ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಇತಿಹಾಸ, ಮಹಿಮೆ ನಿಮಗೆಷ್ಟು ಗೊತ್ತು….? ದೇವಾಲಯದ ಪ್ರಧಾನ ಅರ್ಚಕ ಸುಬ್ಬುಕೃಷ್ಣ ಶಾಸ್ತ್ರಿ ಕ್ಷೇತ್ರದ ಮಹಿಮೆ ಬಗ್ಗೆ ಏನು ಹೇಳುತ್ತಾರೆ…? ಇಲ್ಲಿದೆ ಮಾಹಿತಿ ಓದಿ……

ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1946ಕ್ಕೆ ಸರಿಯಾದ ಶ್ರೀ ಕ್ರೋಧಿನಾಮ ಸಂವತ್ಸರದ ಪುಷ್ಯ ಶುದ್ಧ ಷಷ್ಠಿ ಜ. 5ರ ಭಾನುವಾರ ಮಧ್ಯಾಹ್ನ 12-10 ರಿಂದ 12-20 ಗಂಟೆಗೆ ಸಲ್ಲುವ ಶುಭ (ಮೀನ) ಲಗ್ನದಲ್ಲಿ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಸಹ ಬ್ರಹ್ಮರಥೋತ್ಸವವನ್ನು ಅದ್ಧೂರಿಯಾಗಿ, ಯಶಸ್ವಿಯಾಗಿ, ಶ್ರದ್ಧಾಭಕ್ತಿಯಿಂದ ನೆರವೇರಿಸಲು ಸಕಲ ಸಿದ್ಧತೆ ನಡೆಸಲಾಗಿದೆ.

ಬ್ರಹ್ಮರಥೋತ್ಸವಕ್ಕಿಂತ ಮೊದಲು ದಕ್ಷಿಣ ಭಾರತದಲ್ಲೇ ಪ್ರಸಿದ್ಧ ಪಡೆದಿರುವ ಭಾರೀ ದನಗಳ ಜಾತ್ರೆಯೂ ಸಹ ಬಹಳ‌ ವಿಜೃಂಭಣೆಯಿಂದ ನಡೆಯಿತು. ದನಗಳ ಜಾತ್ರೆ ನಂತರ ಈಗ ಬ್ರಹ್ಮರಥೋತ್ಸವ ಸಡಗರ ಘಾಟಿ ಕ್ಷೇತ್ರದಲ್ಲಿ ಮನೆ ಮಾಡಿದೆ.

ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯ ಇತಿಹಾಸ, ಮಹಿಮೆ

ಪ್ರತಿಯೊಂದಕ್ಕೂ ಇತಿಹಾಸ ಇರುತ್ತದೆ. ಅದೇರೀತಿ ಪುಣ್ಯಸ್ಥಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೂ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಈ ಬಗ್ಗೆ ದೇವಾಲಯದ ಪ್ರಧಾನ ಅರ್ಚಕರಾದ ಸುಬ್ಬುಕೃಷ್ಣ ಶಾಸ್ತ್ರಿ ಅವರು ಪಬ್ಲಿಕ್ ಮಿರ್ಚಿಗೆ ವಿವರಿಸಿದ್ದಾರೆ. ಅದು ಹೀಗಿದೆ… ಓದಿ….

ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲೂಕು, ತೂಬಗೆರೆ ಹೋಬಳಿ, ಎಸ್.ಎಸ್ ಘಾಟಿ ಪೋಸ್ಟ್, ಮೇಲಿನಜೂಗಾನಹಳ್ಳಿ(ಎಸ್.ಎಸ್.ಘಾಟಿ) ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಾಲಯವಿದೆ.

ಈ ದೇವಾಲಯವು ಸುಮಾರು 700 ರಿಂದ 800 ವರ್ಷಗಳ ಹಳೇಯದಾಗಿದೆ. ಗರ್ಭಗುಡಿಯಲ್ಲಿ ಒಂದೇ‌ ಕಲ್ಲಿನಲ್ಲಿ ಪೂರ್ವಕ್ಕೆ ಏಳು ಹೆಡೆ ಸರ್ಪಾಕಾರದಲ್ಲಿ ಸುಬ್ರಹ್ಮಣ್ಯ ಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ ಬೆನ್ನಿನ ಮೇಲೆ ಪಶ್ಚಿಮಕ್ಕೆ ಲಕ್ಷ್ಮಿ ನರಸಿಂಹಸ್ವಾಮಿ ದೇವರು ಇರುವುದನ್ನು ನಾವು ಕಾಣಬಹುದು.‌ ಒಂದೇ ಶಿಲೆಯಲ್ಲಿ ಈ ಎರಡು ದೇವರು ತಾನಾಗಿಯೇ ಭೂಮಿಯಿಂದ ಉದ್ಭವವಾಗಿದೆ ಎಂದು ನಂಬಲಾಗಿದೆ.

ಸುಬ್ರಹ್ಮಣ್ಣೇಶ್ವರ ಸ್ವಾಮಿ ಬೆನ್ನಿನ ಮೇಲೆ ಪಶ್ಚಿಮಕ್ಕೆ ಇರುವ ಲಕ್ಷ್ಮಿ ನರಸಿಂಹಸ್ವಾಮಿ ದೇವರನ್ನು ಕನ್ನಡಿ ಮೂಲಕ ದರ್ಶನ ಪಡೆಯಬುದಾಗಿದೆ.

ಸುಬ್ರಹ್ಮಣ್ಯ ಸ್ವಾಮಿ ತಾರಕಾಸುರ ಎಂಬ ರಾಕ್ಷಸನ  ಸಂಹಾರಕ್ಕಾಗಿ ಜನನವಾಗುತ್ತಾನೆ. ಅದರಂತೆ ತಾರಕಾಸುರ ರಾಕ್ಷಸನನ್ನು ಸುಬ್ರಹ್ಮಣ್ಯ ಸ್ವಾಮಿ ಸಂಹಾರ ಮಾಡುತ್ತಾನೆ. ಸಂಹಾರ ಆದ ನಂತರ ವಿಜಯಾತ್ರೆ ಮಾಡಿಕೊಂಡು ಬರಬೇಕಾದರೆ ನಾಲ್ಕು ಮುಖವುಳ್ಳ ಬ್ರಹ್ಮ ಅಡ್ಡಬರುತ್ತಾನೆ. ಆಗ ನೀನು ಯಾರು ಎಂದು ಬ್ರಹ್ಮ ದೇವರಿಗೆ ಸುಬ್ರಹ್ಮಣ್ಯ ಸ್ವಾಮಿ ಪ್ರಶ್ನೆ ಮಾಡುತ್ತಾನೆ. ಆಗ ಬ್ರಹ್ಮ ದೇವರು ಉತ್ತರಿಸುತ್ತಾ…. ನಾನು ಸೃಷ್ಟಿಕರ್ತ ಎಂದು ಹೇಳುತ್ತಾನೆ. ಆಗ ಸುಬ್ರಹ್ಮಣ್ಯ ನೀನು ಸೃಷ್ಟಿಕರ್ತನಾದರೆ ಓಂಕಾರ ಅರ್ಥವನ್ನು ಹೇಳು ಎಂದು ಬ್ರಹ್ಮದೇವರಿಗೆ ಪ್ರಶ್ನೆ ಮಾಡುತ್ತಾನೆ. ಬ್ರಹ್ಮ ಓಂಕಾರದ ಅರ್ಥ ಹೇಳುವುದಿಲ್ಲ. ಆಗ ಸುಬ್ರಹ್ಮಣ್ಯ ದೇವರಿಗೆ ಕೋಪ ಬಂದು ಬ್ರಹ್ಮನನ್ನು ಬಂಧನದಲ್ಲಿಡುತ್ತಾನೆ. ಆಗ ಜಗತ್ತು ಸೃಷ್ಟಿ ಆಗೋದು ಇದ್ದಕ್ಕಿದ್ದಹಾಗೆ ನಿಂತು ಹೋಗುತ್ತದೆ. ಈ ಹಿನ್ನೆಲೆ ಕೂಡಲೇ ಶಿವಪಾರ್ವತಿ ಪ್ರತ್ಯಕ್ಷವಾಗಿ ಬ್ರಹ್ಮದೇವರನ್ನು ಬಂಧನದಿಂದ ವಿಮುಕ್ತಿಗೊಳಿಸುತ್ತಾರೆ. ಸುಬ್ರಹ್ಮಣ್ಯನಿಗೆ ತನ್ನ ತಪ್ಪು ಅರಿವಾಗಿ, ತನ್ನ ಅಪರಾಧವನ್ನು ಕ್ಷಮಿಸಿ ಎಂದು ಪ್ರಾರ್ಥನೆಗೆ ಕುಳಿತುಕೊಂಡು ಭುಜಂಗ ಸ್ತೋತ್ರ ಪಾರಾಯಣ ಮಾಡುತ್ತಾನೆ. ನಾನು ಮಾಡಿದ ತಪ್ಪಿಗೆ ಏನಾದರು ಶಾಪ ಕೊಡು ಎಂದು ಬ್ರಹ್ಮನಲ್ಲಿ ಬೇಡಿಕೊಳ್ಳುತ್ತಾನೆ. ಆದರೆ ಈ ಬೇಡಿಕೆಯನ್ನು ಬ್ರಹ್ಮ ಒಪ್ಪುವುದಿಲ್ಲ. ಏಕೆಂದರೆ, ನೀನು ಪಾರ್ವತಿ ಪರಮೇಶ್ವರ ಮಗ, ನಿನಗೆ ಶಾಪ‌ಕೊಡುವುದಕ್ಕೆ ಆಗೋದಿಲ್ಲ ಎಂದು ಬ್ರಹ್ಮ ಹೇಳುತ್ತಾನೆ. ಆಗ ಸುಬ್ರಹ್ಮಣ್ಯ ಸ್ವಾಮಿ‌ ಸ್ವಯಂ ಶಾಪವನ್ನು ಹಾಕಿಕೊಳ್ಳುತ್ತಾನೆ. ಆ ಶಾಪ ಎಂಥಹದ್ದು ಎಂದರೆ ತನ್ನ ಶರೀರವು ಸರ್ಪದ ರೀತಿ ಆಗಲಿ ಎಂದು ಶಾಪ ಹಾಕಿಕೊಳ್ಳುತ್ತಾನೆ. ಆಗ ಸುಬ್ರಹ್ಮಣ್ಯನ ಶರೀರ ಸರ್ಪಾಕಾರವಾಗುತ್ತದೆ.‌ಈಗಿರುವ ಗರ್ಭಗುಡಿ ಸ್ಥಳದಲ್ಲಿ ಧ್ಯಾನವನ್ನು ಮಾಡುತ್ತಿರುತ್ತಾನೆ.

ಘಾಟಿ ಸಮೀಪದ ಮಾಕಳಿ ದುರ್ಗ ಎಂಬ ಊರು ಇದೆ ಅಲ್ಲಿ ಗಾರ್ಗಿ ಮಹರ್ಷಿ, ಅತ್ರಿ ಮಹರ್ಷಿಗಳು ತಪಸ್ಸು ಮಾಡುತ್ತಿರುತ್ತಾರೆ. ಘಟಿಕಾಸುರ ಎಂಬ ರಾಕ್ಷಸನು ಈ ಮಹರ್ಷಿಗಳ ತಪಸ್ಸನ್ನು ಭಂಗ ಉಂಟು ಮಾಡುತ್ತಿರುತ್ತಾನೆ.

ಸುಬ್ರಹ್ಮಣ್ಯ ಸ್ವಾಮಿ ಮಾಕಳಿ ಸಮೀಪವೇ ತಪಸ್ಸು ಮಾಡುತ್ತಿರುವುದು ಗಾರ್ಗಿ ಹಾಗೂ ಅತ್ರಿ ಮಹರ್ಷಿಗಳಿಗೆ ಗೊತ್ತಾಗುತ್ತದೆ. ಘಟಿಕಾಸುರನ ತೊಂದರೆ ತಾಳಲಾರದೇ, ರಾಕ್ಷಸನ ಉಪಟಳ, ಸದ್ದು ಅಡಗಿಸಲು ಸುಬ್ರಹ್ಮಣ್ಯಸ್ವಾಮಿಗಾಗಿ ಕಠಿಣ ತಪಸ್ಸು ಮಾಡುತ್ತಾರೆ. ಆಗ ಸುಬ್ರಹ್ಮಣ್ಯ ಪ್ರತ್ಯಕ್ಷಗೊಂಡು ಮಹರ್ಷಿಗಳ ಅಹವಾಲನ್ನು ಸ್ವೀಕರಿಸಿ ಘಟಿಕಾಸುರನನ್ನು ಸಂಹಾರ ಮಾಡುತ್ತಾನೆ. ಈ ಹಿನ್ನೆಲೆ ಘಟಿಕಾಸುರ ಸಂಹಾರವಾದ ಸ್ಥಳವನ್ನು ಈಗ ಘಾಟಿ ಎಂದು ಕರೆಯಲಾಗುತ್ತಿದೆ.

