ಚನ್ನಾದೇವಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೋಹಳ್ಳಿ ಗ್ರಾಮದ ಸರ್ವೇ ನಂಬರ್ 59 ರಲ್ಲಿ 7 ಎಕರೆ ಜಮೀನಿನಲ್ಲಿ ಆಶ್ರಯ ಯೋಜನೆಯಡಿ ಸುಮಾರು 90ಕ್ಕೂ ಹೆಚ್ಚು ನಿವೇಶನಗಳನ್ನು ನಮ್ಮ ಊರಿನವರಿಗೆ ಬಿಟ್ಟು ಬೇರೆ ಊರಿನವರಿಗೆ ಹಂಚಿಕೆ ಮಾಡಲಾಗಿದೆ ಎಂದು ಮಲ್ಲೋಹಳ್ಳಿ ಗ್ರಾಮದ ನಿವಾಸಿಗಳು ಆರೋಪಿಸಿದ್ದಾರೆ.
ನಮ್ಮ ಊರಿನಲ್ಲೇ ಸುಮಾರು 100ಕ್ಕೂ ಹೆಚ್ಚು ನಿವಾಶನ ರಹಿತರು ಇದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೊದಲು ನಮಗೆ ಆದ್ಯತೆ ನೀಡದೇ, ಶಾಕರ ಗಮನಕ್ಕೂ ತರದೇ ಬೇರೆ ಊರಿನವರಿಗೆ ಆದ್ಯತೆ ನೀಡಿ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಊರಿನ ವ್ಯಾಪ್ತಿಯ ಗೋಮಾಳದಲ್ಲಿ ಬೇರೆ ಊರಿನವರಿಗೆ ನಿವೇಶ ಹಂಚಿಕೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ. ಈ ಆದೇಶವನ್ನು ಮೊದಲು ಹಿಂಪಡೆದು ನಮ್ಮ ಊರಿನ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಸರ್ಕಾರದ ಆದೇಶ ಮೇರೆಗೆ ಗ್ರಾಮ ಪಂಚಾಯಿತಿಯಲ್ಲಿ ಬರುವ ಗ್ರಾಮಗಳಲ್ಲಿ ಯಾರು ನಿವೇಶನ ರಹಿತರು ಇದ್ದಾರೆ ಅಂತವರನ್ನು ಗುರುತಿಸಿ, ಪಟ್ಟಿ ಮಾಡಿ, ಅರ್ಜಿಗಳಲ್ಲಿ ಪಡೆದು ಹಂಚಿಕೆ ಮಾಡಿದ್ದೇವೆ ಎಂದರು.
ಈ ಕುರಿತು ಈಗ ಮಲ್ಲೋಹಳ್ಳಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಾವು ಯಾವುದೇ ರೀತಿಯಾಗಿ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿಲ್ಲ. ಸರ್ಕಾರದ ನಿಯಮಗಳನ್ನು ಪಾಲಿಸಿದ್ದೇವೆ. ಒಂದು ವೇಳೆ ಇನ್ನೂ ಆಕ್ಷೇಪಣೆ ಇದ್ದಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಬಗೆಹರಿಸಿಕೊಳ್ಳಬಹುದು ಎಂದರು.