
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪತ್ನಿಯ ಶೀಲದ ಮೇಲೆ ಅನುಮಾನಗೊಂಡಿದ್ದ ಪತಿಯೊಬ್ಬ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ, ಗಂಭೀರವಾಗಿ ಸುಟ್ಟು ಕರಕಲಾಗಿದ್ದ ಸಂತ್ರಸ್ತೆ ಏಳು ದಿನಗಳ ಬಳಿಕ ಕೊನೆಯುಸಿರೆಳೆದಿದ್ದಾಳೆ.
ಘಟನೆ ವಿವರ:
ಯಲ್ಲಾಪುರ ತಾಲೂಕಿನ ಕಿರವತ್ತಿ ಬೊಂಬಡಿಕೊಪ್ಪದ ನಿವಾಸಿಗಳಾದ ಜನ್ನಿ (23) ಮತ್ತು ಬಾಬು ಎಕ್ಕು ಖಾತ್ರೋಟ(29) ದಂಪತಿಗಳ ನಡುವೆ ಪತ್ನಿಯ ಶೀಲದ ಬಗ್ಗೆ ಅನುಮಾನದ ಕಾರಣದಿಂದ ನಿರಂತರವಾಗಿ ಜಗಳ ನಡೆಯುತ್ತಿತ್ತು. ಅಕ್ಟೋಬರ್ 3ರಂದು ನಡೆದ ವಾಗ್ವಾದದ ವೇಳೆ ಸಿಟ್ಟಿಗೆದ್ದ ಪತಿ ಬಾಬು, ಜನ್ನಿಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಬೆಂಕಿ ಹೊತ್ತಿಕೊಂಡ ಕೂಡಲೇ ಜನ್ನಿ ತನ್ನ ತವರು ಮನೆಯ ಕಡೆಗೆ ಓಡಿದ್ದು, ಮನೆಯವರು ತಕ್ಷಣ ಆಕೆಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಜನ್ನಿಯನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಜನ್ನಿ ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಸಾವು:
ಆದರೆ, ಗಂಭೀರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಜನ್ನಿ, ಅಂತಿಮವಾಗಿ ಅಕ್ಟೋಬರ್ 10ರಂದು ಮೃತಪಟ್ಟಿದ್ದಾರೆ.
ಈ ಸಂಬಂಧ ಜನ್ನಿಯ ಸಹೋದರ ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸರು ಆರೋಪಿ ಪತಿ ಬಾಬು ಎಕ್ಕು ಖಾತ್ರೋಟನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಕ್ರೂರ ಕೃತ್ಯ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.