ರೈತರ ಫಲವತ್ತಾದ ಭೂಮಿಗೆ ವೈಜ್ಞಾನಿಕ ದರ ನೀಡುವಂತೆ ಒತ್ತಾಯಿಸಿ ಕಳೆದ ವಾರದಿಂದ ಈವರೆಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೆಐಎಡಿಬಿ ಅಧಿಕಾರಿಗಳು, ಮುಖ್ಯಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನ ಭೇಟಿ ಮಾಡಲಾಗುತ್ತಿದೆ. ರೈತರ ಹೋರಾಟ, ಬೇಡಿಕೆ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಜ.31 ರಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರೈತರ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದೇವೆ. ಫೆ.5ರೊಳಗೆ ಸ್ಪಂದಿಸುವ ಭರವಸೆಯನ್ನು ಕೈಗಾರಿಕಾ ಸಚಿವರು ನೀಡಿದ್ದಾರೆ. ಕೆಐಎಡಿಬಿ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಖುದ್ದು ಕುಮಾರಸ್ವಾಮಿಯವರೇ ರೈತರ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ ಹೇಳಿದರು.
ಕೊನಘಟ್ಟದ ಕಾಮನಬಂಡೆ ಸಮೀಪ ಕೊನಘಟ್ಟ, ನಾಗದೇನಹಳ್ಳಿ, ಕೋಡಿಹಳ್ಳಿ ಹಾಗೂ ಆದಿನಾರಾಯಣಹೊಸಹಳ್ಳಿ ರೈತರು ಕೆಐಎಡಿಬಿ ವಿರುದ್ಧ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಅಧಿಕಾರಿಗಳಿಗೆ ಸಾಕಷ್ಟು ಮನವಿ ಕೊಟ್ಟಾಗ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಡಿನೋಟಿಫೈ ಮಾಡುವ ಅಧಿಕಾರ ನಮಗಿಲ್ಲ. ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಫೆ.1 ರಂದು ಕೈಗಾರಿಕಾ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ದೇವನಹಳ್ಳಿ ರೈತರಿಗೆ ಕೊಟ್ಟ ಮಾದರಿಯಲ್ಲೇ ನಮ್ಮ ರೈತರಿಗೂ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದೇವೆ ಎಂದರು.
ಸಚಿವರ ಬಳಿಗೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಕೂಡ ಬಂದಿದ್ದರು. ಫೆ.5 ರೊಳಗೆ ಅಧಿಕಾರಿಗಳು, ಮುಖಂಡರ ಸಭೆ ಕರೆಯುವ ಭರವಸೆ ನೀಡಿದ್ದಾರೆ. ಒಂದು ವೇಳೆ ನಿಗದಿತ ದಿನದೊಳಗೆ ಸಮಸ್ಯೆ ಇತ್ಯರ್ಥವಾಗದಿದ್ದರೆ ಬೃಹತ್ ಪ್ರತಿಭಟನೆ ನಡೆಸಿ, ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಹರೀಶ್ ಗೌಡ ಎಚ್ಚರಿಸಿದರು.
ವೈಜ್ಞಾನಿಕ ಬೆಲೆ ನೀಡದಿದ್ದರೆ ಶೇ.90 ರಷ್ಟು ರೈತರು ಭೂಮಿ ಕೊಡಲು ಒಪ್ಪುವುದಿಲ್ಲ. ಒಬ್ಬರೋ, ಇಬ್ಬರೋ ಮಾತ್ರ ಪರಿಹಾರ ಪಡೆಯಲು ಕೆಐಎಡಿಬಿ ಅಧಿಕಾರಿಗಳ ಬಳಿ ಹೋದರೆ ಸಾಕಷ್ಟು ರೈತರ ಹೊಟ್ಟೆಗೆ ಹೊಡೆದಂತಾಗುತ್ತದೆ. ಹಾಗಾಗಿ ಎಲ್ಲ ರೈತರು,ಮುಖಂಡರು ಒಗ್ಗಟ್ಟಾಗಿ ಹೋರಾಟ ಮುಂದುವರಿಸಬೇಕು ಎಂದು ಹೇಳಿದರು.
ಕೋಡಿಹಳ್ಳಿ ಭಾಗದಲ್ಲಿ ಕೆಐಎಡಿಬಿಯವರು ದೌರ್ಜನ್ಯ ಮಾಡುತ್ತಿದ್ದಾರೆ. ಮುಂದೆ ಎಲ್ಲ ಹೋಬಳಿಗಳಲ್ಲೂ ಇಂತಹ ಪರಿಸ್ಥಿತಿ ಬರಬಹುದು. ಆದ್ದರಿಂದ ಎಲ್ಲ ರೈತರು, ಸಂಘಟನೆಗಳು, ರಾಜಕೀಯ ಪಕ್ಷಗಳು ರೈತರ ಹೋರಾಟ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ನಂತರ ಮುಖಂಡ ನಾಗದೇನಹಳ್ಳಿ ಆನಂದಮೂರ್ತಿ ಮಾತನಾಡಿ, ಕೆಐಎಡಿಬಿ ದಬ್ಬಾಳಿಕೆಗೆ ನಾವೆಲ್ಲ ನಲುಗಿ ಹೋಗಿದ್ದೇವೆ. ಯಾವುದೇ ಬೆಲೆ ನಿಗದಿ ಮಾಡದೇ ಭೂಮಿ ಸ್ವಾಧೀನ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಭೂಮಿಗೆ ಮಾರುಕಟ್ಟೆ ಬೆಲೆ ನಿಗದಿ ಮಾಡದೇ ನಮ್ಮ ಜಮೀನು ಪಡೆಯಲು ಕೆಐಎಡಿಬಿ ಹಾಗೂ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
ಜೀವನಾಧಾರವಾದ ಭೂಮಿಯನ್ನು ಪ್ರಾಣ ಹೋದರೂ ಕೊಡಲ್ಲ. ಫೆ. 12 ರಿಂದ ಆರಂಭವಾಗುವ ಅಧಿವೇಶನದಲ್ಲಿ ಶಾಸಕರಾದಿಯಾಗಿ ಎಲ್ಲರು ಇದರ ವಿರುದ್ದ ದನಿ ಎತ್ತಬೇಕು. ಅಧಿವೇಶನದಲ್ಲೇ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ಟಿಎಪಿಎಂಸಿಎಸ್ ಮಾಜಿ ಅಧ್ಯಕ್ಷ ಆನಂದ್, ಮಾತನಾಡಿ, ಭೂಸ್ವಾಧೀನ ಕಾಯ್ದೆಯ ಪ್ರಕಾರ ರೈತರ ಭೂಮಿಗೆ ನಾಲ್ಕು ಪಟ್ಟು ಪರಿಹಾರ ನೀಡಬೇಕು. ಇಲ್ಲವಾದರೆ ಭೂಮಿ ಬಿಟ್ಟುಕೊಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರು ಭಾಗವಹಿಸಿದ್ದರು.