ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಅಂತಿಮ ಟಿ-ಟ್ವೆಂಟಿ ಪಂದ್ಯದಲ್ಲಿ ರಾಜ್ ಕೋಟ್ ನ ಅಂಗಳದ ಮೂಲೆ ಮೂಲೆಗೂ ಚೆಂಡನ್ನು ಬಾರಿಸುವ ಮೂಲಕ ಸೂರ್ಯ ಕುಮಾರ್ ಯಾದವ್ ಶತಕ ಸಿಡಿಸಿ ಮತ್ತೊಮ್ಮೆ ತಾನು 360 ಡಿಗ್ರಿ ಆಟಗಾರ ಎಂದು ಸಾಭೀತುಪಡಿಸಿ ತಂಡ ಸರಣಿ ಜಯಿಸುವಂತೆ ಮಾಡಿದರು.
ಮೂರು ಪಂದ್ಯಗಳ ಸರಣಿಯಲ್ಲಿ ತಲಾ ಒಂದೊಂದು ಪಂದ್ಯ ಜಯಿಸುವ ಮೂಲಕ ಎರಡೂ ತಂಡಗಳಿಗೆ ಮೂರನೇ ಪಂದ್ಯ ಮಹತ್ವದ್ದಾಗಿತ್ತು, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡರೂ ಸಹ ಪುಟಿದೇಳುವ ಮೂಲಕ ಉತ್ತಮ ಮೊತ್ತ ಕಲೆ ಹಾಕಿತು.
ನಂತರ ಜೊತೆಯಾದ ರಾಹುಲ್ ತ್ರಿಪಾಠಿ (35) ಹಾಗೂ ಶುಭ್ ಮನ್ ಗಿಲ್ (46) ಉತ್ತಮ ಆಟ ಪ್ರದರ್ಶಿಸಿದರು, ತ್ರಿಪಾಠಿ ಔಟಾದ ನಂತರ ಕ್ರಿಸ್ ಗೆ ಬಂದ ವಿಶ್ವ ಟಿ-ಟ್ವೆಂಟಿ ನಂಬರ್ ಒನ್ ಆಟಗಾರ ಸೂರ್ಯಕುಮಾರ್ ಕುಮಾರ್ ಯಾದವ್ 7 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸುವ ಮೂಲಕ (112) ರನ್ ಗಳಿಸಿ ಅಂತರರಾಷ್ಟ್ರೀಯ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ತಮ್ಮ ಮೂರನೇ ಶತಕ ದಾಖಲಿಸಿದರು.
ಶುಭ್ ಮನ್ ಗಿಲ್ ಔಟಾದ ನಂತರ ಕ್ರಿಸ್ ಗೆ ಬಂದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಆಲ್ ರೌಂಡರ್ ದೀಪಕ್ ಹೂಡ ಹೆಚ್ಚು ಕಾಲ ನಿಲ್ಲಲಿಲ್ಲ, ನಂತರ ಬಂದ ಅಕ್ಷರ್ ಪಟೇಲ್ 9 ಎಸೆತಗಳಲ್ಲಿ (21) ರನ್ ಬಾರಿಸುವ ಮೂಲಕ ಲಂಕಾ ತಂಡಕ್ಕೆ 229 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದರು.
ಗುರಿ ಬೆನ್ನಟ್ಟಿದ ಪ್ರವಾಸಿ ಶ್ರೀಲಂಕಾ ತಂಡದ ಆರಂಭ ಉತ್ತಮವಾಗಿರಲಿಲ್ಲ, ಆರಂಭಿಕ ಬ್ಯಾಟ್ಸ್‌ಮನ್ಗಳಾದ ನಿಸಾಂಕ (15) ಹಾಗೂ ಅವಿಶಾಂಕ ಫರ್ನಾಂಡೊ (1) ಅವರನ್ನು ಕ್ರಮವಾಗಿ ಅಶ೯ದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು.
ನಾಯಕ ದಸುನ್ ಶನಕಾ (23) ಹಾಗೂ ಧನಂಜಯ ಡಿ ಸಿಲ್ವಾ (22) ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರಿದರು ಸಹ ಭಾರತೀಯ ಬೌಲಿಂಗ್ ಎದುರಿಸಲು ಸಾಧ್ಯವಾಗಲಿಲ್ಲ, ಭಾರತದ ಪರವಾಗಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಅಶ೯ದೀಪ್ ಸಿಂಗ್ 3 ವಿಕೆಟ್, ಹಾರ್ದಿಕ್ ಪಾಂಡ್ಯ, ಉಮ್ರಾನ್ ಮಲ್ಲಿಕ್ ಹಾಗೂ ಚಹಲ್ ತಲಾ 2 ವಿಕೆಟ್ ಪಡೆಯುವ ಮೂಲಕ 137 ಕ್ಕೆ ಆಲೌಟ್ ಮಾಡಿ 91 ರನ್ ಗಳ ಜಯ ತಂದುಕೊಟ್ಟರು.
ಭಾರತದ ಪರವಾಗಿ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಅಕ್ಷರ್ ಪಟೇಲ್ ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಅಬ್ಬರದ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.