ಮುಸ್ಲಿಂ ಬಾಂಧವರ ಪವಿತ್ರ ಈದ್ ಮಿಲಾದ್ ಹಬ್ಬವನ್ನು ದೊಡ್ಡಬಳ್ಳಾಪುರ ತಾಲೂಕಿನಾದ್ಯಂತ ಶ್ರದ್ಧಾಭಕ್ತಿ, ಸಂಭ್ರಮಗಳಿಂದ ಆಚರಿಸಲಾಯಿತು.
ಶಾಂತಿದೂತ ಮಾನವತಾವಾದಿ ವಿಶ್ವ ಪ್ರವಾದಿ ಮಹಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದ್ ಆಚರಣೆಯಲ್ಲಿ ಮುಸ್ಲಿಂ ಬಾಂಧವರು ಪರಸ್ಪರ ಈದ್ ಶುಭಾಶಯಗಳನ್ನು ಕೋರುವ ಮೂಲಕ ಸಂಭ್ರಮಿಸಿದರು.
ಮಸೀದಿಗಳಲ್ಲಿ ಮೌಲೀದ್ ಹಾಗೂ ಕುರಾನ್ ಪಾರಾಯಣ ಆಚರಣೆ ನಡೆಯಿತು. ಮಸೀದಿಗಳ ಸಮೀಪದ ಹಾದಿ ಬೀದಿಗಳಲ್ಲಿ ಹಸಿರುಮಯ ಬ್ಯಾನರ್ ಗಳು, ಬಾವುಟಗಳು, ವಿದ್ಯುತ್ ದೀಪಾಲಂಕಾರಗಳು ರಾರಾಜಿಸುತ್ತಿದ್ದವು.
ಮಸೀದಿಗಳಲ್ಲಿ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ನಗರದ ಇಸ್ಲಾಂಪುರ ಜಾಮಿಯಾ ದರ್ಗಾದಿಂದ ಪೈಗಂಬರ್ ಮೆಕ್ಕಾದ ಸ್ಥಬ್ದ ಚಿತ್ರಗಳು, ಮೌಲೀದ್ ಪಾರಾಯಣದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಪ್ರಪಂಚದ ಸೃಷ್ಟಿಗೆ ಕಾರಣೀಭೂತರಾದ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನವಾಗಿ ಈದ್ ಮಿಲಾದ್ ಮಹತ್ವ ಪಡೆದಿದೆ. ಅವರ ಬದುಕು, ನಡೆ-ನುಡಿಗಳು, ಜನರಲ್ಲಿ ತೋರಿದ ಕಾರುಣ್ಯ, ಸಮಾನತೆ, ಸಹೋದರತೆ, ಸಹನೆ, ಏಕತೆ, ದೈವ ಭಕ್ತಿ ಎಲ್ಲವೂ ಅದ್ಭುತ, ಸರ್ವ ಕಾಲದಲ್ಲೂ ಅನುಕರಣೀಯ.
ಈದ್ ಮಿಲಾದ್ ದಿನದಂದು ಮಸೀದಿಗಳಲ್ಲಿ ವಿಶೇಷ ಪ್ರವಚನಗಳನ್ನು ಏರ್ಪಡಿಸಿ ಪ್ರವಾದಿಯವರ ಬಗ್ಗೆ ಮಾಹಿತಿಯನ್ನು ಮತ್ತು ಆಚರಿಸುವ ಬಗೆಯನ್ನೂ, ಧರ್ಮಪಾಲನೆಯ ಮಹತ್ವ ಮತ್ತು ಅದನ್ನು ಪಾಲಿಸುವ ಬಗೆಯನ್ನೂ ಪ್ರಚುರಪಡಿಸಲಾಗುತ್ತದೆ.