ತಾಲೂಕಿನ ಪುರಷನಹಳ್ಳಿಯಲ್ಲಿರುವ ಶ್ರೀ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆ ಸಮೀಪವಿರುವ ತೋಟದಲ್ಲಿ ತೆಂಗಿನಕಾಯಿ ತರಲು ಹೋದಾಗ ವಿಷಜಂತು ಕಚ್ಚಿ ಹತ್ತನೇ ತರಗತಿ ವಿದ್ಯಾರ್ಥಿ ದೇವರಾಜ್(15) ಮೃತಪಟ್ಟ ಘಟನೆ ನಡೆದಿದೆ.
ಬಾಲಕನ ಸಾವಿಗೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತ ಬಾಲಕನ ಪೋಷಕರು, ಪುರುಷನಹಳ್ಳಿ ಹಾಗೂ ಸುತ್ತಮುತ್ತ ಗ್ರಾಮಸ್ಥರು ಶಾಲಾ ಆವರಣದಲ್ಲೇ ಬಾಲಕನ ಶವ ಇರಿಸಿ ಪ್ರತಿಭಟನೆ ನಡೆಸಿದರು.
ಇತ್ತ ಸುಮಾರು 4 ಗಂಟೆಗೂ ಹೆಚ್ಚೂ ಕಾಲ ಶವ ಇರಿಸಿ ಪ್ರತಿಭಟನೆ ನಡೆಸಿದರೂ ಆಡಳಿತ ಮಂಡಳಿಯ ಯಾರೊಬ್ಬರೂ ಕ್ಯಾರೆ ಎನ್ನದಿರುವುದು ಪ್ರತಿಭಟನೆಕಾರರ ಕಿಚ್ಚು ಹೆಚ್ಚಿಸಿತು.
ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಮುಂದಾದರು. ಇದಕ್ಕೆ ಸೊಪ್ಪು ಹಾಕದ ಪ್ರತಿಭಟನಾಕಾರರು ಆಡಳಿತ ಮಂಡಳಿಯವರು ಸ್ಥಳಕ್ಕೆ ಬರಲೇ ಬೇಕು. ಅಲ್ಲಿಯವರೆಗೆ ಶವ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಮಠದ ವತಿಯಿಂದ 2ಲಕ್ಷ ಹಿಡುಗಂಟು ನೀಡುವ ಭರವಸೆ ನೀಡಿದ್ದಾರೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಕುಮಾರ್ ಅವರು ಪ್ರತಿಭಟನಾಕಾರರಿಗೆ ತಿಳಿಸಿದರು. ಆಗ ಮತ್ತಷ್ಟು ಕುಪಿತರಾದ ಜನರು, ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ನಿರ್ಲಕ್ಷ್ಯ ತೋರಿದ ಶಾಲೆಯ ಸಿಬ್ಬಂದಿ ವಿರುದ್ಧ ಕಠಿಣ ಜರುಗಿಸಬೇಕು, ಶಾಲಾ ವಿದ್ಯಾರ್ಥಿಗಳಿಂದ ಕೆಲಸ ಮಾಡಿಸುವ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಘಟನೆ ಹಿನ್ನೆಲೆ
ಆ.27(ಮಂಗಳವಾರ)ರಂದು ಎಂದಿನಂತೆ ಬೆಳಗ್ಗೆ 9ಗಂಟೆಗೆ ಸಮವಸ್ತ್ರ ಧರಿಸಿ ಶಾಲೆಗೆ ಬಂದಿದ್ದ, ಶಾಲೆಗೆ ಬಂದ ಕೂಡಲೇ ಶಾಲೆಯ ಹಿಂಭಾಗದಲ್ಲಿರುವ ತೆಂಗಿನ ತೋಟದಲ್ಲಿ ತೆಂಗಿನಕಾಯಿ ತರಲು ಹೋದಾಗ ವಿಷಜಂತು ಕಚ್ಚಿದೆ. ಕೂಡಲೇ ಈ ವಿಚಾರವನ್ನು ಬೆಳಗ್ಗೆ 9:30ಕ್ಕೆ ಫೋನ್ ಕರೆ ಮೂಲಕ ಪೋಷಕರಿಗೆ ತಿಳಿಸಲಾಗಿದೆ.
ಕೂಡಲೇ ಪೋಷಕರು ಅಸ್ವಸ್ತಗೊಂಡಿದ್ದ ಬಾಲಕನನ್ನು ನಾಟಿ ಔಷಧಿಯನ್ನು ಕೊಡಿಸಿದ್ದಾರೆ. ನಾಟಿ ಔಷಧಿಯ ಚಿಕಿತ್ಸೆ ಯಿಂದ ಯಾವುದೇ ಪ್ರಯೋಜನ ಆಗದ ಹಿನ್ನೆಲೆ ಇಂದು ಮುಂಜಾನೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ವೈದ್ಯರ ಪ್ರಾಥಮಿಕ ವರದಿ ಪ್ರಕಾರ, ಬಾಲಕನಿಗೆ ವಿಷಜಂತು ಕಚ್ಚಿರುವುದಾಗಿ ತಿಳಿದುಬಂದಿದೆ.
ಮೃತ ಬಾಲಕನ ಸ್ವಂತ ಊರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಗ್ರಾಮದವನು. ತಾಲೂಕಿನ ಐಯ್ಯನಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸ ಮಾಡಿಕೊಂಡು ಪುರಷನಹಳ್ಳಿಯ ಶ್ರೀ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
ಇದೀಗ ಮಗನನ್ನು ಕಳೆದುಕೊಂಡ ತಂದೆ ತಾಯಿಯ ರೋಧನೆ ಮುಗಿಲು ಮುಟ್ಟಿದೆ.