ಸುಬ್ರಹ್ಮಣ್ಯ ತಪಸ್ಸು ಮಾಡಿದ ಸ್ಥಳದಲ್ಲಿ ವೀಳ್ಯೆದೆಲೆ ಮಾರುವವನು ವಿಶ್ರಾಂತಿ ಪಡೆಯಲು ಕುಳಿತುಕೊಳ್ಳುತ್ತಾನೆ. ಆ ವ್ಯಕ್ತಿ ನಿದ್ರೆಯಲ್ಲಿ ಇರಬೇಕಾದರೆ ಕನಸಿನಲ್ಲಿ ಎದ್ದೇಳು ಎದ್ದೇಳು ಎಂಬ ಶಬ್ಧ ಕೇಳಿಬರುತ್ತದೆ. ಎದ್ದು ನೋಡಿದಾಗ ದಟ್ಟ ಅರಣ್ಯ ಬಿಟ್ಟರೆ ಏನೂ ಕಾಣುವುದಿಲ್ಲ. ಏನೂ ಇಲ್ಲ ಎಂದು ಮತ್ತೆ ಮಲಗುತ್ತಾನೆ ಆ ವ್ಯಕ್ತಿ. ಪುನಃ ಎದ್ದೇಳು,‌ ಎದ್ದೇಳು ಎಂದು ಶಬ್ಧ ಕೇಳಿಸುತ್ತದೆ. ಆಗ ಅಲ್ಲಿ ಒಬ್ಬ ಬ್ರಾಹ್ಮಣ ಬರುತ್ತಾನೆ. ಈ ವಿಚಾರವನ್ನು ಬ್ರಾಹ್ಮಣ ಬಳಿ ಹೇಳುತ್ತಾನೆ. ಆಗ ಸುಬ್ರಹ್ಮಣ್ಯನು ಪ್ರತ್ಯಕ್ಷಗೊಂಡು ನೀವು ಬಳ್ಳಾರಿ ಜಿಲ್ಲೆಯ ಸಂಡೂರಿನ ಮಹರಾಜ ಯಶ್ವಂತ್ ಪುರ ರಾವ್ ಗೋರ್ಪಡೆ ಬಳಿ ಹೋಗಿ ಇಲ್ಲಿ ಒಂದು ಗುಡಿ ಕಟ್ಟಲು ಹೇಳಿ ಎಂದು ಹೇಳಿ ಕಳಿಸುತ್ತಾನೆ. ಆಗ ಬ್ರಾಹ್ಮಣ ಹಾಗೂ ವೀಳ್ಯೆದೆಲೆ ಮಾರುವವನು ಮಹಾರಾಜರ ಬಳಿ ಹೋಗಿ ಈ ವಿಚಾರ ಮುಟ್ಟಿಸುತ್ತಾರೆ. ಆಗ ಮಹಾರಾಜರು ಇವರಿಬ್ಬರ ಮಾತು ನಂಬುವುದಿಲ್ಲ. ಈ ಹಿನ್ನೆಲೆ ಮಹರಾಜರ ಕನಸಿನಲ್ಲೂ ಸುಬ್ರಹ್ಮಣ್ಯ ಬಂದು ನಾನೇ ಅವರಿಬ್ಬರನ್ನು ಕಳುಹಿಸಿಕೊಟ್ಟಿದ್ದು, ಅವರು ಯಾವ ಸ್ಥಳ ತೋರಿಸುತ್ತಾರೋ ಆ ಸ್ಥಳದಲ್ಲಿ ಬಂದು ಗುಡಿ ಗೋಪುರವನ್ನು ಕಟ್ಟಿಸಿಕೊಡಬೇಕು ಎಂದು ಹೇಳುತ್ತಾನೆ. ಆಗ ಸಂಡೂರಿನ ಮಹರಾಜರು ಘಾಟಿಗೆ ಬಂದು, ಉದ್ಭವ ಮೂರ್ತಿಯನ್ನು ಹೊರತೆಗೆದು ಗುಡಿ‌ಗೋಪುರವನ್ನು ಕಟ್ಟಿಸುತ್ತಾನೆ.

