ಶಂಕುಸ್ಥಾಪನೆಯೇ ಅಭಿವೃದ್ಧಿಯೇ?- ಶಾಸಕ ಧೀರಜ್ ಮುನಿರಾಜ್ ಪ್ರೋಗ್ರೆಸ್ ಕಾರ್ಡ್ ನೀಡಿ- ಕಾಂಗ್ರೆಸ್ ಯುವ ಘಟಕ ಆಗ್ರಹ

ದೊಡ್ಡಬಳ್ಳಾಪುರ: ಶಾಸಕ ಧೀರಜ್ ಮುನಿರಾಜು ಅವರು ತಮ್ಮ ಮೂರು ವರ್ಷದ ಅವಧಿಯ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರೋಗ್ರೆಸ್ ಕಾರ್ಡ್ (ರಿಪೋರ್ಟ್ ಕಾರ್ಡ್) ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಯುವ ಘಟಕದಿಂದ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕಾಂಗ್ರೆಸ್ ಯುವ ಘಟಕದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶರತ್ ಪಟೇಲ್ ಎಚ್ಚರಿಕೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ವೇಳೆ ಐದು ವರ್ಷದ ಪ್ರೋಗ್ರೆಸ್ ಕಾರ್ಡ್‌ನೊಂದಿಗೆ ಜನರ ಮುಂದೆ ಬರುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜು ಭರವಸೆ ನೀಡಿದ್ದರು. ಈಗಾಗಲೇ ಮೂರು ವರ್ಷಗಳು ಕಳೆದಿದ್ದು, ಅರ್ಧಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈವರೆಗಿನ ಅಭಿವೃದ್ಧಿ ಕಾರ್ಯಗಳ ಮಧ್ಯಂತರ ವರದಿ ನೀಡಬೇಕು ಎಂದು ಆಗ್ರಹಿಸಿದರು.

“ನವ ದೊಡ್ಡಬಳ್ಳಾಪುರ” ನಿರ್ಮಾಣದ ಭರವಸೆ ಎಲ್ಲಿಗೆ ತಲುಪಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಅಮೆರಿಕದಲ್ಲಿ ಶಿಕ್ಷಣ ಪಡೆದಿರುವುದಾಗಿ ಹೇಳಿಕೊಂಡಿದ್ದ ಶಾಸಕರು ಹಾಗೂ ಸದನದಲ್ಲಿ ಟೇಬಲ್ ಕುಟ್ಟಿ ಅನುದಾನ ತರುತ್ತೇನೆ ಎಂದಿದ್ದವರು ಈಗ ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.

ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನವಿಲ್ಲ

ಕಾಂಗ್ರೆಸ್ ಯುವ ಘಟಕದ ತಾಲೂಕು ಅಧ್ಯಕ್ಷ ಪುನೀತ್ ಗೌಡ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಕ್ರೀಡಾಂಗಣ ಉಳಿಯಲು ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರ ಹೋರಾಟವೇ ಕಾರಣ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ವೆಂಕಟರಮಣಯ್ಯ ಅವರು ಸಚಿವರನ್ನು ಭೇಟಿ ಮಾಡಿ ಜಿಲ್ಲಾಸ್ಪತ್ರೆ ಮಂಜೂರಾತಿಗೆ ನಿರಂತರ ಪ್ರಯತ್ನ ನಡೆಸಿದ್ದರು. ಆದರೆ ಈಗಿನ ಶಾಸಕರು ಜಿಲ್ಲಾಸ್ಪತ್ರೆ ನಿರ್ಮಾಣಕ್ಕಾಗಿ ಯಾವುದೇ ಸಚಿವರನ್ನು ಭೇಟಿ ಮಾಡಿಲ್ಲ. ಪತ್ರ ಬರೆದಿದ್ದೇನೆ ಎನ್ನುವುದರಿಂದ ಕೆಲಸ ಆಗುವುದಿಲ್ಲ, ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಟೀಕಿಸಿದರು.

ನಗರದ ರಸ್ತೆಗಳ ದುಸ್ಥಿತಿಯನ್ನೂ ಉಲ್ಲೇಖಿಸಿದ ಅವರು, ನಗರಸಭೆಯಲ್ಲಿ ಶಾಸಕರ ಪಕ್ಷವೇ ಅಧಿಕಾರದಲ್ಲಿದ್ದರೂ ರಸ್ತೆಗಳ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.

ಶಂಕುಸ್ಥಾಪನೆಯೇ ಅಭಿವೃದ್ಧಿಯೇ?

ನೇಕಾರರ ಸೀರೆ ಮಾರಾಟ ಮಳಿಗೆ ನಿರ್ಮಾಣಕ್ಕಾಗಿ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರು 10 ಗುಂಟೆ ಜಾಗ ಮಂಜೂರು ಮಾಡಿಸಿದ್ದರು. ಎರಡು ಬಾರಿ ಭೂಮಿಪೂಜೆ ನಡೆದಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಶಂಕುಸ್ಥಾಪನೆ ಮತ್ತು ಭೂಮಿಪೂಜೆಯನ್ನೇ ಅಭಿವೃದ್ಧಿ ಎಂದು ಬಿಂಬಿಸುವುದು ಸರಿಯಲ್ಲ ಎಂದು ಶರತ್ ಪಟೇಲ್ ಹೇಳಿದರು.

ಬಾಶೆಟ್ಟಿಹಳ್ಳಿಯ ಕೆಂಪೇಗೌಡರ ಪುತ್ಥಳಿ ವಿಚಾರದಲ್ಲಿ ಸಾರ್ವಜನಿಕರು ಪ್ರಶ್ನೆ ಮಾಡಿರುವುದನ್ನು ಉಲ್ಲೇಖಿಸಿದ ಅವರು, ತಾಂತ್ರಿಕ ಅನುಮತಿ ಪಡೆದು ನಂತರ ಭೂಮಿಪೂಜೆ ನಡೆಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಜೆಡಿಎಸ್ ವಿರುದ್ಧ ವಾಗ್ದಾಳಿ

ಜೆಡಿಎಸ್ ಕುರಿತು ಪ್ರತಿಕ್ರಿಯಿಸಿದ ಶರತ್ ಪಟೇಲ್, “ಜೆಡಿಎಸ್ ಕುಟುಂಬ ರಾಜಕಾರಣದ ಪಕ್ಷವಾಗಿದೆ. ಕುಮಾರಸ್ವಾಮಿ ಮತ್ತು ಅವರ ಕುಟುಂಬ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ. ಬಾಶೆಟ್ಟಿಹಳ್ಳಿ ಚುನಾವಣೆಯಲ್ಲಿ ತಮ್ಮ ಕಾರ್ಯಕರ್ತರನ್ನೇ ಉಳಿಸಿಕೊಳ್ಳಲಾಗದವರು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಬೇಡ” ಎಂದು ಕಿಡಿಕಾರಿದರು.

2028ರ ಅಭ್ಯರ್ಥಿ ಕುರಿತು ಪ್ರತಿಕ್ರಿಯೆ

2028ರ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶರತ್ ಪಟೇಲ್, “ಕಾಂಗ್ರೆಸ್‌ನಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಅಭ್ಯರ್ಥಿ. ಕ್ಷೇತ್ರದಲ್ಲಿಯೇ ಸಮರ್ಥ ನಾಯಕರು ಇದ್ದಾರೆ. ಹೊರಗಿನಿಂದ ಅಭ್ಯರ್ಥಿಯನ್ನು ಕರೆತರುವ ಅಗತ್ಯವಿಲ್ಲ. ಪಕ್ಷ ಯಾರಿಗೆ ಅವಕಾಶ ನೀಡಿದರೂ ಅವರ ಗೆಲುವಿಗಾಗಿ ನಾವು ಕೆಲಸ ಮಾಡುತ್ತೇವೆ” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪುನೀತ್, ಎನ್‌ಎಸ್‌ಯುಐ ಅಧ್ಯಕ್ಷ ಅಶ್ವತ್ ರೆಡ್ಡಿ, ಯುವ ಮುಖಂಡರಾದ ಶಿವಕುಮಾರ್, ಜಯಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ramesh Babu

