ಶಾಲಾ ಆವರಣ ಸುತ್ತಮುತ್ತ ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ: 9 ಕೆಜಿ ತಂಬಾಕು ಉತ್ಪನ್ನ, ನಿರ್ಬಂಧಿತ ಏಕಬಳಕೆ ಪ್ಲಾಸ್ಟಿಕ್ ಪತ್ತೆ: ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ದಂಡ ವಿಧಿಸಿದ ಅಧಿಕಾರಿಗಳು

ದೊಡ್ಡಬಳ್ಳಾಪುರ ನಗರದ ಶಾಲಾ ಆವರಣದ ಸುತ್ತಮುತ್ತ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಏ.4ರಂದು ದೊಡ್ಡಬಳ್ಳಾಪುರ ನಗರ ಠಾಣಾ ಆರಕ್ಷಕ ನಿರೀಕ್ಷಕರಾದ ಅಮರೇಶ್ ಗೌಡ ಮುಖ್ಯಸ್ಥಿಕೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಐದು ಅಂಗಡಿಗಳಿಗೆ ನೋಟಿಸ್ ನೀಡಿ ದಂಡ ವಿಧಿಸಿದರು.

ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆ, ನಗರಸಭೆ, ಮಕ್ಕಳ ಸಹಾಯವಾಣಿ ಹಾಗೂ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಜಂಟಿ ದಾಳಿ ನಡೆಸಲಾಯಿತು.

ನಗರದ ವಿವಿಧ ಶಾಲೆಗಳ ಸುತ್ತಮುತ್ತಲಿನ ಅಂಗಡಿಗಳ ಮೇಲೆ ನಡೆಸಿದ ಈ ದಾಳಿಯಲ್ಲಿ 9 ಕೆಜಿ ತಂಬಾಕು ಉತ್ಪನ್ನಗಳಾದ ಸಿಗರೇಟ್, ಗುಟ್ಕಾ ಪ್ಯಾಕೆಟ್‌ಗಳು ಮತ್ತು ನಿರ್ಬಂಧಿತ ಏಕಬಳಕೆ ಪ್ಲಾಸ್ಟಿಕ್ ಪತ್ತೆಯಾಗಿವೆ.

ನಿಯಮ ಉಲ್ಲಂಘಿಸಿ ಶಾಲಾ ವಲಯದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿ, ದಂಡ ವಿಧಿಸಲಾಯಿತು.

ಕಳೆದ ಫೆಬ್ರವರಿ 9, 2026 ರಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ‘ಮಕ್ಕಳ ಹಕ್ಕುಗಳ ನಗರಸಭೆ’ ಕಾರ್ಯಕ್ರಮದಲ್ಲಿ, ಶಾಲಾ ಮಕ್ಕಳು ತಮ್ಮ ಶಾಲೆಯ ಆವರಣದಲ್ಲಿ ತಂಬಾಕು ಮಾರಾಟ ಮಾಡುತ್ತಿರುವ ಬಗ್ಗೆ ಮತ್ತು ಮಾದಕ ವಸ್ತುಗಳ ಬಳಕೆಯ ಬಗ್ಗೆ ದೂರು ನೀಡಿದ್ದರು. ನಗರಸಭೆ ಹಾಗೂ ಯುವ ಸಂಚಲನ ಟ್ರಸ್ಟ್ ಸಹಯೋಗದಲ್ಲಿ ನಡೆದ ಆ ಸಭೆಯಲ್ಲಿ ಇಲಾಖಾ ಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಜೊತೆಗೆ ಯುವ ಸಂಚಲನ ತಂಡದಿಂದ ಕಳೆದ ನಾಲ್ಕು ವರ್ಷಗಳಿಂದ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ತರಲಾಗಿತ್ತು ಇದರ ಅನುಸರಣೆಯಾಗಿ ಇಂದು ಈ ಕಾರ್ಯಾಚರಣೆ ನಡೆದಿದೆ.

“ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲಾ ಆವರಣದ ಸುತ್ತಮುತ್ತ ಇಂತಹ ಪದಾರ್ಥಗಳ ಮಾರಾಟವನ್ನು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ,” ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಕಾರ್ಯಾಚರಣೆಯಲ್ಲಿ ನಗರಸಭೆಯ ಪರಿಸರ ಅಭಿಯಂತರರಾದ ಈರಣ್ಣ, ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಚಿದಾನಂದ್ ಮೂರ್ತಿ, ಮಕ್ಕಳ ಸಹಾಯವಾಣಿ ಮೇಲ್ವಿಚಾರಕರಾದ ಸೌಮ್ಯ ಜೆ, ನಗರಸಭೆ ಆರೋಗ್ಯ ನಿರೀಕ್ಷಕರಾದ ಕಾಂತರಾಜು ಹಾಗೂ ಪ್ರಸಾದ್ ನಾಯಕ್, ಟ್ರಸ್ಟ್ ನ ಯೋಜನಾ ಸಂಚಾಲಕರಾದ ನವೀನ್ ಹಾಗೂ ಟ್ರಸ್ಟ್ ನ ಸ್ವಯಂ ಸೇವಕರಾದ ಭರತ್ ಮತ್ತು ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!