
130 ಕಿಲೋ ಮೀಟರ್ ಗಿಂತ ಹೆಚ್ಚು ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಆಗಸ್ಟ್ 1ರಿಂದ ಎಫ್‌ಐಆರ್ ದಾಖಲಾಗಲಿದ್ದು, ರಾಜ್ಯಾದ್ಯಂತ ಈ ಕ್ರಮ ಜಾರಿಯಾಗಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ‘X’ ಖಾತೆಯಲ್ಲಿ ಸಂದೇಶ ಪೋಸ್ಟ್ ಅವರು ಮಾಡಿದ್ದಾರೆ, ‘ಸ್ಪಾಟ್ ವೇಗ ಮತ್ತು ವಿಭಾಗೀಯ ವೇಗ ಇದರ ಆಧಾರದ ಮೇಲೆ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು. ಅಂತಹ ಪ್ರಕರಣಗಳಲ್ಲಿ ₹ 2,000 ವರೆಗೆ ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗು ಸಾಧ್ಯತೆ ಇರುತ್ತದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸುವ ಶೇ 90ರಷ್ಟು ಅಪಘಾತಗಳಿಗೆ ಅತಿ ವೇಗದ ಚಾಲನೆಯೇ ಕಾರಣ ಎಂಬುದು ಸರ್ಕಾರ ವಿವಿಧ ಇಲಾಖೆಗಳ ಮೂಲಕ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಇದಕ್ಕೆ ಕಡಿವಾಣ ಹಾಕಲು ಗಂಟೆಗೆ 130 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ನಿರ್ಲಕ್ಷ್ಯದ ಚಾಲನೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಜುಲೈ 25 ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 155 ವಾಹನಗಳು ಗಂಟೆಗೆ 130 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಸಂಚರಿಸುತ್ತಿದ್ದವು. ಇದರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಸರ್ಕಾರಿ ವಾಹನಗಳು ಸೇರಿವೆ. ಕೆಲವು ವಾಹನಗಳು ಗಂಟೆಗೆ 159 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಎಂದರು.
ಸದ್ಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹತ್ತು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಭಾಗಗಳಲ್ಲಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.