Journalist

Recent Posts

ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಸ್ಥಳಗಳಿಗೆ ಸಿಇಒ ದಿಢೀರ್ ಭೇಟಿ: ಸ್ಥಳದಲ್ಲೇ ಕ್ಯಾಟ್ ಫಿಶ್, ಹೊಂಡಗಳ ನಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಣೆ ಮಾಡುತ್ತಿದ್ದ ಹೊಂಡಗಳ…

27 minutes ago

ಗೋಮಾಳ ಭೂಮಿಯಲ್ಲಿನ ರೈತರನ್ನು ಒಕ್ಕಲೆಬ್ಬಿಸದಂತೆ ಜಿಲ್ಲಾಧಿಕಾರಿಗೆ ಮನವಿ

ಕೋಲಾರ: ಮೈಸೂರು ಮಹಾರಾಜರ ಕಾಲದಿಂದಲೂ ಸಕ್ಷಮ ಪ್ರಾಧಿಕಾರದಿಂದ ಕಾನೂನುಬದ್ಧವಾಗಿ ರೈತರಿಗೆ ಹಂಚಿಕೆಯಾಗಿರುವ ಸರ್ಕಾರಿ ಗೋಮಾಳ ಹಾಗೂ ಕಂದಾಯ ಭೂಮಿಯಲ್ಲಿನ ರೈತರನ್ನು…

3 hours ago

ವೈಯಕ್ತಿಕ ವಿಚಾರಕ್ಕೆ ಸಿಎಂ ಭೇಟಿ; ತಾಲೂಕಿನ ಹಿತರಕ್ಷಣೆಗಲ್ಲ? ವೆಂಕಟರಮಣಯ್ಯ ವಿರುದ್ಧ ಕಾಡನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮನು ಎನ್ ಆರ್ ಆರೋಪ

ದೊಡ್ಡಬಳ್ಳಾಪುರ: ಅಳಿಯನ ವರ್ಗಾವಣೆ ಸೇರಿದಂತೆ ವೈಯಕ್ತಿಕ ವಿಚಾರಗಳಿಗಾಗಿ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು…

5 hours ago

ಬರ ಘೋಷಣೆ ಬಳಿಕ ಸಿಎಂಗೆ ಮನವಿ: ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನಡೆಗೆ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತರಾಟೆ

ದೊಡ್ಡಬಳ್ಳಾಪುರ: 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಮರು ಜಂಟಿ ಬೆಳೆ…

8 hours ago

ದೊಡ್ಡಬಳ್ಳಾಪುರ ಬರ ಘೋಷಣೆಗೆ ಕ್ರೆಡಿಟ್ ಫೈಟ್: ಸರ್ಕಾರ ಈಗಾಗಲೇ ಬರ ಘೋಷಿಸಿದೆ; ಮತ್ತೆ ಮನವಿ ಏಕೆ?: ವೆಂಕಟರಮಣಯ್ಯಗೆ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತಿರುಗೇಟು

ದೊಡ್ಡಬಳ್ಳಾಪುರ: 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಮರು ಜಂಟಿ ಬೆಳೆ…

8 hours ago

ದೇವನಹಳ್ಳಿ–ದೊಡ್ಡಬಳ್ಳಾಪುರದ ಹಲವು ಗ್ರಾಮಗಳ ಮೇಲೆ KIADB ಕಣ್ಣು: ಕೃಷಿ ಭೂಮಿ ಉಳಿಸಿಕೊಳ್ಳಲು ಮತ್ತೆ ಹೋರಾಟದ ಸದ್ದು

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಕೃಷಿ ಭೂಮಿಯ ಮೇಲೆ ಮತ್ತೊಮ್ಮೆ ಭೂಸ್ವಾಧೀನದ ಆತಂಕ ಆವರಿಸಿದೆ. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳ ವ್ಯಾಪ್ತಿಯಲ್ಲಿ…

10 hours ago