
ಶ್ರೀರಾಮ ಶೋಭಾಯಾತ್ರೆಗೆ ಡಿಜೆ ಪರ್ಮಿಷನ್ ಕೊಡುವಂತೆ ಒತ್ತಾಯಿಸಿ ದೊಡ್ಡಬಳ್ಳಾಪುರ ನಗರದ ಡಿವೈಎಸ್ಪಿ ಕಚೇರಿ ಎದುರು ಶ್ರೀರಾಮ ಭಜನೆ ಮಾಡುತ್ತಾ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು..
ಕಳೆದ 11 ವರ್ಷಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಾತ್ರೆ ಮಾಡಿದ್ದೇವೆ. ಇಷ್ಟು ವರ್ಷಗಳಿಂದ ಇಲ್ಲದಿರುವ ಕಾನೂನು ಕ್ರಮಗಳು ಈಗ ಯಾಕೆ..? ಡಿಜೆಗೆ ಅನುಮತಿ ಕೊಡಿ, ಸೌಂಡ್ ಕಡಿಮೆ ಇಟ್ಟು ಯಾತ್ರೆ ಮಾಡ್ತೀವಿ ಎಂದು ಹಿಂದೂ ಸಂಘಟನೆಗಳ ಮುಖಂಡರು ಪೊಲೀಸರಲ್ಲಿ ಮನವಿ ಮಾಡಿದರು..
ಹಿಂದೂ ಸಂಘಟನೆಗಳ ಮನವಿಗೆ ಒಪ್ಪದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಇಲಾಖೆ. ಹೆಚ್ಚಿನ ಡೆಸಿಬಲ್ ಶಬ್ದವೃದ್ಧಿ ಮಾಡುವ ಡಿಜೆಗೆ ಅವಕಾಶ ಇಲ್ಲ. ಈಗ ಮಕ್ಕಳಿಗೆ ಪರೀಕ್ಷೆಯ ಸಮಯ ಇರೋದ್ರಿಂದ ಅನುಮತಿ ಕೊಡಲು ಆಗಲ್ಲ. ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಹಿತದೃಷ್ಠಿಯಿಂದ ಅನುಮತಿ ಕೊಡಲು ಆಗಲ್ಲ. ಒಂದು ವೇಳೆ ಡಿಜೆ ಬಳಸಿದ್ದೇ ಆದರೆ ಡಿಜೆ ಉಪಕರಣಗಳನ್ನು ಜಪ್ತಿ ಮಾಡಲಾಗುವುದು. ನಿಯಮಗಳನ್ನು ಪಾಲಿಸದಿರುವ ಕಾರ್ಯಕ್ರಮ ಆಯೋಜಕರ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ..
ಈ ಹಿನ್ನೆಲೆ ಹಿಂದೂ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು..
ಡಿಸಿ ಆದೇಶದಲ್ಲೇನಿದೆ…?
ವಿಷಯ: ದಿನಾಂಕ: 29.03.2026 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನಡೆಯಲಿರುವ ಶ್ರೀರಾಮ ಶೋಭಾಯಾತ್ರಾ ಸಂದರ್ಭದಲ್ಲಿ ಡಿ.ಜೆ ವ್ಯವಸ್ಥೆಗಳು ಮತ್ತು ಹೆಚ್ಚಿನ ಡೆಸಿಬಲ್ ಶಬ್ದವೃದ್ಧಿ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ನಿಷೇಧಿಸುವ ಕುರಿತು.
ವಿಶ್ವ ಹಿಂದು ಪರಿಷದ್, ಬಜರಂಗದಳ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ವತಿಯಿಂದ ದಿನಾಂಕ: 29-03-2026 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಬೃಹತ್ ಶ್ರೀರಾಮ ಶೋಭಾಯಾತ್ರೆಯನ್ನು ಹಮ್ಮಿಕೊಂಡಿದ್ದು, ಸದರಿ ಶೋಭಾ ಯಾತ್ರೆಯ ಸಂದರ್ಭದಲ್ಲಿ ಸುಮಾರು 15 ರಿಂದ 20 ಸಾವಿರ ಜನರು ಭಾಗವಹಿಸುವ ಸಾಧತೆ ಇರುತ್ತದೆ ಹಾಗೂ ಸುಮಾರು 40,000 ಜನರು ಬಂದು ಹೋಗುವ ಸಂಭವ ಇರುವುದರಿಂದ ಆಯೋಜಕರು ಡಿ.ಜಿ ವ್ಯವಸ್ಥೆ ಮತ್ತು ಹೆಚ್ಚಿನ ಡೆಸಿಬಲ್ ಶಬ್ದ ವೃದ್ಧಿ ಸಾಧನಗಳನ್ನು ಬಳಸುವುದಾಗಿ ಮಾಹಿತಿ ತಿಳಿದು ಬಂದಿರುತ್ತದೆ. ಈ ಸಂಬಂಧ ಸಾರ್ವಜನಿಕರು, ವಯೋವೃದ್ಧರು, ಮಕ್ಕಳ ಆರೋಗ್ಯಕ್ಕೆ ಸಮಸ್ಯೆ ಉಂಟಾಗದಂತೆ ಹಾಗೂ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ. ಸಾರ್ವಜನಿಕರ ಹಿತಾದೃಷ್ಟಿಯಿಂದ ಸದರಿ ಶೋಭಾಯಾತ್ರೆ ಸಂದರ್ಭದಲ್ಲಿ ಡಿ.ಜೆ ವ್ಯವಸ್ಥೆಗಳು ಮತ್ತು ಹೆಚ್ಚಿನ ಡೆಸಿಬಲ್ ಶಬ್ದವೃದ್ಧಿ ಸಾಧನಗಳ ಬಳಕೆಯನ್ನು ನಿಷೇಧಿಸುವಂತೆ ಆದೇಶ ಹೊರಡಿಸಲು ಉಲ್ಲೇಖ (1)ರಂತೆ ಪೊಲೀಸ್ ಅಧೀಕ್ಷಕರು ಕೋರಿರುತ್ತಾರೆ.
