ತಾಲೂಕಿನ ತೂಬಗೆರೆ ಹೋಬಳಿಯ ಕರೇನಹಳ್ಳಿ ಗ್ರಾಮದ ಹೊರವಲಯದಲ್ಲಿ ತನ್ನ ಜಮೀನಿನಲ್ಲಿ ಮಾರ್ಚ್ 09ರ ಮಧ್ಯಾಹ್ನ ಸುಮಾರು 3ಗಂಟೆ ಸಮಯದಲ್ಲಿ ಹೊಂಗೆ ಮರದಡಿಯಲ್ಲಿ ಹೊಂಗೆಕಾಯಿ ಆಯ್ದುಕೊಳ್ಳುತ್ತಿದ್ದ ವೃದ್ಧೆಯ ಮಾಂಗಲ್ಯ ಸರ ಕಿತ್ತು ಕಳ್ಳರು ಪರಾರಿಯಾಗಿದ್ದಾರೆ.
ಸುಮಾರು 72 ವರ್ಷದ ವೃದ್ಧೆ ನಾರಾಯಣಮ್ಮ ತನ್ನ ಜಮೀನಿನಲ್ಲಿದ್ದ ಹೊಂಗೆ ಮರಗಳಡಿಯಲ್ಲಿ ಹೊಂಗೆಕಾಯಿ ಆಯ್ದುಕೊಳ್ಳುವ ಸಮಯದಲ್ಲಿ ಇಬ್ಬರು ಯುವಕರು ಬೈಕ್ ನಲ್ಲಿ ಬಂದಿದ್ದಾರೆ. ಮೊದಲಿಗೆ ಒಬ್ಬ ಸ್ವಲ್ಪ ದೂರದಲ್ಲೇ ಇಳಿದುಕೊಂಡು ಇನ್ನೊಬ್ಬ ಅಜ್ಜಿ ಬಳಿ ಬಂದು ಹೊಂಗೆಕಾಯಿಯನ್ನು ಮರದಿಂದ ಕೀಳುವುದಾಗಿ ಹೇಳಿದ್ದಾನೆ. ಬಳಿಕ ಮರವನ್ನು ಹತ್ತಿ ಸುತ್ತಲೂ ನೋಡಿ ಯಾರೂ ಇಲ್ಲದ ಸಮಯದಲ್ಲಿ ಅಜ್ಜಿಯ ಬಾಯಿಗೆ ಬಟ್ಟೆ ಸುತ್ತಿ ತಾಳಿ, 2 ಲಕ್ಷ್ಮಿ ಕಾಸು, ಕರಿಮಣಿ, ಚಿನ್ನದ ಗುಂಡುಗಳಿದ್ದ 45ಗ್ರಾಂ ತೂಕದ ಮಾಂಗಲ್ಯ ಸರ ಕಸಿದುಕೊಂಡು ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ.
ಘಟನೆ ವಿವರ:
ಅಜ್ಜಿ ಪ್ರತಿದಿನ ತನ್ನ ಬಳಿ ಇದ್ದ ಮೂರು ಮೇಕೆಗಳನ್ನು ಮೇಯಿಸಲು ಅದೇ ಜಾಗಕ್ಕೆ ಬರುತ್ತಿದ್ದರು. ಇದೇ ವೇಳೆ ಹೊಂಗೆಮರದಡಿ ಬೀಳುವ ಕಾಯಿಗಳನ್ನು ಆಯ್ದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ್ದ ಕಳ್ಳರು ಏನ್ ಅಜ್ಜಿ ಇವತ್ತು ಮೇಕೆ ಹೊಡೆದುಕೊಂಡು ಬಂದಿಲ್ಲ ಎಂದು ಅಜ್ಜಿಯನ್ನು ಮಾತಿಗಿಳಿಸಿದ್ದಾರೆ. ಅಜ್ಜಿಯನ್ನು ಮಾತಿನ ಬಲೆಗೆ ಬೀಳಿಸಿ ಒಳ್ಳೆಯ ಹುಡುಗರಂತೆ ನಟಿಸಿ ಅಜ್ಜಿಯ ಮನ ಗೆದ್ದಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ
ಖದೀಮರು ಕೃತ್ಯವನ್ನು ಎಸಗಿದ್ದಾರೆ.
ನಂತರ ಸುದ್ದಿಯನ್ನು ತನ್ನ ಗಂಡನಿಗೆ ತಿಳಿಸಿ ಅಜ್ಜಿ ಕೂಡಲೇ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇತ್ತೀಚಿಗೆ ತಾಲೂಕು ಹಾಗೂ ನಗರದಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಕಸಿಯಲು ಇಳಿದಿರುವ ಕಳ್ಳರು.