ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೇಣುಗೋಪಾಲಕೃಷ್ಣ ದೇವರಿಗೆ ವಿಶೇಷ ಅಲಂಕಾರ

ಜಗದೋದ್ಧಾರಕ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ತೂಬಗೆರೆ ಹೋಬಳಿಯ ಯದ್ದಲಹಳ್ಳಿ ಸಮೀಪವಿರುವ ಶ್ರೀರಂಗವನದ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರದ್ಧೆ-ಭಕ್ತಿಯಿಂದ ಆಚರಿಸಲಾಯಿತು.

ದೊಡ್ಡಬಳ್ಳಾಪುರ ತಾಲೂಕು ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಎಸ್ ನವೀನ್ ಮಾತನಾಡಿ, ಈ ದಿನ ಜನ್ಮಾಷ್ಟಮಿ ಪ್ರಯುಕ್ತ ರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲ ಸ್ವಾಮಿಗೆ ಪ್ರಾತಃಕಾಲ ಕ್ಷೀರಾಭಿಷೇಕ, ಮಹಾಭಿಷೇಕ, ಮೊದಲಾದಿಯಾಗಿ ಅಷ್ಟಗಂಧ ಅರ್ಚನೆ, ವಿಷ್ಣು ಸಹಸ್ರನಾಮ ಪೂರ್ವಕ ತುಳಸಿ ಅರ್ಚನೆ, ಮಹಾನೈವೇದ್ಯ ಸಮರ್ಪಣೆ ನಡೆಸಲಾಯಿತು ಎಂದರು.

ದೇವಸ್ಥಾನ ಜೀರ್ಣೋದ್ಧಾರ ಮಂಡಳಿಯ ಸತ್ಯನಾರಾಯಣಪ್ಪ ಮಾತನಾಡಿ, 20 ವರ್ಷಗಳ ಹಿಂದೆ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ಕೃಷ್ಣ ವಿಗ್ರಹ ಬಹಳ ವಿರಳವಾಗಿದ್ದು ಅದನ್ನು ನಾವು ಇಲ್ಲಿ ಕಾಣಬಹುದು ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಣ್ಣು-ಕಾಯಿ ಸೇವೆ, ಬೆಣ್ಣೆ ಸೇವೆ ಮುಂತಾದವುಗಳನ್ನು ಸಮರ್ಪಿಸಿದರು. ವಿಶೇಷ ಅಲಂಕಾರದೊಂದಿಗೆ ಶ್ರೀ ವೇಣುಗೋಪಾಲ ಸ್ವಾಮಿಯ ಮೂರ್ತಿ ಕಂಗೊಳಿಸುತ್ತಿತ್ತು. ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಶ್ರೀರಂಗವನ ಮಾಲೀಕರಾದ ಶಶಿಧರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಘುಮಯ್ಯ, ಯುವ ಮುಖಂಡರಾದ ಉದಯ ಆರಾಧ್ಯ, ಸ್ಥಳೀಯರಾದ ಮೂರ್ತಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *