ವಿಶ್ವ ಮಹಿಳಾ ದಿನಾಚರಣೆಯಂದೇ ಒಂದಾದ ದಂಪತಿ: ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಯನ್ನು ಒಂದಾಗಿಸಿದ ಲೋಕ ಅದಾಲತ್

ದಾಂಪತ್ಯ ಜೀವನದಲ್ಲಿ ಬಿರುಕು ಕಂಡು ವಿಚ್ಛೇದ ಪಡೆಯುವ ಸಲುವಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಎರಡು ಜೋಡಿಯನ್ನು ಇದೀಗ ಲೋಕ ಅದಾಲತ್ ಒಂದುಗೂಡಿಸಿದೆ.

ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಯನ್ನು ಒಂದು ವರ್ಷ ನಂತರ ಮತ್ತೆ ಒಂದುಗೂಡಿಸಿದ ಪ್ರಕರಣ ನಗರದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಅಡಿಷನಲ್‌ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ಪ್ರವೀಣ್ ಆರ್.ಜೆ.ಎಸ್ ಅವರ ಸಮ್ಮುಖದಲ್ಲಿ ನಡೆಯಿತು.

ನಾಗಮಣಿ.ಆರ್ ಹಾಗೂ ಹನುಮಂತರಾಜು.ಎನ್ 2018ರಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿರುತ್ತಾರೆ.

ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮದ ಹನುಮಂತರಾಜು.ಎನ್ ಮತ್ತು ನಾಗಮಣಿ.ಆರ್ ಕೌಟಿಂಬಿಕ ಕಲಹದಿಂದ 2024 ರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಶನಿವಾರ ನಡೆದ ಜನತಾ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರಾದ ಪ್ರವೀಣ್ ಆರ್.ಜೆ ಅವರು, ದಂಪತಿ ಹಾಗೂ ಅವರ ಸಂಬಂಧಿಕರು ಮತ್ತು ವಕೀಲರೊಂದಿಗೆ ಸಮಾಲೋಚಿಸಿ ಸಂಧಾನ ನಡೆಸಿ, ದಂಪತಿಗಳು ವಿಚ್ಛೇದನಕ್ಕೆ ನೀಡಿದ ಅರ್ಜಿ ಹಿಂಪಡೆದು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುವುದಾಗಿ ಒಪ್ಪಿದ ಕಾರಣ ನ್ಯಾಯಮೂರ್ತಿಗಳು ನ್ಯಾಯಾಲಯದ ಕೊಠಡಿಯಲ್ಲೇ ದಂಪತಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಒಂದುಗೂಡಿಸಿದರು.

ನ್ಯಾಯಾಧೀಶ ಪ್ರವೀಣ್ ಆರ್.ಜೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದ್ದು, ವಿಚ್ಛೇದನ ಪಡೆಯುವ ಸಂಖ್ಯೆಯೂ ಅಧಿಕವಾಗುತ್ತಿರುವುದು ಬೇಸರದ ಸಂಗತಿ. ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ ಶಾಂತಿ ಸುವ್ಯವಸ್ಥೆ ಅತ್ಯವಶ್ಯಕ ಎಂದರು.

ಸಣ್ಣ ಪುಟ್ಟ ವ್ಯಾಜ್ಯಗಳಿಂದ ಮನಸ್ಸುಗಳನ್ನು ಕೆಡಿಸಿಕೊಳ್ಳುವ ಬದಲು ಎಲ್ಲರೂ ಹೊಂದಾಣಿಕೆಯ ಜೀವನ ನಡೆಸಿದರೆ ಇಂತಹ ಘಟನೆಗಳು ನಡೆಯುವುದಿಲ್ಲ. ವಿಚ್ಛೇದನಕ್ಕೆ ಮುಂದಾಗಿರುವ ದಂಪತಿಗೆ ಈ ಪ್ರಕರಣ ಒಂದು ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.

ಸುಮಾರು 6 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ‌ 2024ರಲ್ಲಿ ವಿಚ್ಚೇದನ ಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. ಈ ದಂಪತಿ ಗಂಡು ಇದ್ದು, ಆ ಮಗುವಿನ ಭವಿಷ್ಯ ಹಿತದೃಷ್ಟಿಯಿಂದ, ಈ‌ ದಂಪತಿಯನ್ನು ಒಂದು ಮಾಡಲು ತೀರ್ಮಾನಿಸಿ ಲೋಕ್ ಅದಾಲತ್ ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಸಂದಾನ ನಡೆಸಿ ಜೊತೆಗೂಡಿಸಲಾಗಿದೆ ಎಂದು ಮಹಿಳಾ ಪರ ವಕೀಲ ವೆಂಕಟಾಚಲಪತಿ ತಿಳಿಸಿದರು.

ಈ ವೇಳೆ ದೊಡ್ಡಬಳ್ಳಾಪುರ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಮೇಶ್ ದುರುಗಪ್ಪ ಏಕಬೋಟೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಶಿಲ್ಪಾ ಹೆಚ್.ಎ, 2ನೇ ಅಪರ ಸಿವಿಲ್ ನ್ಯಾಯಾಧೀಶರು ಜೆ.ಎಂ. ಎಫ್.ಸಿ. ರವಿ ಬೆಟಗಾರ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿ. ಎಂ, ಉಪಾಧ್ಯಕ್ಷ ಎಂ. ಆರ್. ಸುರೇಶ್, ಕಾರ್ಯದರ್ಶಿ ಎ. ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *