ಇಂದು (ಏ.13) ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದರು.
ಇಂದು(ಭಾನುವಾರ) ಬೆಳಗ್ಗೆ ಸುಮಾರು 7:15ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಅವರ ಜೊತೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ನಾಗಾರಾಧನೆಗೆ ಪ್ರಸಿದ್ಧಿ ಪಡೆದಿದ್ದು, ನಾಗದೋಷ ಪರಿಹಾರಕ್ಕಾಗಿ ಸುಬ್ರಹ್ಮಣ್ಯ ಸಮೇತ ಲಕ್ಷ್ಮಿನರಸಿಂಹ ಸ್ವಾಮಿ ದೇವರ ದರ್ಶನ ಪಡೆದು, ಅಭಿಷೇಕದಲ್ಲಿ ಪಾಲ್ಗೊಂಡು ಮಹಾಮಂಗಳಾರತಿ ಪಡೆದು ದೇವರ ಕೃಪೆಗೆ ಪಾತ್ರರಾದರು.
ಈ ವೇಳೆ ಘಾಟಿ ಸುಬ್ರಹ್ಮಣ್ಯ ಪ್ರಾಧಿಕಾರದ ಸದಸ್ಯರು, ದೇವಾಲಯದ ಆಡಳಿತ ಮಂಡಳಿ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ತಾ.ಪಂ ಇಒ ಮುನಿರಾಜು ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.