ಕೋಲಾರ: ಶಾಲೆಯಲ್ಲಿ ಕಲಿತ ಶಿಸ್ತು, ಸಂಯಮ ಮತ್ತು ಸಂಸ್ಕಾರವೇ ಇವತ್ತು ನೀವು ಎಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಒಂದು ಹಂತಕ್ಕೆ ಹೋಗಿದ್ದು ಅಲ್ಲದೇ ನಿಮ್ಮ ಜೀವನವನ್ನು ನಿಭಾಯಿಸುವ ಶಕ್ತಿ ಬಂದಿದೆ ಎಂಬುದು ನಮಗೆಲ್ಲ ಹೆಮ್ಮೆಯಾಗಿದೆ ಎಂದು ಸಬರಮತಿ ಪ್ರೌಢಶಾಲೆಯ ಕಾರ್ಯದರ್ಶಿ ಬಿ.ವೆಂಕಟೇಶ್ ತಿಳಿಸಿದರು.
ತಾಲೂಕಿನ ಸುಗಟೂರು ಗ್ರಾಮದ ಸಬರಮತಿ ಸಂಯುಕ್ತ ಪ್ರೌಡಶಾಲೆಯಲ್ಲಿ ಭಾನುವಾರ 2004- 2005 ನೇ ಸಾಲಿನ ವಿದ್ಯಾರ್ಥಿಗಳ ಪುನರ್ ಮಿಲನ, ಗುರು ನಮನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾವುಗಳು ಕಲಿತ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಅತ್ಯಮೂಲ್ಯವಾದ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದು ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸುವುದು ನಮ್ಮಲ್ಲಿನ ಗೌರವವನ್ನು ಹೆಚ್ಚಿಸುತ್ತದೆ ಇಂತಹ ಕಾರ್ಯಕ್ರಮಗಳು ಮಾದರಿಯಾಗುತ್ತವೆ ಎಂದರು.
ಬಡವರು ಅದರಲ್ಲೂ ಗ್ರಾಮೀಣ ಪ್ರದೇಶದವರ ಶೈಕ್ಷಣಿಕ ಅಭಿವದ್ಧಿಗೆ ಆದ್ಯತೆ ನೀಡಿವು ಹಿನ್ನೆಲೆಯಲ್ಲಿ ಪ್ರಾರಂಭವಾದ ಈ ಶಾಲೆಯು ಇವತ್ತು ಹೆಮ್ಮರವಾಗಿ ಬೆಳೆದು ಸಾವಿರಾರು ಬಡ ಮಕ್ಕಳಿಗೆ ಶಿಕ್ಷಣ ನೀಡಿದೆ. ಇಲ್ಲಿ ವ್ಯಾಸಂಗ ಮಾಡಿದ್ದ ಬಹಳಷ್ಟು ವಿದ್ಯಾರ್ಥಿಗಳು ಇಂದು ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮುಂದೆ ಶಾಲೆಯಲ್ಲಿ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಳೆ ವಿಧ್ಯಾರ್ಥಿಗಳ ಸಹಕಾರ ಬೆಂಬಲವಿರಲಿ ಎಂದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು ಕಾರ್ಯಕ್ರಮದ ನೆನಪಿಗಾಗಿ ಶಾಲಾ ಆವರಣದಲ್ಲಿ ಗಿಡ ನೆಟ್ಟರು, ಶಿಕ್ಷಕರಾದ ಆರ್ ಚೌಡರೆಡ್ಡಿ, ಚಿ.ನಾ ನಾಗೇಶ್, ಕೆಂಚೇಗೌಡ, ನಾರಾಯಣಸ್ವಾಮಿ, ವಿಶ್ವನಾಥ್, ಹಳೆ ವಿದ್ಯಾರ್ಥಿಗಳಾದ ಮುರಳಿ, ಶ್ವೇತಾ, ಆಕಾಶ್, ಶಿವಕುಮಾರ್, ಸೌಮ್ಯ, ಪ್ರಮೋದ್, ರಾಜು, ಶಾಲಿನಿ, ಸೇರಿದಂತೆ 2005 ನೇ ಸಾಲಿನ ಹಳೆ ವಿಧ್ಯಾರ್ಥಿಗಳು ಇದ್ದರು.