೆ. ಈ ಕುರಿತು ಮಾತನಾಡಿದ, ಡಾ. ನಾಸಿರುದ್ದೀನ್ ಜಿ, ಚೈತನ್ಯ ಎಂಬ 38 ವರ್ಷದ ವ್ಯಕ್ತಿಗೆ ಈ ಮೊದಲು ಹೃದಯಾಘಾತವಾಗಿತ್ತು. ಚಿಕಿತ್ಸೆ ವೇಳೆ ಅವರು ಪಡೆದಿದ್ದ ಥ್ರಂಬೋಲಿಟಿಕ್ ಚುಚ್ಚುಮದ್ದು ಅವರ ಶ್ವಾಸಕೋಶದಲ್ಲಿ ರಕ್ತಸ್ರಾವಕ್ಕೆ ಕಾರಣವಾಗಿದೆ.

ಪ್ರಮುಖವಾಗಿ “ಪ್ರಸರಣ ಅಲ್ವಿಯೋಲಾರ್ ರಕ್ತಸ್ರಾವ” ಆಗತೊಡಗಿತ್ತು. ರಕ್ತಹೆಪ್ಪುಗಟ್ಟುವಿಕೆಯಿಂದಾಗಿ ಅವರ ಶ್ವಾಸಕೋಶ ಸಂಪೂರ್ಣ ಹಾಳಾಗಿತ್ತು. ಕೆಮ್ಮುವಾಗ ಮೂಗಿನಿಂದ ರಕ್ತಸ್ರಾವ, ಗುದನಾಳದಲ್ಲಿ ರಕ್ತಸ್ರಾವ ಸೇರಿದಂತೆ ಹಲವು ಅಂಗಾಂಗಳಲ್ಲಿ ರಕ್ತಸ್ರಾವ ಆಗತೊಡಗಿತ್ತು. ಇದರಿಂದ ರೋಗಿಯ ಹಿಮೋಗ್ಲೋಬಿನ್‌ ಮಟ್ಟ ಸಂಪೂರ್ಣವಾಗಿ ಕುಸಿಯತೊಡಗಿತ್ತು. ಈ ಎಲ್ಲಾ ತೊಂದರೆಯಿಂದ ಅವರು ಸಾವು ಬದುಕಿನ ನಡುವೆ ಹೋರಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬಳ್ಳಾರಿಯ ಆಸ್ಪತ್ರೆಗೆ ಕರೆದೊಯ್ದರೂ, ರೋಗಿಯು ಈಗಾಗಲೇ ಚಿಂತಾಜನ ಸ್ಥಿತಿಗೆ ತಲುಪಿದ್ದ ಕಾರಣ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದರು. ಬಳಿಕ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಇವರ ಪರಿಸ್ಥಿತಿಯನ್ನು ಅರಿತು, ಇವರ ಬದುಕುವಿಕೆಯ ಪ್ರಮಾಣವೂ ಕಡಿಮೆ ಇತ್ತು. ಈ ಎಲ್ಲಾ ಸವಾಲುಗಳ ಮಧ್ಯೆ ರೋಗಿಯನ್ನು ಬದುಕಿಸಲೇ ಬೇಕೆಂದು ನಮ್ಮ ವೈದ್ಯ ತಂಡ, ಆಕ್ರಮಣಕಾರಿಯಲ್ಲದ, ಆಮ್ಲಜನಕ ನೀಡುವ ಜೊತೆಗೆ ಸೂಕ್ತ ಚಿಕಿತ್ಸೆ ನೀಡಲಾಯಿತು.

ರಕ್ತದ ವರ್ಗಾವಣೆ ಸೇರಿದಂತೆ ಅವರ ದೇಹದಲ್ಲಿ ಆಂಟಿಬಯೋಟಿಕ್‌ ಹೆಚ್ಚಿಸುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಿದೆವು. ನಮ್ಮೆಲ್ಲಾ ಪ್ರಯತ್ನದ ಬಳಿಕ ಕೇವಲ 10 ದಿನಗಳಲ್ಲಿಯೇ ರೋಗಿಯೂ ಸಂಪೂರ್ಣ ಚೇತರಿಸಿಕೊಂಡರು ಎಂದು ವಿವರಿಸಿದರು.

ಫೋರ್ಟಿಸ್‌ ಆಸ್ಪತ್ರೆ ಫೆಸಿಲಿಟಿ ಡೈರೆಕ್ಟರ್‌ ಚಂದ್ರಶೇಖರ್ ಆರ್. ಮಾತನಾಡಿ, ಶ್ವಾಸಕೋಶದಲ್ಲಿ ರಕ್ತಸ್ತ್ರಾವವಾಗಿ, ಸಾವಿನ ದವಡೆ ತಲುಪಿದ್ದ ವ್ಯಕ್ತಿಗೂ ಸಹ ಜೀವ ಉಳಿಸುವ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆಯಲ್ಲಿ ನೀಡಲಾಗಿದೆ. ಅಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಿಭಾಯಿಸುವಲ್ಲಿ ಮತ್ತು ಯಶಸ್ವಿ ಫಲಿತಾಂಶಗಳನ್ನು ಸಾಧಿಸುವಲ್ಲಿ ನಮ್ಮ ತಂಡದ ಪರಿಣತಿಯ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹೇಳಿದರು.

Leave a Reply

Your email address will not be published. Required fields are marked *