ವೀರ ಯೋಧರ ಸಾಹಸಗಾಥೆ ಎಲ್ಲ ಯುವಜನರಿಗೆ ಆದರ್ಶವಾಗಬೇಕು. ನಮ್ಮ ದೇಶದ ಅನನ್ಯತೆ, ಸಾರ್ವಭೌಮತೆಯ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಬೇಕು ಎಂದು ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ ಎಂದು ಹೇಳಿದರು.
ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಬುಧವಾರ ಕಾರ್ಗಿಲ್ ವಿಜಯ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿಕಟಪೂರ್ವ ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ದೇಶದ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ವೀರಯೋಧರ ತ್ಯಾಗಜೀವನ ನಮಗೆ ಮಾದರಿಯಾಗಬೇಕು. ಯುವಜನತೆ ದೇಶಭಕ್ತಿಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಯುದ್ದೋನ್ಮಾದ ಇಂದು ಜಗತ್ತನ್ನು ಆವರಿಸಿದೆ. ಮಾನವೀಯ ಪ್ರಜ್ಞೆಗೆ ಮಾರಕವಾಗಿರುವ ಯುದ್ದಸಂಸ್ಕೃತಿ ಜಾಗತಿಕವಾಗಿ ದೂರಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಎಂ.ಚಿಕ್ಕಣ್ಣ ಮಾತನಾಡಿ, ನಮ್ಮ ಯೋಧರ ತ್ಯಾಗ ಜೀವನ ನಮಗೆ ಅಮರ ಸಂದೇಶವನ್ನು ನೀಡುತ್ತದೆ. ಎಂತಹುದೇ ಸಂದರ್ಭದಲ್ಲಿ ಎದೆಯುಬ್ಬಿಸಿ ನಿಂತು ತಾಯ್ನೆಲವನ್ನು ರಕ್ಷಿಸುವ ಆ ಅನನ್ಯ ಜೀವಗಳಿಗೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.
ಈ ವೇಳೆ ಉಪಪ್ರಾಂಶುಪಾಲ ಪ್ರೊ.ಕೆ.ದಕ್ಷಿಣಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಕೆ.ಸಿ.ಲಕ್ಷ್ಮೀಶ, ಪ್ರಾಧ್ಯಾಪಕಿ ಪಿ.ಚೈತ್ರ, ಐಐಕ್ಯೂಎ ಸಂಯೋಜಕಿ ಎನ್.ದಿವ್ಯಾ, ಔದ್ಯೋಗಿಕ ಕೌಶಲ ತರಬೇತುದಾರ ಬಾಬು ಸಾಬಿ, ಡಾ.ತಾವರೆನಾಯ್ಕ್, ಉಷಾಶ್ರೀ ಮತ್ತಿತರರು ಉಪಸ್ಥಿತರಿದ್ದರು.