ಈ ಪ್ರಯುಕ್ತ ದಿನಾಂಕ: 29-03-2026 ರಂದು ದೊಡ್ಡಬಳ್ಳಾಪುರ ನಗರದಲ್ಲಿ ನಡೆಯುವ ಬೃಹತ್ ಶ್ರೀರಾಮ ಶೋಭಾಯಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಆರೋಗ್ಯ ಸಾರ್ವಜನಿಕ ಶಾಂತಿ, ಸಾರ್ವಜನಿಕ ಮಾನಸಿಕ ಆರೋಗ್ಯ, ಸಾರ್ವಜನಿಕರ ಪ್ರಾಣ ಹಾಗೂ ಜೀವಭದ್ರತೆ ಕಾಪಾಡುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ, 2023 (BNSS) ಕಲಂ 163 ರಡಿ ದೊಡ್ಡಬಳ್ಳಾಪುರ ನಗರದಾದ್ಯಂತ ಡಿಜೆ ವ್ಯವಸ್ಥೆಗಳು ಮತ್ತು ಹೆಚ್ಚಿನ ಡೆಸಿಬೆಲ್ ಶಬ್ದ ವೃದ್ಧಿ ಸಾಧನಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸುವುದು ಪ್ರಸ್ತುತವಾಗಿ ಅತೀ ಅವಶ್ಯವಿರುವುರುತ್ತದೆ..
ಪ್ರಸ್ತಾವೆನಯಲ್ಲಿ ವಿವರಿಸಿರುವ ಅಂಶಗಳನ್ವಯ ಡಾ. ಅನುರಾಧ ಕೆ.ಎನ್,ಭಾ.ಆ.ಸೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆದ ನಾನು ಭಾರತೀಯ ನಾಗರೀಕ ಸುರಕ್ಷತಾ ಸಂಹಿತೆ, 2023 (BNSS) ಕಲಂ 163 ರಡಿ ನನಗೆ ಪ್ರದತ್ತವಾದ ಅಧಿಕಾರದ ಮೇರೆಗೆ ದಿನಾಂಕ: 29-03-2026 ರಂದು ದೊಡ್ಡಬಳ್ಳಾಪುರ ನಗರದಲ್ಲಿ ನಡೆಯುವ ಬೃಹತ್ ಶ್ರೀರಾಮ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಡಿಜೆ ವ್ಯವಸ್ಥೆಗಳು ಮತ್ತು ಹೆಚ್ಚಿನ ಡೆಸಿಬೆಲ್ ಶಬ್ದ ವೃದ್ಧಿ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಆದೇಶದ ಉಲ್ಲಂಘನೆ ಕಂಡುಬಂದಲ್ಲಿ, ಸಂಬಂಧಿತ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಮೆರವಣಿಗೆ ಅಥವಾ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸುವುದು, ಡಿಜೆ ಉಪಕರಣಗಳನ್ನು ಜಪ್ತಿ ಮಾಡುವುದು, ಅಗತ್ಯವಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು, ಗುಂಪನ್ನು ಚದುರಿಸುವುದು, ಸಂಬಂಧಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವುದು ಹಾಗೂ ಮುಂದಿನ ಅನುಮತಿಗಳನ್ನು ರದ್ದುಪಡಿಸುವ ಅಧಿಕಾರವನ್ನು ಈ ಮೂಲಕ ನೀಡಲಾಗಿದೆ.
ಈ ಆದೇಶವನ್ನು ಪೊಲೀಸ್ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಜಾರಿಗೆ ತರಲು ಸೂಕ್ತ ಕ್ರಮ ಕೈಗೊಳ್ಳುವುದು.
ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ..