ವೃದ್ಧೆ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ಅರಳುಮಲ್ಲಿಗೆ ಬಳಿ ಇಂದು ಮಧ್ಯಾಹ್ನ ನಡೆದಿದೆ.
ಯಶೋಧಮ್ಮ (75), ಚಿನ್ನದ ಮಾಂಗಲ್ಯ ಸರ ಕಳೆದುಕೊಂಡ ವೃದ್ಧೆ.
ಪೆಟ್ಟಿ ಅಂಗಡಿಯಲ್ಲಿ ವೃದ್ಧೆ ತನ್ನ ಪಾಡಿಗೆ ತಾನು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಅಜ್ಜಿಯ ಕೊರಳಲ್ಲಿ ಸುಮಾರು 100 ಗ್ರಾಂ ಮಾಂಗಲ್ಯ ಸರ ಇತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಖದೀಮರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೈಕ್ ನಲ್ಲಿ ಅಂಗಡಿ ಬಳಿ ಬರುತ್ತಾರೆ. ಅಂಗಡಿ ಬಳಿ ಬಂದು 10 ರೂಪಾಯಿ ಕೊಟ್ಟು 5 ರೂಪಾಯಿಯ ಚಾಕಲೇಟ್ ಖರೀದಿ ಮಾಡುತ್ತಾರೆ. ಇನ್ನು 5 ರೂಪಾಯಿ ಚಿಲ್ಲರೆ ವಾಪಸ್ ಕೊಡಲು ಅಜ್ಜಿ ಬಂದಾಗ ಕಳ್ಳರು ನೇರವಾಗಿ ಅಜ್ಜಿಯ ಕೊರಳಿಗೆ ಕೈ ಹಾಕಿ ಚೈನ್ ಕದಿಯಲು ಮುಂದಾಗುತ್ತಾರೆ. ಅಜ್ಜಿ ಕೂಡಲೇ ಎಚ್ಚೆತ್ತುಕೊಂಡು ತನ್ನ ಚೈನನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾರೆ. ಯಶೋಧಮ್ಮ ಕೊರಳಿನಿಂದ ಸರವನ್ನ ಕಿತ್ತಿಕೊಳ್ಳುವಾಗ ಸರ ತುಂಡಾಗಿ, ಅರ್ಧ ಸರ ಮಾತ್ರ ಕಳ್ಳರಿಗೆ ಕೈಗೆ ಸಿಕ್ಕಿದೆ ಎನ್ನಲಾಗಿದೆ.
ಆಗ 100 ಗ್ರಾಂ ಚಿನ್ನದ ಸರದಲ್ಲಿ 50ಗ್ರಾಂ ಚಿನ್ನದ ಸರ ಮಾತ್ರ ಕಳ್ಳರಿಗೆ ಸಿಕ್ಕಿದೆ ಎನ್ನಲಾಗಿದೆ..
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ…
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…