ಘಾಟಿ ಸುಬ್ರಹ್ಮಣ್ಯನು ಸರ್ಪ ವೇಷದಲ್ಲಿ ಕಠಿಣ ತಪಸ್ಸು ಮಾಡಿದ ಸ್ಥಳವಾಗಿ ಈಗ ಘಾಟಿ ಕ್ಷೇತ್ರವಾಗಿದೆ. ಆದ್ದರಿಂದ ಸುಬ್ರಹ್ಮಣ್ಯ ದೇವರ ನಾಗಾವತಾರವನ್ನು ಹೆಚ್ಚಾಗಿ ಇಲ್ಲಿ ಕಾಣಬಹುದು.

ಸುಬ್ರಮಣ್ಯೇಶ್ವರ ಸ್ವಾಮಿ ಸರ್ಪಕಾಲದಲ್ಲಿ ಇರುವುದರಿಂದ ಸುಬ್ರಮಣ್ಯೇಶ್ವರ ಸ್ವಾಮಿ ತನ್ನ ಸೋದರ ಮಾವ ಆದ ಮಹಾವಿಷ್ಣುವನ್ನು ಕುರಿತು ತಪಸ್ಸು ಮಾಡಿದಕ್ಕೆ ಬೆನ್ನಿನ ಮೇಲೆ ಲಕ್ಷ್ಮಿ ನರಸಿಂಹ ಸ್ವಾಮಿ ಅವತಾರದಲ್ಲಿ ಇರುತ್ತಾನೆ. ಈ ಕ್ಷೇತ್ರದಲ್ಲಿ ಸರ್ಪ ಮತ್ತು ಗರುಡ ಪಕ್ಷಿಗೆ ಯಾವುದೇ ರೀತಿಯಾದಂತ ವೈರತ್ವ ಇರುವುದಿಲ್ಲ.

ಕರ್ನಾಟಕದಲ್ಲಿ ಒಟ್ಟು ಮೂರು ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಕುಕ್ಕೆ ಕ್ಷೇತ್ರವನ್ನು ಆದಿ ಸುಬ್ರಹ್ಮಣ್ಯ, ಘಾಟಿ ಕ್ಷೇತ್ರವನ್ನು ಮಧ್ಯ ಸುಬ್ರಹ್ಮಣ್ಯ, ನಾಗಲ ಮಡಿಕೆ ಕ್ಷೇತ್ರವನ್ನು ಅಂತ್ಯ ಸುಬ್ರಹ್ಮಣ್ಯವೆಂದು ಕರೆಯಲಾಗುತ್ತದೆ.

ದೇವಾಲಯದಲ್ಲಿ ಕುಜ ​​ದೋಷ, ನಾಗಪ್ರತಿಷ್ಠೆ, ಸರ್ಪ ದೋಷ ಮತ್ತು ನಿವಾರಣಾ ಪೂಜೆ, ನಾಗರ ಪಂಚಮಿ, ನರಸಿಂಹ‌ ಜಯಂತಿ ವಿಶೇಷವಾಗಿ ನಡೆಯುತ್ತದೆ.

ಮಕ್ಕಳಿಲ್ಲದ ದಂಪತಿಗಳು ಗರ್ಭ ಧರಿಸಲು ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂಬುದು ಭಕ್ತರ ದೃಢವಾದ ನಂಬಿಕೆಯಾಗಿದೆ.

