ಶಾಲೆಯ ರಜಾ ದಿನದಂದು ಅಂದರೆ ಭಾನುವಾರ ರಾತ್ರಿ ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ತೊಟ್ಟಿಯಲ್ಲಿ ದುಷ್ಕರ್ಮಿಗಳು ಮಲವಿಸರ್ಜನೆ ಮಾಡಿದ್ದಾರೆ.
ಶಾಲಾ ಮಕ್ಕಳು ಕುಡಿಯಲು, ಮಧ್ಯಾಹ್ನದ ಊಟ ತಯಾರಿಸಲು, ಪಾತ್ರೆ ತೊಳೆಯಲು ಈ ತೊಟ್ಟಿಯ ನೀರನ್ನು ಬಳಸುತ್ತಾರೆ.
ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ನೀರಿನ ತೊಟ್ಟಿಯ ಮುಚ್ಚಳ ಒಡೆದು ತೊಟ್ಟಿಯಲ್ಲೇ ಮಲವಿಸರ್ಜನೆ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಶಾಲೆಯ ಬಾಗಿಲು, ಗೋಡೆಗೂ ಹಾನಿ ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಮುಖ್ಯ ಶಿಕ್ಷಕ ವಸಂತಗೌಡ ಅವರು ಯಾರೂ ಕಲುಷಿತಗೊಂಡಿರುವ ನೀರು ಬಳಸದಂತೆ ಸೂಚನೆ ನೀಡಿದರು. ಈ ಕುರಿತು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ ಕೂಡಲೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.