
ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಶ್ರೀ ಮಾರುತಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ “ನಮ್ಮ ಶಾಲೆ ನಮ್ಮ ಹಕ್ಕು” ಎಂಬ ಹೆಸರಲ್ಲಿ ಹಳೇ ವಿದ್ಯಾರ್ಥಿಗಳ ಮಹಾ ಸಂಗಮ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಬೆಂಗಳೂರಿನ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿಯ ಕೆಲವು ಸದಸ್ಯರು, ಕಟ್ಟಡ ನಿರ್ಮಿಸಿಕೊಂಡು ಕಳೆದ 5 ವರ್ಷಗಳಿಂದ ಖಾಸಗಿ ಶಾಲೆ ಶಾಲೆಯನ್ನು ನಡೆಸುತ್ತಿದ್ದಾರೆ. ಆದರೆ ಸುಮಾರು 50ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಗ್ರಾಮದ ಹೆಸರಾಂತ ಶ್ರೀ ಮಾರುತಿ ಪ್ರೌಢಶಾಲೆಯನ್ನು ಮುಚ್ಚಿಸುವ ಹುನ್ನಾರ ನೆಡೆಯುತ್ತಿದೆ ಎಂದು ಹಳೆ ವಿದ್ಯಾರ್ಥಿಗಳು ಆರೋಪಿಸಿದರು.

1972ರಲ್ಲಿ ಅಂದಿನ ದೊಡ್ಡಬಳ್ಳಾಪುರ ಶಾಸಕರಾದ ಜಿ.ರಾಮೇಗೌಡರ ಸಹಕಾರದಿಂದ ಪ್ರಾರಂಭವಾಗಿ ಹಿಂದಿನಿಂದಲೂ ಸರ್ಕಾರಿ ಅನುದಾನದಿಂದ ನಡೆಯುತ್ತಿದೆ. ಈ ಶ್ರೀ ಮಾರುತಿ ಪ್ರೌಢಶಾಲೆಯು ತಾಲ್ಲೂಕಿನಲ್ಲಿ ಈಗಾಗಲೇ ಹೆಚ್ಚಿನ ಪ್ರಸಿದ್ಧಿ ಪಡೆದಿದ್ದು, ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ರಾಜ್ಯಗಳಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಉತ್ತಮ ಸ್ಥಾನ- ಮಾನ ಗಳಿಸಿದ್ದಾರೆ. ಆದರೆ ಈ ಶಾಲೆಯ ಆವರಣದಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಸ್ಥಾಪಿಸುವ ಮೂಲಕ ಸರ್ಕಾರಿ ಅನುದಾನಿತ ಶಾಲೆಯನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ನಮ್ಮ ಶಾಲೆಯ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಶಾಲೆಯ ಉಳಿವಿಗಾಗಿ ಹಳೆಯ ವಿದ್ಯಾರ್ಥಿಗಳಿಂದ ಲಯನ್ಸ್ ಕ್ಲಬ್ ಯಲಹಂಕ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಿ ರಕ್ತ ಕೊಟ್ಟೆವು ಪ್ರಾಣ ಬಿಡೆವು ಎಂಬ ಸಂದೇಶವನ್ನು ಈ ಮೂಲಕ ಶಾಲೆಯ ಆಡಳಿತ ಮಂಡಳಿಗೆ ನೀಡುತ್ತಿದ್ದೇವೆ ಎಂದು ಹಳೆ ವಿದ್ಯಾರ್ಥಿ ರಾಜಘಟ್ಟ ಗಣೇಶ್ ತಿಳಿಸಿದರು.

ಹಳೇ ವಿದ್ಯಾರ್ಥಿಗಳಾದ ಸುರೇಶ್, ವಿನೋದ್ ಮಾತನಾಡಿ, ಸಾವಿರಾರು ಬಡ ವಿದ್ಯಾರ್ಥಿಗಳ ಜೀವನ ರೂಪಿಸಿರುವ ಮಾರುತಿ ಪ್ರೌಢಶಾಲೆಗೆ ಇಂದು ಅಳಿವು ಉಳಿವಿನ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸ, ನಮ್ಮ ಶಾಲೆ ಉಳಿವಿಗಾಗಿ ನಾವೆಲ್ಲರೂ ಒಟ್ಟಾಗಿ ಮುಂದಾಗಿದ್ದೇವೆ. ಸುತ್ತಲ ಹತ್ತಾರು ಹಳ್ಳಿಗಳ ವಿದ್ಯಾಭ್ಯಾಸಕ್ಕೆ ಮೂಲವಾಗಿರುವ ಸರ್ಕಾರಿ ಅನುದಾನಿತ ಶಾಲೆ ಮುಚ್ಚಿಸುವ ಹುನ್ನಾರ ನೆಡೆಯುತ್ತಿದೆ ನಮ್ಮ ಶಾಲೆ ಬಿಟ್ಟುಕೊಡುವ ಮಾತೇ ಇಲ್ಲ ಇದು ನಮ್ಮ ಶಾಲೆ ಎಂದರು.
ಈ ಸಂದರ್ಭದಲ್ಲಿ ಸುರೇಶ, ವಿನೋದ್, ಅನಂತ್, ವೇಣು, ಮಂಜುನಾಥ್, ಅಂಬರೀಶ್, ನವೀನ್, ಗಂಗರಾಜು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.