ಈ ಕ್ಷೇತ್ರದಲ್ಲಿ ಚರ್ಮ ರೋಗಕ್ಕೆ ಸಂಬಂಧಪಟ್ಟ, ಮದುವೆಗೆ ಸಂಬಂಧಪಟ್ಟ, ಸಂತಾನಕ ಸಂಬಂಧಪಟ್ಟ ಹಾಗೆ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿದರೆ ಖಂಡಿತವಾಗಿ ಅವರ ಮನಸ್ಸಿನ ಸಂಕಲ್ಪ ನೆರವೇರುತ್ತದೆ ಎಂಬ ನಂಬಿಕೆ ಜನರಲ್ಲಿದೆ…

ಅದೇರೀತಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1946ಕ್ಕೆ ಸರಿಯಾದ ಶ್ರೀ ಕ್ರೋಧಿನಾಮ ಸಂವತ್ಸರದ ಪುಷ್ಯ ಶುದ್ಧ ಷಷ್ಠಿಯು ಶುಭ (ಮೀನ) ಲಗ್ನದಲ್ಲಿ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಜರುಗುತ್ತದೆ.

ಸ್ವಾಮಿಯ ಬ್ರಹ್ಮರಥೋತ್ಸವ ದಿನದಂದು ರಥಕ್ಕೆ ಬ್ರಹ್ಮ, ವಿಷ್ಣು, ಶಿವ ಹೆಸರಿನಲ್ಲಿ ಪೂಜೆ ಮಾಡಿ, ರಥದ ನಾಲ್ಕು ಚಕ್ರಗಳಿಗೆ ಋಗ್ವೇದ, ಸಾಮವೇದ, ಯರ್ಜುವೇದ, ಅಥರ್ವಣವೇದ ಪೂಜೆ ಮಾಡಲಾಗುತ್ತದೆ. ರಥವನ್ನು ಎಳೆಯುವ ಹಗ್ಗಕ್ಕೆ ವಾಸುಕಿ ಎಂಬ ಸರ್ಪವನ್ನು ಆರಾಧನೆ ಮಾಡಿ, ಮೇಲೆ ಪ್ರಧಾನ ದೇವರ ಕಳಸ ಇಡಲಾಗುತ್ತದೆ. ಇದಾದ ನಂತರ ಗರಡು ಪಕ್ಷಿ ಬಂದು ರಥದ ಸುತ್ತಾ ಮೂರು ಪ್ರದಕ್ಷಿಣೆ ಹಾಕುತ್ತದೆ. ಗರುಡ ಪ್ರದಕ್ಷಿಣೆ ನಂತರ, ಅದೇ ಶುಭ ಗಳಿಗೆ ಎಂದು ನಂಬಿ ಮುಹೂರ್ತಕ್ಕೆ ಸರಿಯಾಗಿ ರಥವನ್ನು ಮುಂದಕ್ಕೆ ಎಳೆಯಲಾಗುತ್ತದೆ ಎಂದು ದೇವಾಲಯದ ಪ್ರಧಾನ ಅರ್ಚಕ ಸುಬ್ಬುಕೃಷ್ಣ ಶಾಸ್ತ್ರಿ ಅವರು ಪಬ್ಲಿಕ್ ಮಿರ್ಚಿಗೆ ತಿಳಿಸಿದರು.

ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಸ್ಥಾನ ವತಿಯಿಂದ ಅನ್ನದಾಸೋಹ ಇರುತ್ತದೆ. ಭಕ್ತರಿಗೆ ದೇವಸ್ಥಾನ ವತಿಯಿಂದ ಪ್ರತಿಯೊಂದು ಸೌಕರ್ಯವನ್ನು ಕೂಡ ಮಾಡಿರುತ್ತಾರೆ. ಈ ಕ್ಷೇತ್ರದಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ ನೆರವೇರುತ್ತದೆ.

Ramesh Babu

Journalist

Recent Posts

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

13 hours ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

16 hours ago

ಖಾಸಗಿ ಬಸ್ ಲಾರಿಗೆ ಡಿಕ್ಕಿ: ಹೊತ್ತಿ ಉರಿದ ಬಸ್: 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನ

ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…

16 hours ago

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ…

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…

1 day ago

ನಾಳೆ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಇಂದು ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭೇಟಿ, ಪರಿಶೀಲನೆ

ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…

1 day ago