ದೇವನಹಳ್ಳಿ : ಮಕ್ಕಳಿಗೆ ಪಾಠ-ಪ್ರವಚನ, ಶಿಸ್ತು-ಸಂಯಮ ಕಲಿಸಿಕೊಡುವ ಶಾಲಾ ಆಡಳಿತ ಮಂಡಳಿಯ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಬಣ್ಣಬಣ್ಣದ ಮಾತುಗಳಿಂದ ಮರುಳು ಮಾಡಿರುವ ಶಾಲಾ ಮಾಲೀಕರು, ಕಂಟ್ರಾಕ್ಟರ್ ಗೆ ಬರೋಬರಿ 1.75 ಕೋಟಿ ವಂಚಿಸಿರುವ ಆರೋಪ ಕೇಳಿಬಂದಿದೆ. ಹಣ ಕೇಳಲು ಹೋದರೆ ಜೀವ ಬೇದರಿಕೆ ಹಾಕಿರುವುದ್ದಲ್ಲದೆ, ಜಾತಿ ನಿಂದನೆ ಕೂಡ ಮಾಡಿದ್ದಾರೆಂದು ಕಂಟ್ರಾಕ್ಟರ್ ವಿಶ್ವನಾಥಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯಲಹಂಕದ ಎಸ್ .ರಾಜರೆಡ್ಡಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದು, ಕಟ್ಟಡ ನಿರ್ಮಾಣದ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದಾರೆ. 2022ರ ಮಾರ್ಚ್ 26ರಂದು ದೇವನಹಳ್ಳಿಯ ವಿಶ್ವನಾಥಪುರದ ಬಳಿಯ ವಿಹಾನ್ ಶಾಲೆಯ ಮಾಲೀಕ ಪ್ರತಾಪ್ ಯಾದವ್ ರಾಜರೆಡ್ಡಿಯವರನ್ನ ಭೇಟಿಯಾಗುತ್ತಾರೆ. ಶಾಲಾ ಕಟ್ಟಡವನ್ನ ಕಟ್ಟಿಸಿಕೊಂಡುವಂತೆ ಮನವಿ ಮಾಡುತ್ತಾರೆ. ದೊಡ್ಡ ಕೆಲಸದಿಂದ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತೆಂಬ ಆಸೆಯಲ್ಲಿ ರಾಜರೆಡ್ಡಿ ಕಟ್ಟಡವನ್ನ ನಿರ್ಮಾಣ ಮಾಡುತ್ತಾರೆ. ಶಾಲಾ ಕಟ್ಟಡ ನಿರ್ಮಾಣವಾದ ನಂತರ ಬಾಕಿ ಕೂಲಿ ಹಣ ಕೇಳಲು ಹೋದರೆ ಕಟ್ಟಡ ಹಣ ಕೊಡೋದಿಲ್ಲ, ಏನು ಬೇಕೋ ಅದನ್ನ ಮಾಡ್ಕೋ ಅಂತಾ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ವಿಹಾನ್ ಶಾಲೆಯವರು ರಾಜರೆಡ್ಡಿ 1.75 ಕೋಟಿ ಕೂಲಿ ಹಣವನ್ನ ಕೊಡದೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ರಾಜರೆಡ್ಡಿಯವರ ಬೆಂಬಲಕ್ಕೆ ದಲಿತ ಸಂಘಟನೆಗಳು ನಿಂತಿವೆ. ವಿಶ್ವನಾಥಪುರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಸಂಘಟನೆಗಳು ರಾಜರೆಡ್ಡಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.
ಹಣ ವಂಚನೆ ಮಾಡಿರುವ ವಿಹಾನ್ ಶಾಲೆಯ ವಿರುದ್ಧ ದೂರು ನೀಡಿರುವ ಸಂಘಟನೆಗಳು, ಬಾಕಿ ಹಣ ಕೊಡದಿದ್ದಲ್ಲಿ ವಿಹಾನ್ ಶಾಲೆಯ ಮುಂದೆ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನ ಸಹ ನೀಡಿದ್ದಾರೆ.
ವಿಹಾನ್ ಶಾಲೆ ಮಾಲೀಕರಿಂದ ವಂಚನೆಗೊಳಗಾದ ರಾಜರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿ, ಮೊದಲಿನ ಕಂಟ್ರಾಕ್ಟರ್ ವಿಹಾನ್ ಶಾಲೆಯ ಕಟ್ಟಡವನ್ನ ಅರೆಬರೆ ಕೆಲಸ ಮಾಡಿ ಬಿಟ್ಟು ಹೋಗಿದ್ದರು. ಶೀಟ್ ನಂತಿದ್ದ ಶಾಲಾ ಕಟ್ಟಡವನ್ನ ಸುಂದರವಾದ ಕಟ್ಟಡವಾಗಿ ನಿರ್ಮಾಣ ಮಾಡಿದ್ದೇನೆ. ಕೂಲಿಯಾಳುಗಳ ಕೂಲಿಗಾಗಿ 3.5 ಕೋಟಿ ಖರ್ಚಾಗಿದ್ದು, ಇದರಲ್ಲಿ ಕೇವಲ 1.5 ಕೋಟಿ ಹಣವನ್ನು ನೀಡಿದ್ದಾರೆ. ಇನ್ನುಳಿದ 1.75 ಕೋಟಿ ಹಣವನ್ನ ನೀಡದೆ ದೌರ್ಜನ್ಯ ಮಾಡುತ್ತಿದ್ದಾರೆ. ಸಾಲ ಮಾಡಿದ ಹಣದಲ್ಲಿ ಕೂಲಿಯಾಳುಗಳಿಗೆ ಕೂಲಿ ನೀಡಿ ಕಟ್ಟಡದ ಕೆಲಸ ಮುಗಿಸಿದ್ದೇನೆ. ಈಗ ಸಾಲಗಾರರು ನನ್ನ ಮನೆಗೆ ಬಂದು ಸಾಲದ ಹಣ ಕೇಳುತ್ತಿದ್ದಾರೆಂದು ತಮ್ಮ ನೋವು ತೋಡಿಕೊಂಡರು.