
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಮಂಗಳವಾರ ಸಂಜೆ 4.40ರಿಂದ 5 ಗಂಟೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಸುಮಾರು 5ರಿಂದ 7 ಕಿಲೋ ಮೀಟರ್ ವರೆಗೆ ಜಂಬೂ ಸವಾರಿ ಸಾಗಿತು.

ಸತತ 4ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ‘ಅಭಿಮನ್ಯು’ ಹೊತ್ತು ಸಾಗಿದೆ. ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡಿವೆ.

ಅರಮನೆಯಿಂದ ಬನ್ನಿಮಂಟಪದವರೆಗೆ ಈ ಜಂಬೂಸವಾರಿ ಸಾಗಿತು. ಈ ವೇಳೆ ಜಂಬೂಸವಾರಿಯಲ್ಲಿ 49 ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿವೆ.

ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಅರಮನೆ ವೇದಿಕೆಯತ್ತ ಬಂದು ನಿಂತ ಬಳಿಕ ಮೊದಲು ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು. ತಕ್ಷಣವೇ 21 ಕುಶಾಲತೋಪುಗಳನ್ನು ಸಿಡಿಸುವ ಮೂಲಕ ಗೌರವವನ್ನು ಅರ್ಪಿಸಲಾಯಿತು. ಇದಾದ ಬಳಿಕ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಅರಮನೆ ಅಂಗಳದಿಂದ ಬನ್ನಿಮಂಟಪದತ್ತ ಪ್ರಯಾಣ ಬೆಳೆಸಿದ. ಈ ವೇಳೆ ಲಕ್ಷ್ಮಿ ಹಾಗೂ ವಿಜಯ ಆನೆಗಳು ಕುಮ್ಕಿ ಆನೆಗಳಾಗಿ ಅಂಬಾರಿಯ ಎಡ-ಬಲದಲ್ಲಿ ಸಾಗಿದರೆ, ಗಜಪಡೆಯ ಹಿರಿಯಣ್ಣ, ಮಾಜಿ ಕ್ಯಾಪ್ಟನ್ ಅರ್ಜುನ ನಿಶಾನೆ ಆನೆಯಾಗಿ, ಧನಂಜಯ ನೌಫತ್ ಆನೆಯಾಗಿ ಮತ್ತು ಇನ್ನುಳಿದವು ಸಾಲಾನೆಯಾಗಿ ಪಾಲ್ಗೊಂಡು ಗಮನ ಸೆಳೆದವು.
ಇನ್ನು ಅಂಬಾರಿ ಜತೆ 200 ಮಂದಿ ರಾಜ ಪರಿವಾರದ ಧಿರಿಸಿನೊಂದಿಗೆ ಸಾಗಿದ್ದು ಮತ್ತೊಂದು ಆಕರ್ಷಣೆಯಾಗಿತ್ತು.