‘ವೀರ ಸಾವರ್ಕರ್’ ಮೇಲ್ಸೇತುವೆ ನಾಮಫಲಕಕ್ಕೆ ಮಸಿ ಬಳಿದ NSUI ಕಾರ್ಯಕರ್ತರು: ಘಟನೆ ಖಂಡಿಸಿ ಶಾಸಕ ಎಸ್.ಆರ್.ವಿಶ್ವನಾಥ್ ಪ್ರತಿಭಟನೆ
ಯಲಹಂಕ ಉಪನಗರದಲ್ಲಿರುವ ವೀರ ಸಾವರ್ಕರ್ ಮೇಲ್ಸೇತುವೆಗೆ NSUI ಕಾರ್ಯಕರ್ತರು ಮಸಿ ಬಳಿದಿರುವ ಪ್ರಕರಣ ನಡೆದಿದೆ.
ಇಂದು ಬೆಳಗ್ಗೆ ಟ್ರಾಫಿಕ್ ಬ್ಲಾಕ್ ಮಾಡಿ ಮೇಲ್ಸೇತುವೆ ನೇಮ್ ಬೋರ್ಡ್ ಗೆ ಮಸಿ ಬಳಿಯಲಾಗಿದೆ. ವೀರ ಸಾವರ್ಕರ್ ಹೆಸರಿಗೆ ಮಸಿ ಬಳಿದು ಭಗತ್ ಸಿಂಗ್ ಹೆಸರಿಡಲು NSUI ಕಾರ್ಯಕರ್ತರು ಬೇಡಿಕೆಯನ್ನು ಇಟ್ಟಿದ್ದಾರೆ.
ವೀರ ಸಾವರ್ಕರ್ ಮೇಲ್ಸೇತುವೆಗೆ ಮಸಿ ಬಳಿದಿರುವುದನ್ನು ಖಂಡಿಸಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಬಿಜೆಪಿ ಕಾರ್ಯಕರ್ತರು, ಭಜರಂಗದಳ ಮುಖಂಡರು ಯಲಹಂಕ ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.
ವೀರ ಸಾವರ್ಕರ್ ಇತಿಹಾಸವನ್ನು ಕಾಂಗ್ರೆಸ್ ನವರು ತಿಳಿದುಕೊಳ್ಳಲಿ. ಕಾಂಗ್ರೆಸ್ ನಾಯಕರ ಫೋಟೋಗಳು ಯಲಹಂಕದಲ್ಲಿವೆ. ನಾವು ಯಾವುದೇ ಆ ಫೋಟೋಗಳಿಗೆ ಮಸಿ ಬಳಿದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮಸಿ ಬಳಿದವರಲ್ಲಿ ಮೂರು ಜನರನ್ನ ಬಂಧನ ಮಾಡಲಾಗಿದೆ. ಉಳಿದವರನ್ನು ಶೀಘ್ರವಾಗಿ ಬಂಧನ ಮಾಡಬೇಕು ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ. ಸ್ವಯಂ ಪ್ರೇರಿತವಾಗಿ ಯಲಹಂಕ ಬಂದ್ ಕೂಡ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಶೀಘ್ರವಾಗಿ ಹೆಸರು ಸರಿಪಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಶಾಸಕ ಎಸ್.ಆರ್.ವಿಶ್ವನಾಥ್ ಅವರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ದೌಡಾಯಿಸಿ, ಮಸಿ ತೆರವುಗೊಳಿಸಿ ಹೆಸರು ಸರಿಪಡಿಸಿದರು.