ಇಂದಿನ ಆಧುನಿಕ ಯುಗಕ್ಕೆ ತಕ್ಕಂತೆ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಹೊಸ ಸ್ವರೂಪ ಹಾಗೂ ರಂಗ ಸಜ್ಜಿಕೆಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಂ.ಎಸ್.ಗುಣಶೀಲನ್ ಹೇಳಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ, ತಾಲೂಕು ಕಲಾವಿದರ ಸಂಘ, ನಗರಸಭೆ, ಕನ್ನಡ ಜಾಗೃತ ಪರಿಷತ್ತು ಹಾಗೂ ಅನಿಕೇತನ ಟ್ರಸ್ಟ್ ಸಹಯೋಗದೊಂದಿಗೆ ನಡೆದ ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಅಸಂಖ್ಯಾತ ಕಲಾವಿದರಿದ್ದು, ರಂಗ ಕಲೆಗಳಲ್ಲಿ ನಿರತರಾಗಿದ್ದಾರೆ. ಈಗ ಹವ್ಯಾಸಿ ರಂಗಭೂಮಿ ಹೊಸ ಆಯಾಮಗಳ ಮೂಲಕ ಪ್ರೇಕ್ಷಕರಿಗೆ ತಲುಪುತ್ತಿರುವುದು ಉತ್ತಮ ಬೆಳವಣಿಗೆ. ದೊಡ್ಡಬಳ್ಳಾಪುರದಲ್ಲಿ ನಟಗಂಗೋತ್ರಿ ಮೊದಲಾದ ನಾಟಕ ತಂಡಗಳು ಸಾಮಾಜಿಕ, ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮನ್ನಣೆ ಗಳಿಸಿದ್ದವು.
ಈ ತಂಡದಲ್ಲಿ ಅಭಿನಯಿಸಿದ ಬಹಳಷ್ಟು ಮಂದಿ ಉತ್ತಮ ಕಲಾವಿದರಾಗಿ ರೂಪುಗೊಂಡಿದ್ದಾರೆ. ನಾಟಕ ಕಲೆಗೆ ಇಲ್ಲಿನ ಸಹೃದಯರು ನೀಡುತ್ತಿರುವ ಉತ್ತೇಜನ ಸದಾ ಸ್ಮರಣೀಯವಾಗಿದೆ. ರಂಗಕಲೆಗೆ ಹೆಚ್ಚಿನ ಉತ್ತೇಜನ ನೀಡುವಲ್ಲಿ ನಗರದ ಡಾ.ರಾಜ್‍ಕುಮಾರ್ ಕಲಾಭವನವನ್ನು ಆಧುನೀಕರಣಗೊಳಿಸಬೇಕಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಮಾತನಾಡಿ, ಮಾಧ್ಯಮಗಳ ಪ್ರಭಾವದಿಂದಾಗಿ ಇಂದು ರಂಗಕಲೆ ನೇಪಥ್ಯಕ್ಕೆ ಸರಿಯುತ್ತಿರುವ ಇಂದಿನ ಸಂದರ್ಭದಲ್ಲಿ ನಾಟಕ ಕಲೆಯನ್ನು ಉತ್ತೇಜಿಸಲು ನಾಟಕೋತ್ಸವ ಕಾರ್ಯಕ್ರಮಗಳು ಇಂಬು ನೀಡುತ್ತಿವೆ ಎಂದರು.
ಕಾರ್ಯಕ್ರಮದ ಅಂಗವಾಗಿ, ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದಿಂದ ರಂಗ ಗೀತೆಗಳು ಹಾಗೂ ಗೀತ ಗಾಯನ, ವಿ.ವೆಂಕಟೇಶ್ ಅವರಿಂದ ಮಾತನಾಡುವ ಗೊಂಬೆ ಪ್ರದರ್ಶನ,ಶ್ರೀ ರಾಘವೇಂದ್ರ ಸಾಂಸ್ಕøತಿಕ ಯೋಗ ಕೇಂದ್ರ, ನಟಗಂಗೋತ್ರಿ ವತಿಯಿಂದ ಸಿನಿ ಮಹಾತ್ಮೆ ಹಾಸ್ಯ ಸಾಮಾಜಿಕ ನಾಟಕ ಪ್ರದರ್ಶನ ಹಾಗೂ ರಾತ್ರಿ ಶ್ರೀ ಹುತ್ತದ ಮಹಾಗಣಪತಿ ಕೃಪಾ ಪೆÇೀಷಿತ ನಾಟಕ ಮಂಡಲಿ (ಭುವನೇಶ್ವರಿ ನಗರ) ವತಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ಸಮಾರಂಭದಲ್ಲಿ ತಾಲೂಕಿನ ಹಿರಿಯ ಕಲಾವಿದರಾದ ನಾರಾಯಣಪ್ಪ ಹಳೇಕೋಟೆ, ಎನ್.ರಾಮಾಂಜಿನಪ್ಪ, ಬಿ.ಚಂದ್ರಶೇಖರ್, ಜಿ.ಎ.ನಂಜೇಗೌಡ, ರಾಮಣ್ಣ ಕಾರನಾಳ, ಓಬಮ್ಮ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಬಿಜೆಪಿ.ಜಿಲ್ಲಾ ಫಲಾನುಭವಿಗಳ ಪ್ರಕೋಷ್ಟ ಸಂಚಾಲಕರಾದ ಧಿರಜ್ ಮುನಿರಾಜು, ನಗರಸಭಾ ಸದಸ್ಯರಾದ ಎಸ್.ವತ್ಸಲಾ ಮೊದಲಾದವರು ಭಾಗವಹಿಸಿದ್ದರು.