
ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕೊಂಗಾಡಿಯಪ್ಪ ಕಾನೂನು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಸಂವಿಧಾನದ ಪ್ರಸ್ತಾವನೆಯನ್ನು ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ವೆಂಕಟೇಶ್ ರೆಡ್ಡಿ ಬೋಧಿಸಿದರು.
ಈ ವೇಳೆ ಡಿಎಲ್ ಎಸ್ ಎ ಮತ್ತು ಬಿಆರ್ ಡಿ ಸದಸ್ಯ ಕಾರ್ಯದರ್ಶಿ ಶ್ರೀಶೈಲ್ ಭೀಮಸೇನ್ ಬಾಗಾಡಿ ಮಾತನಾಡಿ, ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲಾಗುವ ಸಂವಿಧಾನ ದಿನವು ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿದೆ. ಈ ದಿನಾಂಕವು 1949 ರಲ್ಲಿ ಭಾರತದ ಸಂವಿಧಾನವನ್ನು ಕಾನೂನಿನ ರೂಪದಲ್ಲಿ ಅಂಗೀಕರಿಸಿದ ಐತಿಹಾಸಿಕ ಕ್ಷಣವನ್ನು ನೆನಪಿಸುತ್ತದೆ ಎಂದರು.

ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದು ಭಾರತವನ್ನು ಸಾರ್ವಭೌಮ ಗಣರಾಜ್ಯವೆಂದು ಘೋಷಿಸಿತು. ಈ ದಿನವನ್ನು ನಾವು ಗಣರಾಜ್ಯೋತ್ಸವ ಎಂದು ಆಚರಿಸುತ್ತೇವೆ. ಸಂವಿಧಾನದ ಮಹತ್ವ, ಅದರ ರಚನಾಕಾರರು ಮತ್ತು ಆಧುನಿಕ ಭಾರತಕ್ಕೆ ಅದರ ಪ್ರಸ್ತುತತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತ ಸರ್ಕಾರವು 2015 ರಲ್ಲಿ ನವೆಂಬರ್ 26 ಅನ್ನು ಅಧಿಕೃತವಾಗಿ ಸಂವಿಧಾನ ದಿನ ಎಂದು ಘೋಷಿಸಿತು ಎಂದು ಹೇಳಿದರು..
ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಂತಹ ಈ ದಿನವನ್ನು ಸಂವಿಧಾನ ದಿನವಾಗಿ ಆಚರಣೆ ಮಾಡುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಷಯ, ಸಂವಿಧಾನದ ಆಶಯದಂತೆ ನಾವೆಲ್ಲರೂ ಸಮಾಜದಲ್ಲಿ ಸಮಾನತೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ನಮ್ಮದು ಲಿಖಿತ ಸಂವಿಧಾನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಗೂ ಇತರೆ ಮಹಾನ್ ಚೇತನರ ನೆರವಿನಿಂದ ಸುಧೀರ್ಘವಾಗಿ ಎರಡು ವರ್ಷ 11 ತಿಂಗಳು 18 ದಿನಗಳ ಕಾಲ ಸತತ ಪ್ರಯತ್ನದಿಂದ 395 ವಿಧಿಗಳು, 8 ಅನುಸೂಚಿಗಳು, 22 ಭಾಗಗಳನ್ನು ಹೊಂದಿರುವ ಪ್ರಪಂಚದ ಅತೀ ದೊಡ್ಡ ಸಂವಿಧಾನವನ್ನು 1950 ನವೆಂಬರ್ 26 ರಂದು ಸಮರ್ಥಿಸಿಕೊಳ್ಳಲಾಯಿತು. ಪ್ರಸ್ತುತ 467 ವಿಧಿಗಳು, 25 ಭಾಗಗಳು, 12 ಅನುಸೂಚಿಗಳಿವೆ. ಇದರಿಂದ ನಾವೆಲ್ಲರೂ ನಮಗೆ ನೀಡಿರುವ ಹಕ್ಕುಗಳನ್ನು ಬಳಸಿಕೊಂಡು ಸ್ವತಂತ್ರವಾಗಿ ಮಾತನಾಡುತ್ತಿದ್ದೇವೆ ಎಂದರು.
ಕಾನೂನು ವಿದ್ಯಾರ್ಥಿಗಳು ಸಂವಿಧಾನವನ್ನು ಚೆನ್ನಾಗಿ ಓದಿ ಕರಗತ ಮಾಡಿಕೊಳ್ಳಬೇಕು. ಕಾನೂನಿನ ಮುಂದೆ ಎಲ್ಲಾರೂ ಸಮಾನರು. ವಕೀಲ ವೃತ್ತಿ ಪ್ರಾರಂಭಿಸುವವರು ಶಿಸ್ತು ಬದ್ಧವಾಗಿ ಕಾನೂನನ್ನು ಎತ್ತಿಹಿಡಿಯಬೇಕು ಎಂದರು.
ಈ ವೇಳೆ ಕಾಲೇಜಿನ ಆಡಳಿತ ಮಂಡಳಿ, ಕಾನೂನು ಕಾಲೇಜಿನ ಉಪನ್ಯಾಸಕರು, ಪದವಿ, ಪಿಯು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು….