ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿ ಪ್ರಯುಕ್ತ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸಮೀಪವಿರುವ ವಿಶ್ವ ಕಲ್ಯಾಣ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿರಾಟ ಪರ್ವ ಅಲಂಕಾರ ಮಾಡಿ, ವಿಶೇಷ ಪೂಜೆ ಕೈಂಕರ್ಯ ಅದ್ಧೂರಿಯಾಗಿ ನಡೆಸಲಾಯಿತು.
ಹೊಸ ವರ್ಷ ಆರಂಭದಲ್ಲೇ ವೈಕುಂಠ ಏಕಾದಶಿ ಸಡಗರ ಮನೆಮಾಡಿದೆ. ಹಿಂದೂ ಪಂಚಾಂಗದ ಪ್ರಕಾರ ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ವೈಕುಂಠ ಏಕಾದಶಿಯ ಶುಭ ಸಂದರ್ಭವನ್ನು ಆಚರಿಸಲಾಗುತ್ತದೆ.
ಈ ದಿನ ವೆಂಕಟೇಶ್ವರ ದೇವಾಲಯಗಳಲ್ಲಿ ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ತಿರುಪತಿ ಮೂಲದಿಂದ ಈ ವಿಗ್ರಹವನ್ನು ತಯಾರಿಸಿಕೊಂಡು ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ತಿರುಪತಿಯಲ್ಲಿ ಸ್ವಾಮಿಗೆ ನಡೆಯುವ ವಿಶೇಷ ಪೂಜೆ ಪುನಸ್ಕಾರ ಇಲ್ಲಿಯೂ ಸಹ ನಡೆಸಲಾಗುತ್ತದೆ ಎಂದು ದೇವಸ್ಥಾನ ಸಂಸ್ಥಾಪಕ ಶ್ರೀಧರ್ ಶರ್ಮ ತಿಳಿಸಿದರು.
ದೇವಸ್ಥಾನದಲ್ಲಿ ಪ್ರತಿ ಅಮಾವಸ್ಯೆ, ಪೂರ್ಣಿಮೆ, ಶನಿವಾರ, ಶ್ರಾವಣ ಶನಿವಾರಗಳದಂದು ವಿಶೇಷ ಪೂಜೆ ನಡೆಸಲಾಗುತ್ತದೆ ಎಂದರು.
ದೇವರಿಗೆ ಮಹಾಮಂಗಳಾರತಿ ನಡೆದ ನಂತರ ಭಕ್ತಾಧಿಗಳಿಗೆ ಲಡ್ಡು ಪ್ರಸಾದ, ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.